ಮಂಗಳೂರು: ಈ ದೇಶದ ಕಾನೂನಿನಡಿ ಎಲ್ಲರೂ ಸಮಾನರು ಎಂದು ತೋರಿಸಿಕೊಡುವ ಕಾಲ ಸನ್ನಿಹಿತವಾಗಿದೆ. ಸಂವಿಧಾನದ ಮೌಲ್ಯವನ್ನು ಎಲ್ಲರೂ ಸೇರಿ ಎತ್ತಿಹಿಡಿಯಬೇಕಿದೆ. ಇದಕ್ಕಾಗಿ ಹೋರಾಟವನ್ನು ತೀವ್ರಗೊಳಿಸಬೇಕು ಎಂದು ಸಮಾನ ಮನಸ್ಕ ಸಂಘಟನೆಗಳು ನಿರ್ಧರಿಸಿವೆ.
ನಗರದ ಬೋಳಾರದಲ್ಲಿ ಬುಧವಾರ ನಡೆದ ದುಂಡು ಮೇಜಿನ ಸಭೆಯಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಿ ಸಾಕ್ಷಿ ದೂರುದಾರ ನೀಡಿರುವ ದೂರಿನ ತನಿಖೆಯ ನಂತರದ ಬೆಳವಣಿಗೆಗಳ ಬಗ್ಗೆ ಹಾಗೂ ಹೋರಾಟದ ಮುಂದಿರುವ ಸವಾಲುಗಳ ಬಗ್ಗೆ ವಿವಿಧ ಸಂಘಟನೆಗಳ ಪ್ರಮುಖರು ಚರ್ಚಿಸಿದರು.
‘ಈ ತನಿಖೆಯ ದಾರಿ ತಪ್ಪಿಸುವ ಯತ್ನಗಳು ನಡೆಯುತ್ತಿವೆ. ಈ ತನಿಖೆಯಿಂದ ಸತ್ಯ ಹೊರಬರಬೇಕು ಎಂಬ ಜನಾಭಿಪ್ರಾಯ ದಿನದಿಂದ ದಿನಕ್ಕೆ ಬಲವಾಗುತ್ತಿದೆ. ಈ ಕುರಿತ ಜನ ಚಳವಳಿ ದಿನದಿಂದ ದಿನಕ್ಕೆ ಬಲಪಡೆಯುತ್ತಿದೆ. ಸಾಕ್ಷಿ ದೂರುದಾರನ ಆರೋಪ ಪ್ರತ್ಯೇಕ ಪ್ರಕರಣ. ಆತನಿಗೂ, ಆತ ನೀಡಿರುವ ದೂರಿಗೂ, ಜನ ಚಳವಳಿಗಳಿಗೂ ಯಾವುದೇ ಸಂಬಂಧ ಇಲ್ಲ. ಆದರೆ, ಆತನ ಮಾಡಿರುವ ಆರೋಪದ ಕುರಿತು ಎಲ್ಲಾ ಆಯಾಮಗಳಲ್ಲಿ ತನಿಖೆಯಾಗಬೇಕು ಎಂಬುದು ನಮ್ಮ ಆಗ್ರ’ ಎಂದು ಸಭೆಯಲ್ಲಿ ಪಾಲ್ಗೊಂಡ ಪ್ರಮುಖರು ಅಭಿಪ್ರಾಯಪಟ್ಟರು.
’ಈ ದೂರುದಾರನಿಗೆ ಎಡ, ಜಾತ್ಯಾತೀತ, ಜನಪರ ಸಂಘಟನೆಗಳು ನೈತಿಕ ಬೆಂಬಲ ನೀಡಬೇಕು. ಭೂಕಬಳಿಕೆ, ಮೈಕ್ರೊ ಫೈನಾನ್ಸ್ ದೌರ್ಜನ್ಯ, ಆರ್ಥಿಕ ಅಪರಾಧದ ಆರೋಪದ ಪ್ರಕರಣಗಳೂ ಪೂರ್ಣಪ್ರಮಾಣದಲ್ಲಿ ತನಿಖೆಯಾಗುವ ನಿಟ್ಟಿನಲ್ಲಿ ಹೋರಾಟವನ್ನು ಮುಂದುವರಿಸಬೇಕು’ ಎಂದು ಕೆಲ ಸಂಘಟನೆಗಳ ಪ್ರಮುಖರು ಸಲಹೆ ನೀಡಿದರು.
ವಾಸುದೇವ ಉಚ್ಚಿಲ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವಿಚಾರವಾದಿ ಪ್ರೊ.ನರೇಂದ್ರ ನಾಯಕ್, ವಕೀಲ ಯಶವಂತ ಮರೋಳಿ, ದಲಿತ ಮುಖಂಡ ಎಂ.ದೇವದಾಸ್, ಕೃಷ್ಣಾನಂದ ಡಿ., ಕೃಷ್ಣಪ್ಪ ಕೊಣಾಜೆ, ಸಾಮಾಜಿಕ ಹೋರಾಟಗಾರ ಬಿ.ವಿಷ್ಣುಮೂರ್ತಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ.ಶೇಖರ್, ಆಮ್ ಆದ್ಮಿ ಪಕ್ಷದ ಎಸ್.ಎಲ್.ಪಿಂಟೊ, ಸೀಮಾ ಮಡಿವಾಳ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಉಪಾಧ್ಯಕ್ಷ ಸುಕುಮಾರ್ ತೊಕ್ಕೊಟ್ಟು, ರೈತಸಂಘ ಪ್ರಮುಖರಾದ ಕೃಷ್ಣಪ್ಪ ಸಾಲ್ಯಾನ್, ಓಸ್ವಾಲ್ಡ್ ಫರ್ನಾಂಡಿಸ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕರಿಯ ಕೆ., ಕೃಷ್ಣ ಇನ್ನಾ, ಜನವಾದಿ ಮಹಿಳಾ ಸಂಘಟನೆಯ ಪ್ರಮೀಳಾ, ಮಾನಸ, ಮಹಿಳಾ ಒಕ್ಕೂಟದ ಮಂಜುಳಾ, ಸುನಂದಾ ಕೊಂಚಾಡಿ, ಅಸುಂತಾ ಡಿ ಸೋಜ, ಕಾರ್ಮಿಕ ಮುಖಂಡರಾದ ಬಿ.ಎಂ ಭಟ್, ಈಶ್ವರ ಪದ್ಮುಂಜ, ಯೋಗೀಶ್ ಜಪ್ಪಿನಮೊಗರು, ರಂಗಕರ್ಮಿ ಪ್ರಭಾಕರ ಕಾಪಿಕಾಡ್ ಮತ್ತಿತರರು ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.