ADVERTISEMENT

ಬಿಜೆ‍ಪಿಯಂತೆ ನಮ್ಮಲ್ಲಿ ಅನಾರೋಗ್ಯಕರ ಪೈಪೋಟಿ ಇಲ್ಲ: ದಿನೇಶ್ ಗುಂಡೂರಾವ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 13:50 IST
Last Updated 15 ಫೆಬ್ರುವರಿ 2025, 13:50 IST
ದಿನೇಶ್ ಗುಂಡೂರಾವ್‌
ದಿನೇಶ್ ಗುಂಡೂರಾವ್‌   

ಮಂಗಳೂರು: ‘ಒಬ್ಬರ ಮೇಲೊಬ್ಬರು ಕೆಸರು ಎರಚುವುದು, ಆಪಾದನೆ ಮಾಡುವುದು, ಪತ್ರಿಕಾ ಗೋಷ್ಠಿ ಕರೆದು ಬೈಯುವುನ್ನು ಬಿಜೆಪಿಯಲ್ಲಿ ಕಾಣಬಹುದು. ಅಂತಹ ಕೆಟ್ಟ ಪರಿಸ್ಥಿತಿಗೆ ನಾವು ತಲುಪಿಲ್ಲ. ಬಿಜೆಪಿಯವರಂತೆ ನಮ್ಮ ಪಕ್ಷದಲ್ಲಿ ಅನಾರೋಗ್ಯಕರ ಪೈಪೋಟಿ ಇಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್‌ ಹೇಳಿದರು.

ಇಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಮ್ಮ ಪಕ್ಷದಲ್ಲೂ ಆಂತರಿಕ ವಿಚಾರಗಳು ಇದ್ದೇ ಇರುತ್ತವೆ. ನಮ್ಮಲ್ಲಿ ಕೆಲವರು ಅವರದ್ದೇ ಆದ ರೀತಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಅದು ಇತಿಮಿತಿಯಲ್ಲಿ ಇರಬೇಕು. ನಾಯಕರನ್ನು ಭೇಟಿಯಾಗಲು ಯಾವ ನಿರ್ಬಂಧವೂ ಇಲ್ಲ’ ಎಂದರು.

‘ದಲಿತರ ಸಮ್ಮೇಳನ ನಡೆಸುವುದು ಬೇಡ ಎಂದು ಯಾರೂ ಹೇಳಿಲ್ಲ. ಅದನ್ನು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಚರ್ಚೆ ಆಗುತ್ತಿದೆ ಅಷ್ಟೆ. ಈ ಹಿಂದೆಯೂ ದಾವಣಗೆರೆಯಲ್ಲಿ ದೊಡ್ಡ ಸಮಾವೇಶ ಮಾಡಿದ್ದೆವು. ಕಾಂಗ್ರೆಸ್ ಯಾವತ್ತೂ ಸಾಮಾಜಿಕ ನ್ಯಾಯದ ಪರ, ಬಡವರು ಶೋಷಿತರ ಪರ ನಿಂತ ಪಕ್ಷ.  ಇಂತಹ ಜನಾಂಗಗಳ ಪ್ರಮುಖ ನಾಯಕರನ್ನು ಹೊಂದಿರುವ ಪಕ್ಷ. ಬಹಳ ದೊಡ್ಡ ಕಾರ್ಯಕ್ರಮ ಮಾಡುವ ಒಳ್ಳೆಯ ಉದ್ದೇಶವಿದೆ. ಅದು ಯಾವ ರೂಪದಲ್ಲಿ ಆಗಬೇಕು ಎಂದು ತೀರ್ಮಾನ ಆಗಬೇಕಿದೆ ಅಷ್ಟೇ’ ಎಂದರು.

ADVERTISEMENT

‘ದಲಿತ ಮುಖ್ಯಮಂತ್ರಿ ಬಗ್ಗೆ ಯಾರೂ ಈಗ ಮಾತನಾಡುತ್ತಿಲ್ಲ. ಹಿಂದೊಮ್ಮೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಆಗುವ ಅವಕಾಶವಿತ್ತು. ಆಗ ಪಕ್ಷವು ಅಧಿಕಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಬಳಿಕ ಜಿ.ಪರಮೇಶ್ವರ ಅವರಿಗೂ ಅವಕಾಶ ಇತ್ತು. ಅವರು ಚುನಾವಣೆಯಲ್ಲಿ ಗೆಲ್ಲದ ಕಾರಣ ಉಪಮುಖ್ಯಮಂತ್ರಿಯಾದರು. ಹಿಂದುಳಿದ ವರ್ಗಗಳು ಹಾಗೂ ಸಣ್ಣ ಸಣ್ಣ ಸಮುದಾಯಗಳ ನಾಯಕರೂ ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ ನೇತೃತ್ವದ ಸರ್ಕಾರಗಳಲ್ಲಿ ಮಾತ್ರ. ನಮ್ಮ ಪಕ್ಷದಿಂದ ಆರ್. ಗುಂಡೂರಾವ್‌, ಎಸ್‌.ಬಂಗಾರಪ್ಪ, ಎಂ.ವೀರಪ್ಪ ಮೊಯಿಲಿ, ಸಿದ್ದರಾಮಯ್ಯನಂತಹವರು ಮುಖ್ಯಮಂತ್ರಿ ಆಗಿದ್ದಾರೆ. ಬೇರೆ ಸಮುದಾಯದವರೂ ಆಗಿದ್ದಾರೆ.’ ಎಂದರು.  

‘ಆರ್‌.ಅಶೋಕ ಅವರ ಹೇಳಿಕೆಗೆ ಹಿಂದು– ಮುಂದು, ತಲೆ–ಬಾಲ ಏನೂ ಇರುವುದಿಲ್ಲ.   ವಿರೋಧ ಪಕ್ಷದ ನಾಯಕನಾಗಿ ಏನೋ ಹೇಳಿಕೆ ಕೊಡಬೇಕು ಎಂಬ ಕಾರಣಕ್ಕೆ ಮಾತನಾಡುತ್ತಿದ್ದಾರೆ. ಅವರ ಪಕ್ಷದಲ್ಲೇ ಅವರಿಗೆ ಪ್ರಾತಿನಿಧ್ಯ ಸಿಗುತ್ತದೋ ಗೊತ್ತಿಲ್ಲ. ಅವರನ್ನೇ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಇಳಿಸಲು ಹೊರಟಿದ್ದಾರೆ. ಅವರು ಎಲ್ಲೂ ತೂಕವಾಗಿ ಮಾತನಾಡುತ್ತಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.