ADVERTISEMENT

‘ಒಕ್ಕೂಟಕ್ಕೆ ₹6.9 ಕೋಟಿ ನಿವ್ವಳ ಲಾಭ’

ದ.ಕ. ಹಾಲು ಉತ್ಪಾದಕರ ಒಕ್ಕೂಟದಿಂದ ₹815 ಕೋಟಿ ವಹಿವಾಟು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 13:33 IST
Last Updated 22 ಆಗಸ್ಟ್ 2019, 13:33 IST
ಮಂಗಳೂರಿನ ಕುಲಶೇಖರದ ಡೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ಮಾಹಿತಿ ನೀಡಿದರು.
ಮಂಗಳೂರಿನ ಕುಲಶೇಖರದ ಡೇರಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ಮಾಹಿತಿ ನೀಡಿದರು.   

ಮಂಗಳೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 2018–19 ನೇ ಸಾಲಿನಲ್ಲಿ ಒಟ್ಟು ₹815.66 ಕೋಟಿ ವಹಿವಾಟು ನಡೆಸಿದ್ದು, ₹6.9 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ್‌ ಹೆಗ್ಡೆ ತಿಳಿಸಿದರು.

ಕುಲಶೇಖರದಲ್ಲಿರುವ ಒಕ್ಕೂಟದ ಡೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಸದಸ್ಯರ ಪಾಲು ಬಂಡವಾಳಕ್ಕೆ ಶೇ 12 ರಷ್ಟು ಲಾಭಾಂಶ ಹಾಗೂ ಸದಸ್ಯ ಸಂಘಗಳ ವಹಿವಾಟಿಗೆ ಅನುಗುಣವಾಗಿ ಶೇ 25 ರಷ್ಟು ಬೋನಸ್‌ ನೀಡಲು ಶಿಫಾರಸು ಮಾಡಲಾಗಿದೆ ಎಂದರು.

ಸದಸ್ಯರಿಂದ ಖರೀದಿಸಿದ ಪ್ರತಿ ಲೀಟರ್‌ ಹಾಲಿಗೆ ₹31.53 ದರ ನೀಡಲಾಗುತ್ತಿದೆ. ಹೈನುಗಾರಿಕೆ ಅಭಿವೃದ್ಧಿಗಾಗಿ ಒಕ್ಕೂಟದ ಸದಸ್ಯರಿಗೆ ನೀಡುವ ವಿವಿಧ ಸವಲತ್ತುಗಳಿಗೆ ಪ್ರತಿ ಲೀಟರ್‌ಗೆ 67 ಪೈಸೆ ವೆಚ್ಚವನ್ನು ಅನುದಾನದ ರೂಪದಲ್ಲಿ ನೀಡಲಾಗಿದೆ. ಸದಸ್ಯರಿಗೆ ಪ್ರತಿ ಲೀಟರ್‌ಗೆ ಒಟ್ಟು ₹32.53 ದರವನ್ನು ನೀಡುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ ಎಂದು ತಿಳಿಸಿದರು.

ADVERTISEMENT

ಒಕ್ಕೂಟವು ಹಾಲು ಸಂಗ್ರಹಣೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದು, 2018–19 ರಲ್ಲಿ 31.77 ಲಕ್ಷ ತೃಪ್ತಿ (ಫ್ಲೆಕ್ಸಿ ಪ್ಯಾಕ್‌) ಹಾಲನ್ನು ಉತ್ಪಾದಿಸಿದ್ದು, ಕರ್ನಾಟಕ, ಕೇರಳ, ಮಹಾರಾಷ್ಟ್ರಗಳಿಗೆ ಮಾರಾಟ ಮಾಡಿದೆ. ಕರ್ನಾಟಕ ಹಾಲು ಮಹಾಮಂಡಳದ ನಿರ್ದೇಶನದಂತೆ ಮಂಡ್ಯ ಒಕ್ಕೂಟದ 9.38 ಲಕ್ಷ ಲೀಟರ್‌ ಹಾಲನ್ನು ‘ವಿಜಯ ವಜ್ರ’ ಬ್ರ್ಯಾಂಡಿನಡಿ ಕೋ–ಪ್ಯಾಕ್‌ ಮಾಡಿ, ಆಂಧ್ರಪ್ರದೇಶಕ್ಕೆ ಸರಬರಾಜು ಮಾಡಲಾಗಿದೆ ಎಂದು ಹೇಳಿದರು.

ಹೊಸ ಯೋಜನೆ: ಬರುವ ವರ್ಷ ₹911 ಕೋಟಿ ವಹಿವಾಟು ಸಾಧಿಸುವ ಗುರಿ ಹೊಂದಲಾಗಿದ್ದು, ಇದಕ್ಕೆ ಪೂರಕವಾಗಿ ವಿಭಾಗವಾರು ಯೋಜನೆಗಳನ್ನು ರೂಪಿಸಿ, ಗುರಿ ನೀಡಲಾಗಿದೆ ಎಂದು ರವಿರಾಜ್‌ ಹೆಗ್ಡೆ ತಿಳಿಸಿದರು.

ಪುತ್ತೂರಿನಲ್ಲಿ ₹12 ಕೋಟಿ ವೆಚ್ಚದಲ್ಲಿ ನೂತನ ಶೀತಲೀಕರಣ ಘಟಕ ಸ್ಥಾಪನೆ ಮತ್ತು ₹4 ಕೋಟಿ ವೆಚ್ಚದಲ್ಲಿ ಶಿಬಿರ ಕಚೇರಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಮಂಡಳೂರು ಡೇರಿಯಲ್ಲಿ ಅಟೋಮೇಷನ್‌ ಮಾಡಲು ₹2.50 ಕೋಟಿ ಮೀಸಲಿಡಲಾಗಿದೆ ಎಂದರು.

ಮಾರುಕಟ್ಟೆ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಹಾಲು ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನಕ್ಕೆ ₹24 ಲಕ್ಷ ವೆಚ್ಚದಲ್ಲಿ 2 ವಾಹನಗಳನ್ನು ಖರೀದಿ ಮಾಡಲು ಯೋಜಿಸಲಾಗಿದೆ. 2018 ರ ನವೆಂಬರ್‌, ಡಿಸೆಂಬರ್‌ ಹಾಗೂ ಈ ವರ್ಷದ ಜನವರಿಯಲ್ಲಿ ಗುರಿ ಮೀರಿ ಸಾಧನೆ ಮಾಡಿದ 688 ಡೀಲರ್‌ಗಳಿಗೆ ₹13 ಲಕ್ಷ ನಗದು ಬಹುಮಾನ ವಿತರಿಸಲಾಗಿದೆ ಎಂದು ಹೇಳಿದರು.

ಹಾಲಿನ ಹುಡಿ ಘಟಕ ಸ್ಥಾಪನೆ: 3 ವರ್ಷಗಳಿಂದ ಒಕ್ಕೂಟದಲ್ಲಿ ಹಾಲು ಸಂಗ್ರಹಣೆ ಹೆಚ್ಚಳವಾಗುತ್ತಿದೆ. ಅದನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ, ಉಳಿದ ಹಾಲನ್ನು ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಹೊರ ರಾಜ್ಯಗಳಿಗೆ ಹಾಲಿನ ಹುಡಿಯ ರೂಪದಲ್ಲಿ ಕಳುಹಿಸಲಾಗುತ್ತದೆ. ಹಾಲಿನ ಹುಡಿ ತಯಾರಿಕೆ, ಸಾಗಣೆ ವೆಚ್ಚಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಒಕ್ಕೂಟಕ್ಕೆ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಹೇಳಿದರು.

ಬರುವ ವರ್ಷಗಳಲ್ಲಿ ಹಾಲಿನ ಸಂಗ್ರಹಣೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಹೆಚ್ಚುವರಿ ಹಾಲನ್ನು ಸ್ಥಳೀಯವಾಗಿ ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಹಾಲಿನ ಹುಡಿ ಘಟಕವನ್ನು ಸ್ಥಾಪಿಸಲು ಮಂಡಳಿ ಚಿಂತನೆ ನಡೆಸಿದೆ. ಘಟಕದ ಸಾಧಕ–ಬಾಧಕಗಳು, ನೀಲನಕ್ಷೆ ಮತ್ತು ವೆಚ್ಚವನ್ನು ತಯಾರಿಸಲು ತಜ್ಞರ ಸೇವೆ ಪಡೆಯಲು ನಿರ್ಧರಿಸಲಾಗಿದೆ. ಈ ಯೋಜನೆಯಿಂದ ಹಾಲಿನ ಹುಡಿ ತಯಾರಿಕೆ ವೆಚ್ಚ ಮತ್ತು ಸಾಗಣೆ ವೆಚ್ಚಗಳು ಗಣನೀಯವಾಗಿ ಕಡಿಮೆಯಾಗಲಿವೆ. ನೀರಿನ ಸಮರ್ಪಕ ಬಳಕೆಯೊಂದಿಗೆ ನಂದಿನಿ ಮಿನರಲ್‌ ವಾಟರ್ ತಯಾರಿಸಲು ಅನುಕೂಲವಾಗಲಿದೆ ಎಂದು ರವಿರಾಜ್‌ ಹೆಗ್ಡೆ ತಿಳಿಸಿದರು.

ಒಕ್ಕೂಟದ ಉಪಾಧ್ಯಕ್ಷ ಪ್ರಕಾಶಚಂದ್ರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ವಿ. ಹೆಗ್ಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.