ADVERTISEMENT

ಧರ್ಮಸ್ಥಳದಲ್ಲಿ ನಾಳೆ ಶಿವರಾತ್ರಿ ವೈಭವ: ಅಹೋರಾತ್ರಿ ಶಿವಪಂಚಾಕ್ಷರಿ ಪಠಣ, ಕಲಾಸೇವೆ

ಧರ್ಮಸ್ಥಳದಲ್ಲಿ ನಾಳೆ ಶಿವರಾತ್ರಿ ವೈಭವ, ಪಾದಯಾತ್ರಿಗಳ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:43 IST
Last Updated 14 ಫೆಬ್ರುವರಿ 2026, 7:43 IST
ರಾಜ್ಯದ ವಿವಿಧೆಡೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿರುವ ಯಾತ್ರಿಗಳು ಚಾರ್ಮಾಡಿ ಮಾರ್ಗವಾಗಿ ಶುಕ್ರವಾರ ಸಾಗಿ ಬಂದ ದೃಶ್ಯ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್ 
ರಾಜ್ಯದ ವಿವಿಧೆಡೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿರುವ ಯಾತ್ರಿಗಳು ಚಾರ್ಮಾಡಿ ಮಾರ್ಗವಾಗಿ ಶುಕ್ರವಾರ ಸಾಗಿ ಬಂದ ದೃಶ್ಯ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್    

ಉಜಿರೆ (ದಕ್ಷಿಣ ಕನ್ನಡ): ಶಿವರಾತ್ರಿ ಅಂಗವಾಗಿ ಭಾನುವಾರ ಧರ್ಮಸ್ಥಳಕ್ಕೆ ನಾಡಿನೆಲ್ಲೆಡೆಯಿಂದ ಸುಮಾರು ಐವತ್ತು ಸಾವಿರ ಪಾದಯಾತ್ರಿಗಳು ಬರುವುದಾಗಿ ಖಚಿತಪಡಿಸಿದ್ದು, ಅವರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಧರ್ಮಸ್ಥಳದ ಸಾಕೇತ, ಗಂಗೋತ್ರಿ, ಎಸ್‌ಡಿಎಂ ಪ್ರೌಢಶಾಲೆ, ಅಮೃತವರ್ಷಿಣಿ ಸಭಾಭವನ ಹಾಗೂ ಉಜಿರೆಯಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿಶ್ರಾಂತಿ, ವಸತಿಗೆ ವ್ಯವಸ್ಥೆ ಮಾಡಲಾಗಿದೆ.

ಕ್ಷೇತ್ರದ ಮುಖ್ಯ ಪ್ರವೇಶದ್ವಾರದ ಬಳಿ ಸ್ವಾಗತ ಕಚೇರಿ ತೆರೆದಿದ್ದು, ಮಾಹಿತಿ ಕೇಂದ್ರ, ಉಚಿತ ವೈದ್ಯಕೀಯ ಚಿಕಿತ್ಸೆ, ಪಾನೀಯ ವಿತರಣೆ, ಪೊಲೀಸ್ ಚೌಕಿ, ಆಂಬುಲೆನ್ಸ್ ಸೇವೆ ಲಭ್ಯವಿವೆ. ಉಜಿರೆಯ ಎಸ್‌ಡಿಎಂ ಆಸ್ಪತ್ರೆ ವತಿಯಿಂದ ಚಾರ್ಮಾಡಿ, ಮುಂಡಾಜೆ, ಉಜಿರೆ, ಬೂಡುಜಾಲುಗಳಲ್ಲಿ ಉಚಿತ ಚಿಕಿತ್ಸೆಗೆ ಕ್ರಮವಹಿಸಲಾಗಿದೆ. 

ADVERTISEMENT

ಸ್ವಚ್ಛತೆಯೊಂದಿಗೆ ನಿರಂತರ ನೀರು ಸರಬರಾಜು ಹಾಗೂ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಡಾ.ಪಂಚಾಕ್ಷರಿ ನೇತೃತ್ವದಲ್ಲಿ ವೈದ್ಯರು ಧರ್ಮಸ್ಥಳದಲ್ಲಿ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ.

ಪಾದಯಾತ್ರಿಗಳು ತಂಗುವ ಸ್ಥಳದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೇತೃತ್ವದಲ್ಲಿ ಧಾರ್ಮಿಕ ಉಪನ್ಯಾಸ, ಭಜನೆ ಹಾಗೂ ಸತ್ಸಂಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಶಿವರಾತ್ರಿ ಪ್ರಯುಕ್ತ ಭಾನುವಾರ ಭಕ್ತರು ದೇವರದರ್ಶನ ಮಾಡಿ ಎಳನೀರಿನ ಅಭಿಷೇಕ, ಶತರುದ್ರಾಭಿಷೇಕ ಸೇವೆ ಅರ್ಪಿಸುವರು. ಅಹೋರಾತ್ರಿ ಶಿವಪಂಚಾಕ್ಷರಿ ಪಠಣದೊಂದಿಗೆ ಜಾಗರಣೆ ಹಾಗೂ ಉಪವಾಸ ವ್ರತಾಚರಣೆ ಮಾಡುವರು. ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಭಾನುವಾರ ಸಂಜೆ ಆರು ಗಂಟೆಗೆ ದೇವಸ್ಥಾನದ ಮುಂಭಾಗದ ಪ್ರವಚನ ಮಂಟಪದಲ್ಲಿ ದೀಪ ಬೆಳಗಿಸಿ ಶಿವಪಂಚಾಕ್ಷರಿ ಪಠಣಕ್ಕೆ ಚಾಲನೆ ನೀಡುವರು. 

ಭಾನುವಾರ ರಾತ್ರಿ ಅನ್ನಪೂರ್ಣ ಭೋಜನಾಲಯದ ಹಿಂಭಾಗದ ಮೈದಾನದಲ್ಲಿ ಹಾಗೂ ಪ್ರೌಢಶಾಲಾ ಕ್ರೀಡಾಂಗಣದಲ್ಲಿ ಬೆಂಗಳೂರಿನ ಭಕ್ತರು ಉಚಿತ ಅನ್ನದಾಸೋಹ ಸೇವೆ ಮಾಡುವರು. ನಾಡಿನ ವಿವಿಧೆಡೆಯಿಂದ ಸುಮಾರು ಎರಡು ಸಾವಿರ ಕಲಾವಿದರು ವಾಲಗ, ಕೊಳಲು, ಶಂಖ, ಜಾಗಟೆ, ಚೆಂಡೆ ವಾದನದ ಕಲಾಸೇವೆ ಅರ್ಪಿಸುವರು ಎಂದು ಧರ್ಮಸ್ಥಳ ಕ್ಷೇತ್ರದವರು ತಿಳಿಸಿದ್ದಾರೆ.

ರಾಜ್ಯದ ವಿವಿಧೆಡೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿರುವ ಯಾತ್ರಿಗಳು ಚಾರ್ಮಾಡಿ ಮಾರ್ಗವಾಗಿ ಶುಕ್ರವಾರ ಸಾಗಿ ಬಂದ ದೃಶ್ಯ ಪ್ರಜಾವಾಣಿ ಚಿತ್ರ : ಫಕ್ರುದ್ದೀನ್ ಎಚ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.