
ಮಂಗಳೂರು: ‘ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಅನುದಾನವನ್ನೇ ನೀಡುತ್ತಿಲ್ಲ ಎಂದು ಆರೋಪಿಸಿ ಶಾಸಕ ಡಿ.ವೇದವ್ಯಾಸ ಕಾಮತ್ ಜನರ ದಾರಿ ತಪ್ಪಿಸುತ್ತಿದ್ದಾರೆ. ಇಂತಹ ಹೇಳಿಕೆ ನೀಡುವ ಬದಲು ನಗರದ ಅಭಿವೃದ್ಧಿ ವಿಚಾರದಲ್ಲಿ ಎಲ್ಲರನ್ನೂ ಒಟ್ಟಾಗಿ ಶ್ರಮಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.6ರಂದು ಬಜೆಟ್ ಮಂಡಿಸಲಿದ್ದಾರೆ. ಶಾಸಕರು ಸರ್ವಪಕ್ಷಗಳ ನಿಯೋಗವನ್ನು ಒಯ್ದು ಬಜೆಟ್‌ನಲ್ಲಿ ನಗರದ ಯಾವೆಲ್ಲ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬೇಕು ಎಂದು ಬೇಡಿಕೆ ಸಲ್ಲಿಸಬಹುದಿತ್ತು. ಅಭಿವೃದ್ಧಿಗೆ ಅನುದಾನವನ್ನೇ ನೀಡುತ್ತಿಲ್ಲ ಎಂದು ಜರೆಯುತ್ತಿರುವ ಶಾಸಕರು, ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅದಕ್ಕೆಲ್ಲ ಅನುದಾನ ಬಂದಿದ್ದು ಎಲ್ಲಿಂದ’ ಎಂದು ಪ್ರಶ್ನಿಸಿದರು.
ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಮೊದಲ ಹಂತದಲ್ಲಿ ನಗರಕ್ಕೆ ₹ 125 ಕೋಟಿ ಬಿಡುಗಡೆಯಾಗಿದ್ದು, ಅದರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಎರಡನೇ ಹಂತದಲ್ಲಿ ₹ 165 ಕೋಟಿಯ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಪಾಲಿಕೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯವರು ₹ 10 ಕೋಟಿ ಮೊತ್ತದ 225 ಕಾಮಗಾರಿಗಳಿಗೆ ಮಂಜೂರಾತಿ ನೀಡಿದ್ದಾರೆ. ಇವೆಲ್ಲ ಅಭಿವೃದ್ಧಿ ಕಾರ್ಯಗಳಲ್ಲವೇ’ ಎಂದು ಪ್ರಶ್ನಿಸಿದರು.
‘ಜೆ.ಆರ್.ಲೋಬೊ ಒಂದು ಅವಧಿಗೆ (2013–18) ಶಾಸಕರಾಗಿದ್ದು ಹೊರತಾಗಿ ನಗರ ದಕ್ಷಿಣ ಕ್ಷೇತ್ರಕ್ಕೆ 30 ವರ್ಷಗಳಿಂದ ಬಿಜೆಪಿ ಶಾಸಕರೇ ಇದ್ದರು. ಅವರ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿಲ್ಲವೇಕೆ. ಕಾಮತ್ ಶಾಸಕರಾದ ಬಳಿಕ ನಗರಕ್ಕೆ ಯಾವುದಾದರೂ ದೊಡ್ಡ ಕಾಮಗಾರಿ ಮಂಜೂರಾಗಿದೆಯೇ. ರಾಜ್ಯ ಮತ್ತು ಕೇಂದ್ರಗಳೆರಡಲ್ಲೂ ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ನಗರದ ಒಳಚರಂಡಿ ಹಾಗೂ ಕುಡಿಯುವ ನೀರು ಪೂರೈಕೆಗೆ ದೊಡ್ಡ ಯೋಜನೆಗಳನ್ನು ಮಂಜೂರು ಮಾಡಿಸಲಿಲ್ಲ ಏಕೆ’ ಎಂದು ಪ್ರಶ್ನಿಸಿದರು.
‘ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ನೀಡಬೇಕು. ನಗರಕ್ಕೆ ವರ್ತುಲ ರಸ್ತೆ, ಕಿನಾರೆಗೆ ಸಮಾನಾಂತರವಾಗಿ ರಸ್ತೆಯನ್ನು ಸರ್ಕಾರದ ವತಿಯಿಂದ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಬೇಕು. ಸಸಿಹಿತ್ಲು ಹಾಗೂ ಬೆಂಗರೆ ಕಡಲ ಕಿನಾರೆಗಳನ್ನು ಪ್ರವಾಸಿ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಬೇಕು. ನಗರದ ಅಭಿವೃದ್ಧಿಗೆ ₹ 100 ಕೋಟಿ ವಿಶೇಷ ಪ್ಯಾಕೇಜ್ ಮಂಜೂರು ಮಾಡಬೇಕು. ಒಳಚರಂಡಿ ಮೇಲ್ದರ್ಜೆಗೇರಿಸಲು ಅನುದಾನ ನೀಡಬೇಕು. ನಗರಲ್ಲಿ ಹೈಕೋರ್ಟ್ ಪೀಠವನ್ನು ಅಥವಾ ಸಂಚಾರಿ ಪೀಠವನ್ನು ಮಂಜೂರು ಮಾಡಬೇಕು ಎಂದು ಸರ್ಕಾರವನ್ನು ಕೋರಿದ್ದೇನೆ’ ಎಂದರು.
‘ನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಟೆಂಡರ್ ಕರೆದಾಗ ಯಾರೂ ಆಸಕ್ತಿ ವಹಿಸಿಲ್ಲ. ಐಟಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರಿ ಜಮೀನನ್ನು 30 ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡಲಾಗುತ್ತದೆ. ಈ ಅವಧಿಯನ್ನು ಹೆಚ್ಚಿಸಬೇಕು ಎಂದು ಐಟಿ ಉದ್ಯಮಿಗಳ ಬೇಡಿಕೆ. ಇದಕ್ಕೆ ಸರ್ಕಾರ ಸ್ಪಂದಿಸಬೇಕು’ ಎಂದರು.
ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕ ಗೆದ್ದ ಆನಂದ್ ಸೋನ್ಸ್ ಹಾಗೂ ರಾಷ್ಟ್ರ ಮಟ್ಟದ ಹಿರಿಯರ ಪವರ್ ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಗೆದ್ದ ರವಿಕುಮಾರ್ ಬಲ್ಲಾಳ್‌ಬಾಗ್ ಅವರನ್ನು ಐವನ್ ಡಿಸೋಜ ಅಭಿನಂದಿಸಿದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ, ನಾಗೇಂದ್ರ, ಪ್ರಕಾಶ್ ಸಾಲ್ಯಾನ್ ಮೊದಲಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.