ಮಂಗಳೂರು: ವೈದ್ಯಕೀಯ ಸೇವಾ ವೃತ್ತಿಯು ಪ್ರಾಮಾಣಿಕತೆ, ಮಾನವತೆ, ಸೇವಾ ಮನೋಭಾವದ ವೃತ್ತಿಯಾಗಿರಬೇಕು, ಅದು ವ್ಯಾವಹಾರಿಕ ಆಗಿರಬಾರದು ಎಂದು ಬೆಂಗಳೂರು ಗ್ರಾಮೀಣ ಕ್ಷೇತ್ರದ ಸಂಸದ ಡಾ. ಸಿ.ಎನ್. ಮಂಜುನಾಥ ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ವೈದ್ಯರು ರೋಗಿಗಳ ಅಪೇಕ್ಷೆ ಮತ್ತು ನಿರೀಕ್ಷೆಯ ಮಟ್ಟಕ್ಕೆ ಸ್ಪಂದಿಸಬೇಕು ಹಾಗೂ ಅವರ ಆರ್ಥಿಕ ಹಿನ್ನೆಲೆ ಮತ್ತು ಪರಿಸ್ಥಿತಿಯನ್ನು ಪರಿಗಣಿಸಿ ಶ್ರೇಷ್ಠ ಆಧುನಿಕ ಶೈಲಿಯ ಶಸ್ತ್ರತಜ್ಞ ಜ್ಞಾನವನ್ನು ಬಳಸಿ ಬಡವರಿಗೆ ಸೇವೆ ನೀಡಬೇಕು ಎಂದರು.
ದೇಶದಲ್ಲಿ ಲಕ್ಷಾಂತರ ಜನರು ಪ್ರತಿವರ್ಷ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ. ಅದನ್ನು ತಡೆಗಟ್ಟಲು, ಪ್ರಯಾಣಿಕರ ಸುರಕ್ಷತೆ ಕಾಪಾಡಲು ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದರು.
ಸಂಸ್ಥೆಯ ಗೃಹ ವಾರ್ತಾಪತ್ರಿಕೆಯಾದ ‘ಮೆಡಿಲೋರ್’ ಅನ್ನು ಬಿಡುಗಡೆಗೊಳಿಸಿದರು.
ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ವೆಂಕಟ್ರಾಯ ಪ್ರಭು ಪದಗ್ರಹಣ ನೆರವೇರಿಸಿದರು. ಶಸ್ತ್ರ ಚಿಕಿತ್ಸಾ ತಜ್ಞ ಡಾ. ಭಾಸ್ಕರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ನೂತನ ಅಧ್ಯಕ್ಷ ಡಾ. ಸದಾನಂದ ಪೂಜಾರಿ ಮಾತನಾಡಿ, ‘ಇದೊಂದು ಜವಾಬ್ದಾರಿಯುತ ಮತ್ತು ಸವಾಲುಗಳನ್ನು ಎದುರಿಸುವ ಹುದ್ದೆಯಾಗಿದ್ದು, ಧೈರ್ಯವಾಗಿ ಮತ್ತು ಯಶಸ್ವಿಯಾಗಿ ನಿರ್ವಹಿಸುತ್ತೇನೆ’ ಎಂದರು.
ವೈದ್ಯರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಾದ ಹಲ್ಲೆ, ಬೆದರಿಕೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಸಂಸದರಿಗೆ ನೀಡಲಾಯಿತು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಶಿವಪ್ರಕಾಶ್, ಡಾ. ಮಧುಸೂದನ್, ಡಾ. ಜೂಲಿಯನ್ ಸಲ್ಡಾನ, ಮಹಿಳಾ ವೈದ್ಯ ವಿಭಾಗದ ಅಧ್ಯಕ್ಷೆ ಡಾ. ಪ್ರೇಮಾ ಡಿಕುನ್ಹಾ ಉಪಸ್ಥಿತರಿದ್ದರು.
ನಿರ್ಗಮಿತ ಅಧ್ಯಕ್ಷೆ ಡಾ. ಜೆಸ್ಸಿ ಮರಿಯಾ ಡಿಸೋಜ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ಅರ್ಚನಾ ಭಟ್ ವಾರ್ಷಿಕ ವರದಿ ಮಂಡಿಸಿದರು. ಡಾ.ಸುನಿಲ್ ಜತ್ತನ್ನ ಮತ್ತು ಡಾ. ಮಧುರ ಭಟ್ ನಿರೂಪಿಸಿದರು. ಡಾ. ಪ್ರಕಾಶ್ ಹರಿಶ್ಚಂದ್ರ ವಂದಿಸಿದರು.
ರೋಗಿಗಳ ನಿರೀಕ್ಷೆ ಮಟ್ಟಕ್ಕೆ ಸ್ಪಂದಿಸಿ ಅಪಘಾತ ತಡೆಗೆ ಸರ್ಕಾರದಿಂದ ವಿವಿಧ ಕಾರ್ಯಕ್ರಮ ಶಸ್ತ್ರಚಿಕಿತ್ಸಾ ತಜ್ಞ ಡಾ. ಭಾಸ್ಕರ್ ಶೆಟ್ಟಿ ಅವರಿಗೆ ಸನ್ಮಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.