ADVERTISEMENT

ಉಜಿರೆ | ‘ಅಂಗವಿಕಲರ ಸೇವೆ ಪುಣ್ಯದ ಕಾರ್ಯ’

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:35 IST
Last Updated 10 ಸೆಪ್ಟೆಂಬರ್ 2025, 7:35 IST
ಕಾರ್ಯಕ್ರಮದಲ್ಲಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿದರು
ಕಾರ್ಯಕ್ರಮದಲ್ಲಿ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಮಾತನಾಡಿದರು   

ಉಜಿರೆ: ಅಂಗವಿಕಲರ ಸೇವೆ ದೇವರ ಸೇವೆಯಷ್ಟೆ ಪವಿತ್ರ ಹಾಗೂ ಪುಣ್ಯದ ಕಾರ್ಯ ಎಂದು ಗುರುವಾಯನಕೆರೆಯ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು.

ಉಜಿರೆಯ ‘ಸಾನ್ನಿಧ್ಯ’ ವಿಶೇಷ ಚೇತನ ಮಕ್ಕಳ ಕೌಶಲ ತರಬೇತಿ ಕೇಂದ್ರದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಓಣಂ ಹಬ್ಬವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರೀತಿ-ವಿಶ್ವಾಸದಿಂದ ಭಾವನಾತ್ಮಕವಾಗಿ ಸೇವೆ ಮಾಡುವ ಸಂಸ್ಥೆಯ ಶಿಕ್ಷಕರನ್ನು, ಸಿಬ್ಬಂದಿಯನ್ನು ಅವರು ಅಭಿನಂದಿಸಿದರು. ಸಂಸ್ಥೆಗೆ ₹ 1 ಲಕ್ಷ ಮೌಲ್ಯದ ಪರಿಕರಗಳನ್ನು ಕೊಡುಗೆಯಾಗಿ ನೀಡುವುದಾಗಿ ಭರವಸೆ ನೀಡಿದರು.

ADVERTISEMENT

ಎಂಡೋಸಲ್ಫಾನ್ ಸಂತ್ರಸ್ತರ ದಕ್ಷಿಣಕನ್ನಡ ಜಿಲ್ಲಾ ಮಾರ್ಗದರ್ಶಿ ಅಧಿಕಾರಿ ಡಾ.ಜೆಸಿಂತಾ ಡಿಸೋಜ, ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಶ್ಯಾಮ್ ಪ್ರಕಾಶ್, ರೋಶನ್ ಪ್ರೇಮರಾಜ್ ಸಿಕ್ವೇರಾ, ಪ್ರಮೋದ್ ಆರ್.ನಾಯ್ಕ ಮಾತನಾಡಿದರು.

ಮಹಾಬಲ ಮಾರ್ಲ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಆಡಳಿತಾಧಿಕಾರಿ ವಸಂತ್‌ಕುಮಾರ್ ಶೆಟ್ಟಿ, ವಿಶೇಷ ಚೇತನರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಸಂಸ್ಥೆಯ ಉದ್ದೇಶವಾಗಿದೆ ಎಂದರು.

ಶಿಕ್ಷಕಿ ಮಲ್ಲಿಕಾ ಸ್ವಾಗತಿಸಿದರು. ಅಕ್ಷತಾ ವಂದಿಸಿದರು. ಅಭಿಲಾಷ್ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಾಗಾರ ನಾಳೆ

ಉಜಿರೆ: ಎಸ್‌ಡಿಎಂ ಸ್ವಾಯತ್ತ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೋಶದ ಆಶ್ರಯದಲ್ಲಿ ಸೆ.11ರಿಂದ ಎರಡು ದಿನ ‘ಸಂಶೋಧನೆ: ಬರವಣಿಗೆ ಮತ್ತು ಪ್ರಕಾಶನದ ವಿಧಿ-ವಿಧಾನಗಳು’ ಕುರಿತ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ ಸೌಮ್ಯ ಬಿ.ಪಿ. ಮತ್ತು ಕಾರ್ಯಾಗಾರದ ಸಂಯೋಜಕರಾದ ದಿವಾಕರ ಕೆ., ಪಿ. ಸುದರ್ಶನ್ ತಿಳಿಸಿದ್ದಾರೆ.

ಸೆ.11ರಂದು ಬೆಳಿಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಹಾವೇರಿ ಜಾನಪದ ವಿ.ವಿ. ನಿವೃತ್ತ ಕುಲಪತಿ ಪ್ರೊ.ಕೆ. ಚಿನ್ನಪ್ಪ ಗೌಡ ಉದ್ಘಾಟಿಸುವರು. ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಪಿ.ವಿಶ್ವನಾಥ್ ಅಧ್ಯಕ್ಷತೆ ವಹಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.