
ನೆಲ್ಯಾಡಿ (ಉಪ್ಪಿನಂಗಡಿ): ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡವರ ಮನಸ್ಸು ದೃಢವಾಗಿರಬೇಕು. ಮತ್ತೆ ಮದ್ಯವ್ಯಸನಿಗಳಾಗಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲ್ಲೂಕು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನೆಲ್ಯಾಡಿಯಲ್ಲಿ ನಡೆಯುತ್ತಿರುವ 2038ನೇ ಮದ್ಯವರ್ಜನ ಶಿಬಿರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ಪಾನಮುಕ್ತರಾದವರ ಮಕ್ಕಳೂ ಉನ್ನತ ವ್ಯಾಸಂಗ ಪಡೆದು ಉದ್ಯೋಗದಲ್ಲಿದ್ದಾರೆ. ಇದು ಮದ್ಯವರ್ಜನ ಶಿಬಿರ ಆದ ಬಳಿಕದ ಬೆಳವಣಿಗೆಯಾಗಿದೆ. 50 ಜನ ಪಾನಮುಕ್ತರಾದಲ್ಲಿ 1 ವರ್ಷದಲ್ಲಿ ಅವರಿಗೆ ಒಟ್ಟು ₹ 1 ಕೋಟಿ ರೂಪಾಯಿಗೂ ಹೆಚ್ಚು ಉಳಿತಾಯ ಆಗುತ್ತಿದೆ. ಆದರೆ, ಇದರಿಂದ ನಷ್ಟ ಆಗುವವರು ಮದ್ಯವರ್ಜನ ಶಿಬಿರವನ್ನು ದೂಷಿಸುತ್ತಾರೆ. ಇದಕ್ಕೆ ನಾವು ಹೆದರಬಾರದು. ಯಾರೋ ನಿಂದಿಸುತ್ತಾರೆ ಎಂದು ಮದ್ಯವರ್ಜನ ಶಿಬಿರ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ವರ್ಗೀಸ್ ಕೈಪುನಡ್ಕ ಮಾತನಾಡಿ, ಮದ್ಯಪಾನದಿಂದ ಆರೋಗ್ಯ, ಸಂತೋಷ, ನೆಮ್ಮದಿ ಕೈ ತಪ್ಪುತ್ತದೆ. ಆದ್ದರಿಂದ ಮದ್ಯಪಾನ ತ್ಯಜಿಸಿ ಆರೋಗ್ಯಯುತ ಜೀವನ ನಡೆಸುವಂತೆ ಹೇಳಿದರು.
ಪುತ್ತೂರು ಎಸ್ಆರ್‌ಕೆ ಲ್ಯಾಡರ್ಸ್ ಸಂಸ್ಥೆಯ ಕೇಶವ ಅಮೈ, ಜನಜಾಗೃತಿ ವೇದಿಕೆ ಟ್ರಸ್ಟ್ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಬಾಬು ನಾಯ್ಕ, ಜನಜಾಗೃತಿ ವೇದಿಕೆಯ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಪದ್ಮನಾಭ ಶೆಟ್ಟಿ, ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ನೆಲ್ಯಾಡಿ-ಕೌಕ್ರಾಡಿಯ ಗೌರವಾಧ್ಯಕ್ಷ ಶ್ರೀಧರ ಗೋರೆ, ಶಿಬಿರದ ವೈದ್ಯಾಧಿಕಾರಿ ಡಾ.ಮೋಹನ್‌ದಾಸ್ ಗೌಡ, ಜನಜಾಗೃತಿ ವೇದಿಕೆ ನೆಲ್ಯಾಡಿ ವಲಯಾಧ್ಯಕ್ಷ ಜಯಾನಂದ ಬಂಟ್ರಿಯಾಲ್, ಕಡಬ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್‌ಕುಮಾರ್ ಭಾಗವಹಿಸಿದ್ದರು.
ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ನೆಲ್ಯಾಡಿ-ಕೌಕ್ರಾಡಿಯ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಸ್ವಾಗತಿಸಿ, ಕಡಬ ತಾಲ್ಲೂಕು ಘಟಕದ ಅಧ್ಯಕ್ಷ ಮಹೇಶ್ ಸವಣೂರು ವಂದಿಸಿದರು. ಶಿವಪ್ರಸಾದ್ ರೈ ಮೈಲೇರಿ ನಿರೂಪಿಸಿದರು.
ಬ್ಯಾಗ್ ವಿತರಣೆ, ಸನ್ಮಾನ: ಶೌರ್ಯ ವಿಪತ್ತು ನಿರ್ವಹಣಾ ನೆಲ್ಯಾಡಿ ಘಟಕದ ಸದಸ್ಯರಿಗೆ ಸಾಂಕೇತಿಕವಾಗಿ ಬ್ಯಾಗ್ ವಿತರಣೆ ಮಾಡಲಾಯಿತು. ಯೋಜನೆಯ ಜನಮಂಗಳ ಕಾರ್ಯಕ್ರಮದಡಿ ಸುರೇಂದ್ರ ಪಡುಬೆಟ್ಟು ಅವರಿಗೆ ವಾಕರ್, ತಿಮ್ಮಪ್ಪ ರೈ ಪಿಜಕ್ಕಳ ಅವರಿಗೆ ವಾಟರ್ ಬೆಡ್, ಅಕ್ಕಮ್ಮ ಅಬ್ರಹಾಂ ಅವರಿಗೆ ಗಾಲಿಕುರ್ಚಿ ವಿತರಿಸಲಾಯಿತು. ನೆಲ್ಯಾಡಿ-ಕೌಕ್ರಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವತಿಯಿಂದ ಉದ್ಯಮಿ, ಎಸ್ಆರ್‌ಕೆ ಲ್ಯಾಡರ್ಸ್ ಮಾಲೀಕ ಕೇಶವ ಅಮೈ ಅವರನ್ನು ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.