ADVERTISEMENT

ಪ್ರತಿ ಲೀಟರ್‌ ಹಾಲಿಗೆ ₹ 2.05 ಪ್ರೋತ್ಸಾಹ ದರ

ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದಿಂದ ಹೈನುಗಾರರಿಗೆ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2022, 15:52 IST
Last Updated 7 ಅಕ್ಟೋಬರ್ 2022, 15:52 IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟವು ಸಹಕಾರಿ ಸಂಘಗಳ ಮೂಲಕ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ₹ 2.05 ಪ್ರೋತ್ಸಾಹ ದರ ನೀಡಲಿದೆ. ಈ ಪ್ರೋತ್ಸಾಹ ದರ ಎರಡರಿಂದ ಮೂರು ತಿಂಗಳ ಕಾಲ ಜಾರಿಯಲ್ಲಿರಲಿದೆ.

‘ಪ್ರೋತ್ಸಾಹ ದರವು ಅ. 11ರಿಂದಲೇ ಅನ್ವಯವಾಗಲಿದೆ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ದರ ನೀಡಿದರೂ ಅದರ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುವುದಿಲ್ಲ. ಹಾಲಿನ ಮಾರಾಟ ದರದಲ್ಲಿ ಹೆಚ್ಚಳ ಮಾಡುವುದಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ ತಿಳಿಸಿದ್ದಾರೆ.

ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದ್ಯ ಹೈನುಗಾರರಿಂದ ಹಾಲು ಖರೀದಿಸುವ ಕನಿಷ್ಠ ದರ ಪ್ರತಿ ಲೀಟರ್‌ಗೆ ₹ 29.05 ಇದೆ. ಇದಕ್ಕೆ ₹ 2.05 ಸೇರಿಸಿ ₹ 32 ದರ ನೀಡಲಾಗುತ್ತದೆ. ಶೀಘ್ರವೇ ರಾಜ್ಯ ಸರ್ಕಾರದಿಂದ ₹3ರವರೆಗೆ ಪ್ರೋತ್ಸಾಹ ಧನ ಜಾರಿಗೊಂಡರೆ, ಅದು ಕೂಡ ಹೆಚ್ಚುವರಿಯಾಗಿ ಹಾಲು ಉತ್ಪಾದಕರ ಕೈಸೇರಲಿದೆ. ಸಹಕಾರಿ ಸಂಘಕ್ಕೆ ಇನ್ನೂ ಹೆಚ್ಚಿನ ಗುಣಮಟ್ಟದ ಹಾಲು ನೀಡುವುದಕ್ಕೆ ಇದು ಪ್ರೇರಣೆ ಆಗಬೇಕು ಎಂಬ ನಿಟ್ಟಿನಲ್ಲಿ ಈ ಪ್ರೋತ್ಸಾಹಧನ ನೀಡಲಾಗುತ್ತಿದೆ’ ಎಂದರು.

ADVERTISEMENT

‘ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ಹಾಲು ಒಕ್ಕೂಟದ ಅಧೀನದಲ್ಲಿ ಹಾಲು ಉತ್ಪಾದಕರ 732 ‌ಸಹಕಾರಿ ಸಂಘಗಳಿವೆ. 68 ಸಾವಿರ ಹೈನುಗಾರರು ಹಾಲು ಪೂರೈಸುತ್ತಿದ್ದಾರೆ. ಅವರೆಲ್ಲರಿಗೂ ಇದರಿಂದ ಪ್ರಯೋಜನವಾಗಲಿದೆ’ ಎಂದು ಅವರು ತಿಳಿಸಿದರು.

‘ಎರಡು ತಿಂಗಳಲ್ಲಿ ಗರಿಷ್ಠ 5.65 ಲಕ್ಷ ಲೀಟರ್‌ವರೆಗೂ ಹಾಲು ಸಂಗ್ರಹವಾಗಿತ್ತು. ಹಾಲಿನಿಂದ ತಯಾರಿಸಿದ 19 ಬಗೆಯ ಉತ್ಪನ್ನಗಳನ್ನು ತಯಾರಿಸಲು ನಿತ್ಯ 5.30 ಲಕ್ಷ ಲೀಟರ್ ಹಾಲು ಬೇಕಾಗುತ್ತದೆ. ಆದರೆ ಸದ್ಯ ಇರುವ ಬೇಡಿಕೆಗೆ ತಕ್ಕಂತೆ ಹಾಲು ಉತ್ಪಾದನೆಯಾಗುತ್ತಿಲ್ಲ. ಈ ಕಾರಣಕ್ಕೆ ಹೈನುಗಾರರಿಗೆ ಉತ್ತೇಜನ ನೀಡಲು ಪ್ರೋತ್ಸಾಹಧನ ನೀಡಲು ಸರ್ವಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಬಗ್ಗೆ ಇದೇ 11ರಂದು ಒಕ್ಕೂಟದ ವಿಶೇಷ ಸಭೆಯಲ್ಲಿ ಘೋಷಣೆ ಮಾಡಲಾಗುವುದು’ ಎಂದು ತಿಳಿಸಿದರು.

‘ಪ್ರೋತ್ಸಾಹಧನ ನೀಡುವ ನಿರ್ಧಾರದಿಂದ ಒಕ್ಕೂಟಕ್ಕೆ ದಿನಕ್ಕೆ ₹ 10 ಲಕ್ಷದಂತೆ ತಿಂಗಳಿಗೆ ₹ 3 ಕೋಟಿಗಳಷ್ಟು ವೆಚ್ಚವಾಗಲಿದೆ’ ಎಂದರು.

‘ಮುಂದಿನ ದಿನಗಳಲ್ಲಿ ನಂದಿನಿ ಐಸ್‌ಕ್ರೀಂ ಮತ್ತು ಬೆಣ್ಣೆಯನ್ನು ಮಂಗಳೂರು ಹಾಲು ಒಕ್ಕೂಟದಲ್ಲೇ ಉತ್ಪಾದಿಸುವ ಉದ್ದೇಶವಿದೆ. ಈಗ ನಂದಿನಿ ಬೆಣ್ಣೆಯ ಕೊರತೆ ಎದುರಾಗಿದೆ. ಇದು ತಾತ್ಕಾಲಿಕ ಮಾತ್ರ. ಮುಂದಿನ ದಿನಗಳಲ್ಲಿ ಈ ಕೊರತೆ ನೀಗಲಿದೆ’ ಎಂದರು.

ಒಕ್ಕೂಟದ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಮಾರುಕಟ್ಟೆ ವ್ಯವಸ್ಥಾಪಕ ರವಿರಾಜ್ ಉಡುಪ ಇದ್ದರು.

–0–

ಹೈನುಗಾರರ ಮಕ್ಕಳಿಗೆ ವಿದ್ಯಾರ್ಥಿನಿಲಯ

ಹೈನುಗಾರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲು ಹಾಲು ಒಕ್ಕೂಟದಿಂದಲೇ ವಿದ್ಯಾರ್ಥಿನಿಲಯವನ್ನು ಕಲ್ಪಿಸಲು ಒಕ್ಕೂಟವು ನಿರ್ಧರಿಸಿದೆ. ಸುಮಾರು 50ರಿಂದ 100 ಹಾಸಿಗೆ ಸೌಲಭ್ಯವಿರುವ ವಿದ್ಯಾರ್ಥಿನಿಲಯವನ್ನುಮಂಗಳೂರಿನಲ್ಲಿ ನಿರ್ಮಿಸುವ ಉದ್ದೇಶವಿದೆ. ಈ ಸೌಲಭ್ಯ ಸಂಪೂರ್ಣ ಉಚಿತ. ಆದರೆ, ಆಹಾರ ವ್ಯವಸ್ಥೆಯನ್ನು ರಿಯಾಯಿತಿ ದರದಲ್ಲಿ ಒದಗಿಸುವ ಚಿಂತನೆ ಇದೆ ಎಂದು ಸುಚರಿತ ಶೆಟ್ಟಿ ತಿಳಿಸಿದರು.

ಬೆಂಗಳೂರಿನ ಶೆಟ್ಟಿಹಳ್ಳಿಯಲ್ಲೂ ಹಾಲು ಒಕ್ಕೂಟದ ವಿದ್ಯಾರ್ಥಿನಿಲಯ ಇದ್ದು, ಅಲ್ಲಿ ಸೇರ್ಪಡೆ ಬಯಸುವ ಹಾಲು ಉತ್ಪಾದಕರ ಮಕ್ಕಳು ಈ ಸೌಲಭ್ಯ ಬಳಸಿಕೊಳ್ಳಲು ಒಕ್ಕೂಟದಿಂದ ಶಿಫಾ‌ರಸು ಪತ್ರ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.