ಮಂಗಳೂರು: ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಬೆಳ್ತಂಗಡಿಯ ಕುತ್ಲುರು ಸರ್ಕಾರಿ ಶಾಲೆ ಮಕ್ಕಳಿಗೆ ಬಿಎಎಸ್‌ಎಫ್ ಇಂಡಿಯಾ ಕಂಪನಿಯ ಸಿಎಸ್‌ಆರ್ ನಿಧಿಯಿಂದ ನೋಟ್ ಬುಕ್, ಕಲಿಕಾ ಸಾಮಾಗ್ರಿ, ಬ್ಯಾಂಡ್‌ಸೆಟ್ ಹಾಗೂ ಸಮವಸ್ತ್ರವನ್ನು ಶುಕ್ರವಾರ ವಿತರಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ರಾಜೇಂದ್ರ ಅವರು ನೋಟ್ ಬುಕ್ ಹಸ್ತಾಂತರಿಸಿ ಮಾತನಾಡಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕಾದರೆ ವಿದ್ಯಾರ್ಥಿಗಳಿಗೆ ಉತ್ತಮ ವಾತವರಣ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಕುತ್ಲೂರು ಶಾಲೆಯ ಅಭಿವೃದ್ಧಿಗಾಗಿ ನಡೆಯುತ್ತಿರುವ ಸಾಮೂಹಿಕ ಪ್ರಯತ್ನ ಶ್ಲಾಘನೀಯ ಎಂದರು.
ಸಮವಸ್ತ್ರ, ಬ್ಯಾಂಡ್ ಸೆಟ್ ಹಾಗೂ ಕಲಿಕಾ ಸಾಮಾಗ್ರಿ ವಿತರಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ರಾಜಲಕ್ಷ್ಮಿ, ಶಾಲೆಗಳಲ್ಲಿ ತೋಟ ನಿರ್ಮಿಸಿ ಅದರಿಂದ ಬಂದ ಆದಾಯದಿಂದ ಶಾಲೆಗೆ ವಾಹನ ಖರೀದಿಸಿದ ಶಾಲೆಗಳಲ್ಲಿ ಕುತ್ಲೂರು ಶಾಲೆಯೂ ಸೇರಿದೆ. ಇದು ಶಿಕ್ಷಣದ ಗುಣಮಟ್ಟ ಹೆಚ್ಚಾಗಲು ನೆರವಾಗಲಿದೆ ಎಂದರು.
ಬಿಎಎಸ್‌ಎಫ್ ಇಂಡಿಯಾದ ನಿರ್ದೇಶಕ ಶ್ರೀನಿವಾಸ್ ಪ್ರಾಣೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ, ಬಿಎಎಸ್‌ಎಫ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಸಂತೋಷ್ ಪೈ ಮತ್ತು ಮೈಕೆಲ್ ಡಿ ಸೋಜ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಪಾಲ್ಗೊಂಡಿದ್ದರು.
ಕಾಸರಗೋಡು ಜಿಲ್ಲಾ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ನೀಡಿದ ದತ್ತಿನಿಧಿ ಪ್ರಶಸ್ತಿಯ ಮೊತ್ತ ₹ 10 ಸಾವಿರವನ್ನು ಕುತ್ಲೂರು ಶಾಲೆಗೆ ನೀಡುವುದಾಗಿ ಶ್ರೀನಿವಾಸ್ ನಾಯಕ್ ಇಂದಾಜೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.