ADVERTISEMENT

ಮಂಗಳೂರು: ಚಾಂಪಿಯನ್ ಪಟ್ಟ ಅಲಂಕರಿಸಿದ ಡಿಕೆಸಿಎ

ಕೆಎಸ್‌ಸಿಎ ಮಂಗಳೂರು ವಲಯ ಮೊದಲ ಡಿವಿಷನ್ ಕ್ರಿಕೆಟ್ ಟೂರ್ನಿ: ರೋಷನ್ ಶೆಟ್ಟಿ ಆಲ್‌ರೌಂಡ್ ಆಟ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 4:09 IST
Last Updated 29 ಏಪ್ರಿಲ್ 2024, 4:09 IST
ಪ್ರಶಸ್ತಿ ಗೆದ್ದ ಡಿಕೆಸಿಎ ತಂಡ. ನಿಂತವರು (ಎಡದಿಂದ): ‍ಪವನ್ ರಾಜ್‌, ಗಣೇಶ್‌, ಆದಿತ್ಯ ರೈ, ಹಮ್ರಾಜ್‌, ಆರ್ಯ, ಅಡ್ರಿಕ್‌ ಕಾರ್ಡೋಝ, ರೋಷನ್ ಶೆಟ್ಟಿ, ಕಾರ್ತಿಕ್‌, ಆರ್ಯನ್‌, ಪ್ರಣವ್‌, ಗುರುರಾಜ್‌, ಶರತ್ ಪೂಜಾರಿ, ರೋಹಿತ್ ನಾಯಕ್‌, ಇಕ್ವಾನ್‌, ಶಬರೀಶ್‌. (ಕುಳಿತದವರು): ನಿಶಿತ್ ರಾಜ್‌ (ನಾಯಕ್), ದಿನೇಶ್ (ಕೋಚ್‌), ಚಿರಂಜೀವಿ ಜಿ.ಎಸ್‌
ಪ್ರಶಸ್ತಿ ಗೆದ್ದ ಡಿಕೆಸಿಎ ತಂಡ. ನಿಂತವರು (ಎಡದಿಂದ): ‍ಪವನ್ ರಾಜ್‌, ಗಣೇಶ್‌, ಆದಿತ್ಯ ರೈ, ಹಮ್ರಾಜ್‌, ಆರ್ಯ, ಅಡ್ರಿಕ್‌ ಕಾರ್ಡೋಝ, ರೋಷನ್ ಶೆಟ್ಟಿ, ಕಾರ್ತಿಕ್‌, ಆರ್ಯನ್‌, ಪ್ರಣವ್‌, ಗುರುರಾಜ್‌, ಶರತ್ ಪೂಜಾರಿ, ರೋಹಿತ್ ನಾಯಕ್‌, ಇಕ್ವಾನ್‌, ಶಬರೀಶ್‌. (ಕುಳಿತದವರು): ನಿಶಿತ್ ರಾಜ್‌ (ನಾಯಕ್), ದಿನೇಶ್ (ಕೋಚ್‌), ಚಿರಂಜೀವಿ ಜಿ.ಎಸ್‌   

ಮಂಗಳೂರು: ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಲ ತುಂಬಿದ ರೋಷನ್ ಶೆಟ್ಟಿ ಬೌಲಿಂಗ್‌ನಲ್ಲೂ ಮಿಂಚಿದರು. ಅವರ ಆಲ್‌ರೌಂಡ್ ಆಟದ ಬಲದಿಂದ ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್ (ಡಿಕೆಸಿಎ) ತಂಡ ಕೆಎಸ್‌ಸಿಎ ಮಂಗಳೂರು ವಲಯದ ಪ್ರಥಮ ಡಿವಿಷನ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಮುಡಿಪುವಿನಲ್ಲಿ ನಡೆದ ಟೂರ್ನಿಯ ರೋಚಕ ಫೈನಲ್‌ನಲ್ಲಿ ಡಿಕೆಸಿಎ 4 ರನ್‌ಗಳಿಂದ ಮಂಗಳೂರು ಸ್ಪೋರ್ಟ್ಸ್ ಕ್ಲಬ್‌ (ಎಂಎಸ್‌ಸಿ) ತಂಡವನ್ನು ಮಣಿಸಿತು. 

254 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಎಂಎಸ್‌ಸಿ 48.2 ಓವರ್‌ಗಳಲ್ಲಿ 249 ರನ್‌ಗಳಿಗೆ ಆಲೌಟಾಯಿತು. ಆರಂಭಿಕ ಬ್ಯಾಟರ್ ವಿಕ್ರಂ ಪಿ.ಎಸ್‌ (89; 93 ಎಸೆತ, 10 ಬೌಂಡರಿ, 1 ಸಿಕ್ಸರ್‌) ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಸತ್ಯಸ್ವರೂಪ್ ಮತ್ತು ನಿಶ್ಚಿತ್ ರಾವ್ ಕೊನೆಯ ಓವರ್‌ಗಳಲ್ಲಿ ಪ್ರತಿರೋಧ ತೋರಿದರು. ಆದರೆ ರೋಷನ್ ಶೆಟ್ಟಿ, ನಿಶಿತ್ ರಾಜ್ ಮತ್ತು ಶರತ್ ಪೂಜಾರಿ ಅವರ ಕರಾರುವಾಕ್ ಬೌಲಿಂಗ್ ಮುಂದೆ ತಂಡ ಸೋಲಿಗೆ ಶರಣಾಯಿತು. 

ADVERTISEMENT

ಆರಂಭಿಕ ಬ್ಯಾಟರ್‌ ರುಷಿ ಬಿ.ಶೆಟ್ಟಿ ಮತ್ತು ಮೂರನೇ ಕ್ರಮಾಂಕದ ರಿತೇಶ್ ಭಟ್ಕಳ್ ಅವರು ವಿಕ್ರಂ ಜೊತೆ ಉತ್ತಮ ಜೊತೆಯಾಟದ ಭರವಸೆ ಮೂಡಿಸಿದ್ದರು. ಆದರೆ ನಿಗದಿತ ಅಂತರದಲ್ಲಿ ವಿಕೆಟ್‌ಗಳು ಉರುಳಿದ ಕಾರಣ ತಂಡ ಒಂದು ಹಂತದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಸತ್ಯಸ್ವರೂಪ್ ಮತ್ತು ನಿಶ್ಚಿತ್ ಗೆಲುವಿನ ಆಸೆ ಚಿಗುರುವಂತೆ ಮಾಡಿದ್ದರು. ಡಿಕೆಸಿಎ ಸಂಘಟಿತ ಹೋರಾಟದ ಮೂಲಕ ಗೆಲುವು ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಡಿಕೆಸಿಎ ತಂಡದ ಆರ್ಯನ್ ಬೇಗನೇ ಔಟಾದರೂ ನಿಶಿತ್ (50; 41 ಎ, 10 ಬೌಂ) ಜೊತೆಗೂಡಿದ ಚಿರಂಜೀವಿ ಜಿ.ಎಸ್‌ ಉತ್ತಮ ಸಹಕಾರ ನೀಡಿದರು. ನಂತರ ಆದಿತ್ಯ ರೈ (49; 79 ಎ, 3 ಬೌಂ) ಮತ್ತು ಎಡಗೈ ಬ್ಯಾಟರ್‌ ರೋಷನ್ ಶೆಟ್ಟಿ (54; 65 ಎ, 5 ಬೌಂ) ಇನಿಂಗ್ಸ್‌ನ ಚುಕ್ಕಾಣಿ ಹಿಡಿದರು.

6 ಇನಿಂಗ್ಸ್‌ಗಳಲ್ಲಿ ತಲಾ ಎರಡು ಶಕತ ಮತ್ತು ಅರ್ಧಶತಕಗಳನ್ನು ಗಳಿಸಿದ ನಿಶಿತ್ ರಾಜ್ ಒಟ್ಟು 465 ರನ್‌ಗಳೊಂದಿಗೆ ಟೂರ್ನಿಯಲ್ಲಿ ಅತಿಹೆಚ್ಚು ರನ್ ಕಲೆ ಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ ಎಂದು ತಂಡದ ಕಾರ್ಯದರ್ಶಿ ಡಾ.ಶ್ರೀಕಾಂತ್ ರೈ ತಿಳಿಸಿದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್‌: 48 ಓವರ್‌ಗಳಲ್ಲಿ 253 (ನಿಶಿತ್ ರಾಜ್ 50, ಚಿರಂಜೀವಿ ಜಿ.ಎಸ್‌ 42, ಆದಿತ್ಯ ರೈ 49, ರೋಷನ್ ಶೆಟ್ಟಿ 54; ನಿಶ್ಚಿತ್ ಎನ್‌.ರಾವ್ 56ಕ್ಕೆ3, ಶ್ರೀಶ ಆಚಾರ್ 46ಕ್ಕೆ3, ರಿತೇಶ್ ಭಟ್ಕಳ್ 47ಕ್ಕೆ2, ಸಚಿನ್ ಭಟ್‌ 37ಕ್ಕೆ2); ಮಂಗಳೂರು ಸ್ಪೋರ್ಟ್ಸ್ ಕ್ಲಬ್‌: 48.2 ಓವರ್‌ಗಳಲ್ಲಿ 249 (ವಿಕ್ರಂ ಪಿ.ಎಸ್‌ 89, ರಿತೇಶ್ ಭಟ್ಕಳ್ 25, ಸತ್ಯಸ್ವರೂಪ್ 32, ನಿಶ್ಚಿತ್ ರಾವ್ 23; ಆರ್ಯನ್ 30ಕ್ಕೆ1, ಅಡ್ರಿಕ್ ಕಾರ್ಡೋಝಾ 33ಕ್ಕೆ1, ಶರತ್ ಪೂಜಾರಿ 67ಕ್ಕೆ2, ನಿಶಿತ್ ರಾಜ್ 33ಕ್ಕೆ2, ರೋಷನ್ ಶೆಟ್ಟಿ 37ಕ್ಕೆ4). ಫಲಿತಾಂಶ: ದಕ್ಷಿಣ ಕನ್ನಡ ಕ್ರಿಕೆಟ್ ಅಸೋಸಿಯೇಷನ್‌ಗೆ 4 ರನ್ ಜಯ; ಪ್ರಥಮ ಡಿವಿಷನ್‌ ಪ್ರಶಸ್ತಿ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.