ಮಂಗಳೂರು: ‘ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಡಿಕೆಎಂಯುಎಲ್) ಆ.1ರಿಂದ 25 ಕೆ.ಜಿ.ಯ ಪಶು ಆಹಾರದ ಚೀಲಕ್ಕೆ ₹ 25 ಸಬ್ಸಿಡಿ ನೀಡಲಿದೆ’ ಎಂದು ಒಕ್ಕೂಟದ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಪಶು ಆಹಾರದ ಚೀಲಕ್ಕೆ ತಲಾ ₹ 1,350 ದರವಿದೆ. ಈ ವೆಚ್ಚ ಭರಿಸಲು ಸಾಧ್ಯವಾಗದೇ ಹೈನುಗಾರರು ಹೈರಾಣಾಗಿದ್ದಾರೆ. ಅವರ ಹಿತ ಕಾಯಲು ಕೈಗೊಂಡ ಈ ನಿರ್ಧಾರದಿಂದ ಒಕ್ಕೂಟಕ್ಕೆ ತಿಂಗಳಿಗೆ ಅಂದಾಜು ₹ 30 ಲಕ್ಷ ವೆಚ್ಚವಾಗಲಿದೆ’ ಎಂದರು.
ಒಕ್ಕೂಟವು 2023–24ನೇ ಸಾಲಿನಲ್ಲಿ ₹ 1,108 .08 ಕೋಟಿ ವಹಿವಾಟು ನಡೆಸಿದ್ದು, ₹ 8.29 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.
‘ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ನಮ್ಮ ಒಕ್ಕೂಟ ₹ 35 ನೀಡುತ್ತಿದೆ. ಇದರ ಜೊತೆ ಸರ್ಕಾರ ನೀಡುವ ₹ 5 ಸಬ್ಸಿಡಿಯೂ ಅವರಿಗೆ ಸಿಗುತ್ತಿದೆ. ಹಾಲಿನಲ್ಲಿ ಕೊಬ್ಬಿನಂಶ ಜಾಸ್ತಿಇದ್ದರೆ ಲೀಟರ್‌ಗೆ ಇನ್ನೂ ಸುಮಾರು ₹3 ಜಾಸ್ತಿ ಸಿಗುತ್ತದೆ. ಬೇರಾವ ಕಡೆಯೂ ಇಷ್ಟೊಂದು ಮೊತ್ತವನ್ನು ಹೈನುಗಾರರಿಗೆ ನೀಡುವುದಿಲ್ಲ’ ಎಂದರು.
‘ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ ಕನಿಷ್ಠ ₹ 40 ಸಿಕ್ಕಿದರೂ ಈ ಪ್ರದೇಶದಲ್ಲಿ ಹೈನುಗಾರಿಕೆ ಲಾಭದಾಯಕವಾಗಿಲ್ಲ. ವೆಚ್ಚವನ್ನು ಸರಿದೂಗಿಸಿ ಅವರು ಲಾಭ ಗಳಿಸಬೇಕಾದರೆ ಪ್ರತಿ ಲೀಟರ್ ಹಾಲಿಗೆ ₹ 5 ಹೆಚ್ಚು ಸಬ್ಸಿಡಿಯನ್ನಾದರೂ ನೀಡಬೇಕು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಇಲ್ಲದಿದ್ದರೆ ಈ ಪ್ರದೇಶಕ್ಕೆ ಸೀಮಿತವಾಗಿ ಹಾಲಿನ ಖರೀದಿ ದರ ಹೆಚ್ಚಿಸಲು ಸರ್ಕಾರ ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದರು.
‘ಪುತ್ತೂರಿನ ದಾರಂದಕುಕ್ಕುವಿನಲ್ಲಿ ಒಕ್ಕೂಟಕ್ಕೆ ಸರ್ಕಾರ 10 ಎಕರೆ ಜಾಗ ನೀಡಲು ಒಪ್ಪಿದೆ. ಅದರ ಪಕ್ಕದಲ್ಲಿರುವ 4.5 ಎಕರೆ ಖಾಸಗಿ ಜಾಗ ಖರೀದಿಗೂ ಮಾತುಕತೆ ನಡೆದಿದೆ. ಒಕ್ಕೂಟವು ₹ 3.27 ಕೋಟಿ ವೆಚ್ಚದಲ್ಲಿ 40 ಸಾವಿರ ರಾಸುಗಳಿಗೆ ವಿಮೆ ಮಾಡಿಸಿದೆ’ ಎಂದು ತಿಳಿಸಿದರು.
ಡಿಕೆಎಂಯುಎಲ್ ವ್ಯವಸ್ಥಾಪಕ ನಿರ್ದೇಶಕ ವಿವೇಕ ಡಿ., ‘ಕಡಬ ತಾಲ್ಲೂಕಿನ ಕೊಯಿಲದಲ್ಲಿ ಹಸಿರು ಮೇವು ಬೆಳೆಸಲು ಸರ್ಕಾರ 25 ಎಕರೆ ಜಾಗವನ್ನು ನೀಡಲು ಒಪ್ಪಿದೆ. ಇಲ್ಲಿ ಸಾಮಾಜಿಕ ಅರಣ್ಯ ಯೋಜನೆಯಡಿ ಅಕೇಶಿಯಾ ಮರಗಳನ್ನು ಬೆಳೆಸಲಾಗಿದೆ. ಇವುಗಳನ್ನು ಕಟಾವುಗೊಳಿಸಿ ಜಾಗ ಹಸ್ತಾಂತರಿಸುವಂತೆ ಪತ್ರಬರೆದಿದ್ದೇವೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ.ಜಯರಾಮ ರೈ, ಕೆಎಂಎಫ್ ಆಡಳಿತ ಮಂಡಳಿ ಸದಸ್ಯ ಕಾಪು ದಿವಾಕರ ಶೆಟ್ಟಿ ಹಾಗೂ ನಿರ್ದೇಶಕರು ಭಾಗವಹಿಸಿದ್ದರು.
‘ಕೈ ಹಿಡಿದ ರಸಮೇವು’
‘ಒಕ್ಕೂಟವು ಮಾರ್ಚ್‌ನಿಂದ ಜೂನ್‌ವರೆಗೆ 2 ಸಾವಿರ ಟನ್ ರಸಮೇವನ್ನು ಬೇರೆ ಜಿಲ್ಲೆಗಳಿಂದ ತರಿಸಿ ಸಬ್ಸಿಡಿ ದರದಲ್ಲಿ ಹೈನುಗಾರರಿಗೆ ಪೂರೈಸಿದೆ. ಇದರಿಂದಾಗಿ ದೈನಂದಿನ ಹಾಲು ಉತ್ಪಾದನೆ 3.15 ಲಕ್ಷ ಲೀಟರ್‌ನಿಂದ 3.76 ಲಕ್ಷ ಲೀಟರ್‌ವರೆಗೂ ತಲುಪಿತ್ತು’ ಎಂದು ವಿವೇಕ ಡಿ. ತಿಳಿಸಿದರು. ‘ಉಭಯ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಉಷ್ಣಾಂಶ ಜಾಸ್ತಿಯಾಗುವುದರಿಂದ ಮೇವಿನ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ. ಹಸಿರು ಮೇವಿಗೆ ಖನಿಜಾಂಶ ಮಿಶ್ರಮಾಡಿ ರಸಮೇವು (ಸೈಲೇಜ್) ತಯಾರಿಸಬಹುದು. ಇದನ್ನು 6 ತಿಂಗಳು ಕೆಡದಂತೆ ಇಡಬಹುದು. 50 ಸೆಂಟ್ಸ್ ಜಾಗವಿದ್ದರೂ ರಸ ಮೇವಿಗಾಗಿ ಹಸಿರು ಹುಲ್ಲು ಬೆಳೆಸಬಹುದು. ಸ್ವತಃ ಹಸಿರು ಮೇವು ಬೆಳೆದು ರಸಮೇವು ತಯಾರಿಸಲು ಆಸಕ್ತಿ ಹೊಂದಿದವರಿಗೆ ತರಬೇತಿ ನೀಡುತ್ತೇವೆ. ಪ್ರತಿ ಎಕರೆಗೆ ₹ 10 ಸಾವಿರ ಸಹಾಯಧನವನ್ನೂ ನೀಡುತ್ತೇವೆ’ ಎಂದರು.
‘ಮಳೆಗೆ ಹಾಲು ಉತ್ಪಾದನೆ ಕುಸಿತ’
ಹತ್ತು ದಿನಗಳಿಂದ ಭಾರಿ ಮಳೆಯಾಗುತ್ತಿರುವ ಕಾರಣ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದೈನಂದಿನ ಹಾಲು ಉತ್ಪಾದನೆ ಸುಮಾರು 45 ಸಾವಿರ ಲೀಟರ್‌ಗಳಷ್ಟು ಕುಸಿದಿದೆ. ಸದ್ಯಕ್ಕೆ ನಿತ್ಯ 3.91 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಗ್ರಾಹಕರ ಬೇಡಿಕೆ ಪೂರೈಸಲು ಒಕ್ಕೂಟವು ಹಾಸನ ಶಿವಮೊಗ್ಗ ಹಾಗೂ ಮಂಡ್ಯ ಜಿಲ್ಲೆಗಳಿಂದ ಹಾಲನ್ನು ತರಿಸಿಕೊಳ್ಳುತ್ತಿದೆ ಎಂದು ಸುಚರಿತ ಶೆಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.