ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರೈತರ ಕುಮ್ಕಿ ಜಮೀನನ್ನು ಭೋಗ್ಯಕ್ಕೆ ನೀಡುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರೈತರಿಗೆ ಸಮಸ್ಯೆಯನ್ನು ಉಂಟುಮಾಡುವ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಶಾಸಕ ಹರೀಶ್ ಪೂಂಜ ಒತ್ತಾಯಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಈ ಜಿಲ್ಲೆಗಳಲ್ಲಿ ಕೃಷಿಗೆ ಬೇಕಾದ ಸೊಪ್ಪು ಬಳಸಲು ರೈತರರಿಗೆ ಈ ಹಿಂದೆ ಸರ್ಕಾರವೇ ಕುಮ್ಕಿ ಜಮೀನಿನ ಹಕ್ಕು ನೀಡಿದೆ.ಈ ಜಮೀನನ್ನು ಕೃಷಿಕರೇ ನೋಡಿಕೊಂಡು ಬರುತ್ತಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಈ ಹಕ್ಕನ್ನು ಕಿತ್ತುಕೊಂಡು ಖಜಾನೆ ತುಂಬಿಸಲು ಹೊರಟಿದೆ. ಸರ್ಕಾರ ಅದನ್ನು ಭೂಗ್ಯಕ್ಕೆ ನೀಡಿ ಹಣ ಮಾಡುವ ಮೂಲಕ ರೈತರ ಕತ್ತು ಹಿಸುಕಲು ಮುಂದಾಗಿದೆ.ಒಮ್ಮೆ ಭೂಮಿ ಕೈತಪ್ಪಿದರೆ ಹೋದಲ್ಲಿ ಅದರ ಹಕ್ಕು ಮರಳಿ ಅವರಿಗೆ ಸಿಗಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು.
‘ರೈತರ ಹಿತಾಸಕ್ತಿಗೆ ವಿರುದ್ಧವಾದ ಈ ಸುತ್ತೋಲೆಯನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ರೈತರೊಡಗೂಡಿ ತೀವ್ರ ಹೋರಾಟ ನಡೆಸಲಿದೆ’ ಎಂದು ಎಚ್ಚರಿಸಿದರು.
ಈ ಜಮೀನಿನಲ್ಲಿ 2005ಕ್ಕಿಂತ ಮೊದಲಿನಿಂದಲೂ ಬೆಳೆ ಬೆಳೆಯುತ್ತಿದ್ದವರು ಹಾಗೂ ಒಂದು ಕುಟುಂಬ ಗರಿಷ್ಠ 25 ಎಕರೆ ಜಮೀನನ್ನು ಸುಮಾರು 30 ವರ್ಷಕ್ಕೆ ಗುತ್ತಿಗೆಗೆ ಪಡೆಯಲು ಅವಕಾಶವಿದೆ. ಭೋಗ್ಯಕ್ಕೆ ಜಮೀನನ್ನು ಪಡೆಯುವವರು 1 ಎಕರೆಗೆ ₹ 1 ಸಾವಿರ, 1ರಿಂದ 5 ಎಕರೆಗೆ ₹ 1,500, 5 ರಿಂದ 10 ಎಕರೆಗೆ ₹ 2 ಸಾವಿರ, ₹ 10ರಿಂದ 15 ಎಕರೆವರೆಗೆ ಪ್ರತಿ ಎಕರೆಗೆ ₹ 2,500, 15ರಿಂದ 20 ಎಕರೆವರೆಗೆ ಪ್ರತಿ ಎಕರೆಗೆ ₹ 3 ಸಾವಿರ, 20ರಿಂದ 25 ಎಕರೆವರೆಗೆ ಪ್ರತಿ ಎಕರೆಗೆ ₹ 3,500 ನೀಡಬೇಕು ಎಂದು ನಿಗದಿ ಪಡಿಸಲಾಗಿದೆ. ಮೊತ್ತವನ್ನು ರೈತರು ಏಕಗಂಟಿನಲ್ಲಿ ಪಾವತಿಸಬೇಕಾಗಿದೆ. ಜಮೀನನ್ನು ಉಪ ಗುತ್ತಿಗೆಗೆ ನೀಡಲು ಅವಕಾಶವಿಲ್ಲ. ಈ ಬಗ್ಗೆ ಸರ್ಕಾರ ಮಾರ್ಚ್‌ನಲ್ಲಿ ಆದೇಶ ಹೊರಡಿಸಿದೆ. ಮೂರು ತಿಂಗಳ ಒಳಗೆ ಗುತ್ತಿಗೆಗೆ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಿದೆ. ಈ ಅವಧಿ ಮುಗಿದಿದೆಯಾದರೂ ಇದು ರೈತರ ಜಮೀನು ಕಸಿಯುವ ಭೀತಿ ಇನ್ನೂ ಜೀವಂತವಾಗಿದೆ’ ಎಂದರು.
ದ.ಕ.ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಅರ್ಜಿ ಶೇ.70ರಷ್ಟು ವಿಲೇವಾರಿಗೊಂಡಿದೆ. ಈಗ ಕುಮ್ಮಿ ಹಕ್ಕಿನ ಮೇಲೆ ಸರ್ಕಾರ ಕಣ್ಣಿಟ್ಟಿದ್ದು, ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಮೊತ್ತ ವಸೂಲಿಗೆ ಮುಂದಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಕುಮ್ಮಿ ಹಕ್ಕು ಸಕ್ರಮಗೊಳಿಸಲು ಅಂತಿಮ ಸಿದ್ಧತೆ ನಡೆಸಲಾಗಿತ್ತು. ಒಮ್ಮೆ ಕುಮ್ಕಿ ಜಮೀನನನ್ನು ಭೋಗ್ಯಕ್ಕೆ ನೀಡಿದರೆ ಆ ಜಮೀನು ಮತ್ತೆ ಕೃಷಿಕರದ್ದಾಗಿರಲು ಸಾಧ್ಯವೇ ಇಲ್ಲ’ ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ವಿಧಾಣ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಪಕ್ಷದ ಮುಖಂಡರಾದ ಪ್ರೇಮಾನಂದ ಶೆಟ್ಟಿ ಸತೀಶ್ ಆರ್ವಾರ್, ರಾಜಗೋಪಾಲ ರೈ ಹಾಗೂ ವಸಂತ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.