ADVERTISEMENT

ದಕ್ಷಿಣ ಕನ್ನಡ | ಗೂಡುದೀಪ ಸಂಗಮ; ದೀಪಾವಳಿ ಸಂಭ್ರಮ

ದೀಪಾವಳಿ ಹಬ್ಬ ವಿಶ್ವಪ್ರಜ್ಞೆ ಮೂಡಿಸಲಿ: ಕೊಣಾಜೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅರುಣ್ ಉಳ್ಳಾಲ್ ಆಶಯ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 4:48 IST
Last Updated 24 ಅಕ್ಟೋಬರ್ 2025, 4:48 IST
ಪರಂಡೆಯ ಯುಬಿಎಂಸಿ ಶಾಲೆಯಲ್ಲಿ ಗೂಡುದೀಪ ಸಂಗಮ ನಡೆಯಿತು
ಪರಂಡೆಯ ಯುಬಿಎಂಸಿ ಶಾಲೆಯಲ್ಲಿ ಗೂಡುದೀಪ ಸಂಗಮ ನಡೆಯಿತು   

ಉಳ್ಳಾಲ: ಗ್ರಾಮೀಣ ಭಾಗದ ಕೃಷಿ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ದೀಪಾವಳಿ ಎಂಬ ಬೆಳಕಿನ ಹಬ್ಬ ಮನೆ-ಮನ ಮಾತ್ರವಲ್ಲ ಸಮಾಜ ಹಾಗೂ ಜಗತ್ತನ್ನೇ ಬೆಳಗಲಿ.‌ ಈ ಹಬ್ಬವು ಸಮುದಾಯ ಪ್ರಜ್ಞೆಗಿಂತ ಮಿಗಿಲಾಗಿ ವಿಶ್ವಪ್ರಜ್ಞೆಯನ್ನು ಮೂಡಿಸುವಂತಾಗಲಿ ಎಂದು ಉಪನ್ಯಾಸಕ ಅರುಣ್ ಉಳ್ಳಾಲ್ ಅಭಿಪ್ರಾಯಪಟ್ಟರು.

ಕೊಣಾಜೆ ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಬ್ರಹ್ಮಶ್ರೀ ನಾರಾಯಣ ಗುರು ಯುವ ಘಟಕ ಹಾಗೂ ಮಹಿಳಾ ಘಟಕದ ವತಿಯಿಂದ ಪರಂಡೆಯ ಯುಬಿಎಂಸಿ ಶಾಲೆಯಲ್ಲಿ ನಡೆದ ಗೂಡುದೀಪ ಸಂಗಮ, ದೀಪಾವಳಿ‌‌ ಸಂಭ್ರಮದಲ್ಲಿ ಅವರು ದಿಕ್ಸೂಚಿ ಭಾಷಣ‌ ಮಾಡಿದರು.

ಆಧುನಿಕತೆಯಲ್ಲಿ ದೀಪಾವಳಿಯಂತಹ ಹಬ್ಬಗಳನ್ನು ಪಾರಂಪರಿಕವಾಗಿ ಆಚರಿಸಿಕೊಂಡು ಬಂದ ರೀತಿಯನ್ನು‌ ಮರೆಯದೆ ಅದರ ಮಹತ್ವವನ್ನು ಮಕ್ಕಳಿಗೆ ತಿಳಿಯಪಡಿಸಬೇಕಿದೆ ಎಂದು ಅವರು ಹೇಳಿದರು.

ADVERTISEMENT

ಉದ್ಘಾಟನೆ ನೆರವೇರಿಸಿ ಮಾತನಾಡಿದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ವಿಜೇತ್ ಪಜೀರು, ನಮ್ಮದು ಏಕತೆಯಲ್ಲಿ ವೈವಿಧ್ಯತೆ ಹೊಂದಿರುವ ರಾಷ್ಟ್ರ. ದೀಪಾವಳಿ ಒಗ್ಗಟ್ಟಿನಿಂದ ಆಚರಿಸುವ ವಿಶೇಷ ಹಬ್ಬ. ಇದು ಒಗ್ಗಟ್ಟಿನೊಂದಿಗೆ ಧನಾತ್ಮಕ ಭಾವ ಮೂಡಿಸುತ್ತದೆ ಎಂದು ಹೇಳಿದರು.

ಗ್ರಾಮ ಸಮಿತಿಯ ಅಧ್ಯಕ್ಷ ಗಣೇಶ್ ಅಮೀನ್ ಮುಟ್ಟಿಂಜ ಅಧ್ಯಕ್ಷತೆ ವಹಿಸಿದ್ದರು. ಕೊಣಾಜೆ‌ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ದಾಮೋದರ್ ಕುಂದರ್, ಮುಖಂಡರಾದ‌ ಮುರಳೀಧರ ಕೊಣಾಜೆ, ಬ್ರಹ್ಮಶ್ರೀ ನಾರಾಯಣ ಗುರು ಮಹಿಳಾ ಘಟಕದ‌ ಅಧ್ಯಕ್ಷರಾದ ಬಬಿತಾ ಯಾದವ ಪೂಜಾರಿ, ಯುಬಿಎಂಸಿ ಶಾಲೆಯ ಸಂಚಾಲಕ ಎಡ್ವರ್ಡ್ ಜೆ ಐಮನ್, ಕೊಣಾಜೆ ಪಂಚಾಯಿತಿ ಉಪಾಧ್ಯಕ್ಷ ಹರಿಶ್ಚಂದ್ರ ಶೆಟ್ಟಿಗಾರ್, ಮುಡಿಪು ಲಯನ್ಸ್ ಕ್ಲಬ್ ಅಧ್ಯಕ್ಷ ಅಜಿತ್ ಪೂಜಾರಿ ಪಜೀರು, ಯುವವಾಹಿನಿ ಘಟಕದ ಅಧ್ಯಕ್ಣ ಬಾಬು ಬಂಗೇರ ಮುಟ್ಟಿಂಜ, ಯುವ ಘಟಕದ ಅಧ್ಯಕ್ಣ ಅಜಿತ್ ಕುಮಾರ್ ತಾರಿಪ್ಪಾಡಿ, ಮಹಿಳಾ ಘಟಕದ ಅಧ್ಯಕ್ಷೆ  ಸರಿತಾ ಆರ್ ಬಂಗೇರ ಇದ್ದರು.

ಸಾಂಸ್ಕೃತಿಕ ಕಾರ್ಯದರ್ಶಿ ಸುರೇಖಾ ಹರೀಶ್ ಪೂಜಾರಿ ಸ್ವಾಗತಿಸಿದರು. ಅಜಿತ್ ಕುಮಾರ್ ತಾರಿಪಾಡಿ ವಂದಿಸಿದರು. ರವೀಂದ್ರ ಬಂಗೇರ, ಹರ್ಷಿತ, ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಸಾಂಪ್ರದಾಯಿಕ ಹಾಗೂ ಆಧುನಿಕ ವಿಭಾಗದಲ್ಲಿ ಗೂಡುದೀಪ‌ ಸ್ಪರ್ಧೆ ಏರ್ಪಡಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.