ಮಂಗಳೂರು: ಏಳೆಂಟು ವರ್ಷಗಳ ಹಿಂದೆ ದಟ್ಟ ಹಸಿರಿನಿಂದ ಕೂಡಿದ್ದ ತಾಣ ಅದಾಗಿತ್ತು. ಅಲ್ಲಿನ ಹಸಿರನ್ನು ಆಪೋಶನ ಪಡೆದ ಜಾಗದಲ್ಲಿ ಇಂದು ಅಲ್ಲಿ ಭವ್ಯ ಕಾಂಕ್ರೀಟ್ ಕಟ್ಟಡ ‘ಪ್ರಜಾ ಸೌಧ’ ತಲೆ ಎತ್ತಿದೆ. ಈ ಪ್ರಜಾ ಸೌಧದ ಮುಂಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಗುರುವಾರ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಭಾರ ಜಿಲ್ಲಾಧಿಕಾರಿ ಆನಂದ ಕೆ., ‘ನಗರದ ರಸ್ತೆ ಬದಿ, ವಿಭಜಕಗಳಲ್ಲಿ, ಖಾಳಿ ಜಾಗಗಳಲ್ಲಿ ವ್ಯಾಪಕ ಹಸಿರೀಕರಣ ಕಾರ್ಯವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕೆ ಹಲವಾರು ಸಂಘ ಸಂಸ್ಥೆಗಳು ಕೈಜೊಡಿಸಿವೆ’ ಎಂದರು.
‘ಇರುವುದೊಂದೇ ಭೂಮಿ’ ಧ್ಯೇಯವಾಕ್ಯವನ್ನು ಮುಂದಿಟ್ಟು ವಿಶ್ವ ಪರಿಸರ ದಿನಾಚರಣೆಯ ಅಭಿಯಾನ ಆರಂಭವಾಯಿತು. ಇದು ಅತ್ಯಂತ ಪರಿಣಾಮಕಾರಿಯಾದ ಧೈಏಯವಾಕ್ಯ. ಈ ವರ್ಷ ‘ಪ್ಲಾಸ್ಟಿಕ್ ಮಾಲಿನ್ಯ ಕೊನೆಗಾಣಿಸಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಪರಿಸರ ದಿನವನ್ನು ಆಚರಿಸಲಾಗುತ್ತಿದೆ. ಈ ಧ್ಯೇಯವನ್ನು ಸಾಕಾರಗೊಳಿಸಲು ಎಲ್ಲರೂ ಕೈಜೋಡಿಸಬೇಕು’ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟೊನಿ ಮರಿಯಪ್ಪ, ‘ಪ್ರತಿವರ್ಷ ಮುಂಗಾರಿಗೆ ಮುನ್ನ ಜಿಲ್ಲೆಯಲ್ಲಿ 5 ಲಕ್ಷ ಸಸಿಗಳನ್ನು ನೆಡಲು ಕ್ರಮವಹಿಸುತ್ತೇವೆ ಈ ವರ್ಷ 4.17 ಲಕ್ಷ ಸಸಿಗಳನ್ನು ಇಲಾಖೆಯಿಂದ ನೆಡುತ್ತೇವೆ. 1.03 ಲಕ್ಷ ಸಸಿಗಳನ್ನು ಸಾರ್ವಜನಿಕರಿಗೆ ಸಂಘ ಸಂಸ್ಥೆಗಳಿಗೆ ವಿತರಿಸಲಿದ್ದೇವೆ’ ಎಂದರು.
‘ಪ್ರತಿ ವರ್ಷ ಅಭಿವೃದ್ಧಿಯ ಕಾರಣಕ್ಕಾಗಿ ಲಕ್ಷಾಂತರ ಮರಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಕಳೆದ ವರ್ಷ ಜಿಲ್ಲೆಯಲ್ಲಿ ವಿವಿಧ ಉದ್ದೇಶಗಳಿಗಾಗಿ 1.39 ಲಕ್ಷ ಮರಗಳನ್ನು ಕಡಿಯಲಾಗಿತ್ತು. ಅದಕ್ಕೆ ಪ್ರತಿಯಾಗಿ ಲಕ್ಷಾಂತರ ಸಸಿಗಳನ್ನು ನೆಡುವುದು ಅನಿವಾರ್ಯ. ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡುವುದಕ್ಕೆ ಇದು ಅತ್ಯಗತ್ಯ. ಹೆದ್ದಾರಿ ಅಭಿವೃದ್ಧಿ ಸಲುವಾಗಿ ಕಡಿದ ಮರಗಳಿಗೆ ಪ್ರತಿಯಾಗಿ ಸಸಿಗಳನ್ನು ನೆಟ್ಟು ಬೆಳೆಸಲು ಅರಣ್ಯ ಇಲಾಖೆ 100 ಎಕರೆ ಜಮೀನನ್ನು ಒದಗಿಸಿದೆ’ ಎಂದರು.
ಸಿ.ಎಫ್.ಎ.ಎಲ್ ಪ್ರಾಂಶುಪಾಲೆ ಡಾ.ಸ್ಮಿತಾ ಹೆಗ್ಡೆ,‘ವಿದ್ಯುತ್ ಕಂಬ ಅಳವಡಿಸಲು ನಾವು ಜಾಗ ಇಲ್ಲ ಎನ್ನುವುದಿಲ್ಲ. ಆದರೆ ಗಿಡ ನೆಸಲು ಜಾಗ ಇಲ್ಲ ಎಂದು ಸುಲಭವಾಗಿ ಹೇಳುತ್ತೇವೆ. ಗಿಡ ನೆಲು ಮೊದಲು ಮನಸ್ಸಿನಲ್ಲಿ ಜಾಗ ಮಾಡಿಕೊಳ್ಳಬೇಕು. ಹಸಿರೀಕರಣವನ್ನೂ ಅಭಿವೃದ್ಧಿಯ ಭಾಗವಾಗಿ ಕಾಣಬೇಕು. ನೀತಿ ನಿರೂಪಕರು ಈ ಬಗ್ಗೆ ಗಮನಿಸಬೇಕು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ಕುಮಾ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅರುಣ್ ಕುಮಾರ್ ಶೆಟ್ಟಿ, ವಲಯ ಅರಣ್ಯಾಧಿಕಾರಿ ರಾಜೇಶ್, ಸಿ.ಎಫ್.ಎ.ಎಲ್ನ ಚೈತ್ರಾ, ಎನ್‌ಇಸಿಎಫ್‌ನ ಹರೀಶ್, ಎನ್‌ಸಿಸಿಯ ಆರ್.ಪಿ.ರಾಯ್, ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್ ಮತ್ತಿತರರು ಭಾಗವಹಿಸಿದ್ದರು. ಉಪನ್ಯಾಸಕಿ ಡಾ. ರಶ್ಮಿ.ಕೆ ಸ್ವಾಗತಿಸಿದರು.
ಪಾಲಿಕೆ, ಎನ್.ಸಿ.ಸಿ, ಅರಣ್ಯ ಇಲಾಖೆ, ಸಿ.ಎಫ್.ಎ.ಎಲ್, ಪ್ಲಾಂಟ್ಸ‌್, ಸ್ವಸ್ತಿಕಾ, ಎನ್‌ಇಸಿಎಫ್,ಜೇಸೀಸ್, ರೋಟರಿ, ಲಯನ್ಸ್ ಕ್ಲಬ್, ಇಂಚರ ಮತ್ತಿತರ ಸಂಘಟನೆಗಳು ಕೈಜೋಡಿಸಿದವು.
‘10 ಸಾವಿರ ಗಿಡ ನೆಡುವ ಉದ್ದೇಶ’ ನಗರದಲ್ಲಿ ಎನ್‌ಸಿಸಿ ಪಾಲಿಕೆ ಮತ್ತು ಆರಣ್ಯ ಇಲಾಖೆ ಸಹಯೋಗದಲ್ಲಿ 10 ಸಾವಿರ ಗಿಡಗಳನ್ನು ನೆಟ್ಟು ಬೆಳೆಸುವ ಉದ್ದೇಶ ಇಟ್ಟುಕೊಂಡಿದ್ದೇವೆ. ಇದಕ್ಕಾಗಿ ಎನ್‌ಸಿಸಿ ವಿದ್ಯಾರ್ಥಿಗಳ ಸಹಕಾರದಿಂದ 15 ದಿನಗಳಲ್ಲಿ 4500 ಕಡೆ ಜಾಗ ಗುರುತಿಸಿದ್ದೇವೆ. ಇನ್ನಷ್ಟು ಕಡೆ ಜಾಗ ಹುಡುಕುತ್ತಿದ್ದೇವೆ. ಪಾಲಿಕೆಯ ಗಮನಕ್ಕೆ ತಂದು ಅವರು ಅನುಮತಿ ನೀಡಿದ ಕಡೆ ಮಾತ್ರ ಗಿಡ ನೆಡುತ್ತೇವೆ‘ ಎಂದು ಸ್ಮಿತಾ ಹೆಗ್ಡೆ ತಿಳಿಸಿದರು. ‘ಈ ಹಸಿರೀಕರಣಕ್ಕೆ ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆ ನಿಧಿಯ ಹಣವನ್ನು ಬಳಸುತ್ತಿಲ್ಲ. ಗಿಡಗಳ ಜೊತೆ ಭಾವನಾತ್ಮಕ ನಂಟು ಇಟ್ಟುಕೊಂಡಿರುವ ಹತ್ತು ಸಂಘ ಸಂಸ್ಥೆಗಳು ಈ ಕಾರ್ಯದಲ್ಲಿ ಕೈಜೋಡಿಸಿವೆ. ಕೋರ್ಟ್ ಮಿಲಾಗ್ರಿಸ್- ರೂಪಾ ಹೋಟೆಲ್ ಬಳಿಯ ರಸ್ತೆ ಪಕ್ಕದಲ್ಲಿ ಮಾಧವ ಉಳ್ಳಾಲ್ ಅವರು ಶಿವಬಾಗ್ ಪರಿಸರದಲ್ಲಿ ಇಂಚರ ಸಂಸ್ಥೆ ದೇರೇಬೈಲ್‌ನಲ್ಲಿ ಸಿಎಫ್ಎಎಲ್ ಕಂಕನಾಡಿ ವೆಲೆನ್ಸಿಯಾ ಪ್ರದೇಶದಲ್ಲಿ ಪ್ಲಾಂಟ್ಸ್ ಸಂಸ್ಥೆ ಕಾಟಿಪಳ್ಳ ಸ್ಮಶಾನ ಬೆಂಗರೆಯಲ್ಲಿ ರೋಟರಿ ಕ್ಲಬ್ ಗಿಡ ನೆಡಲಿದೆ. ವಿಮಾನ ನಿಲ್ದಾಣ ರಸ್ತೆ ಪಕ್ಕ 600ಕ್ಕೂ ಹೆಚ್ಚು ಎನ್‌ಸಿಸಿ ವಿದ್ಯಾರ್ಥಿಗಳು ಮುಂದಿನ ಭಾನುವಾರ ಸಸಿ ನೆಡಲಿದ್ದಾರೆ’ ಎಂದರು.
ವಿಮಾನ ಪ್ರಯಾಣಿಕರಿಗೆ ಮಲ್ಲಿಗೆ ಗಿಡ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರನ್ನು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಉಡುಪಿ ಮಲ್ಲಿಗೆ ಗಿಡವನ್ನು ನೀಡುವ ಮೂಲಕ ಗುರುವಾರ ಬರಮಾಡಿಕೊಳ್ಳಲಾಯಿತು. ದೇಶದಾದ್ಯಂತ 10 ಕೋಟಿ ಸಸಿಗಳನ್ನು ನೆಡುವ ಅಭಿಯಾನದ ಅಂಗವಾಗಿ ವಿಮಾಣ ನಿಲ್ದಾಣದ ಸಿಬ್ಬಂದಿ ಹಾಗೂ ಇಲ್ಲಿ ಕಾರ್ಯ ನಿರ್ವಹಿಸುವ ವಿವಿಧ ಸಂಸ್ಥೆಗಳ ಸಿಬ್ಬಂದಿ ಪ್ರಿಸಿಷನ್ ಅಪ್ರೋಚ್ ಲೈಟಿಂಗ್ ಸಿಸ್ಟಂ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟರು.
ತಾಯಿಯ ಹೆಸರಿನಲ್ಲಿ ಒಂದು ಗಿಡ ಮಂಗಳೂರು ಮಹಾನಗರ ಪಾಲಿಕ ವತಿಯಿಂದ ‘ತಾಯಿಯ ಹೆಸರಿನಲ್ಲಿ ಒಂದು ಗಿಡ’ ಕಾರ್ಯಕ್ರಮವನ್ನು ಬಜಾಲ್ ಜಲತ್ಯಾಜ್ಯ ನಿರ್ವಹಣಾ ಘಟಕದ ಪರಿಸರದಲ್ಲಿ ಗುರುವಾರ ಹಮ್ಮಿಕೊಳ್ಳಲಾಯಿತು. ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಗಿಡ ನೆಡುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಅಮೃತ್ ಮಿತ್ರ 2.0 ಯೋಜನೆಯಡಿ ನಡೆದ ಈ ಕಾರ್ಯಕ್ರಮದಲ್ಲಿ ಡೇ-ನಲ್ಮ್ ಸ್ವಸಹಾಯ ಸಂಘದ ಮಹಿಳೆಯರು ಸಸಿ ನೆಟ್ಟರು. ನಗರ ಅಭಿಯಾನ ವ್ಯವಸ್ಥಾಪಕ ಚಿತ್ತರಂಜನ್ ದಾಸ್ ಜಿಲ್ಲಾ ಕೌಶಲ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಅಚ್ಯುತ ನಾಯ್ಕ್ ದೀಪಾ ಓಂ ಸಾಯಿ ಪಂಚಲಿಂಗೇಶ್ವರ ಮಂಜುಶ್ರೀ ವಿಜಯನಗರ ಮಹಾದೇವಿ ಮತ್ತು ಶಾರದಾ ಸ್ವ-ಸಹಾಯ ಗುಂಪಿನ ಸದಸ್ಯರು ಭಾಗವಹಿಸಿದ್ದರು. ಪಾಲಿಕೆಯ ಸಮುದಾಯ ಸಂಘಟನಾಧಿಕಾರಿ ಮಾಲಿನಿ ರಾಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.