ADVERTISEMENT

ಇತರ ವೈದ್ಯಪದ್ಧತಿ ಜತೆ ಅಲೋಪಥಿ ಅನುಸರಿಸುವುದಕ್ಕೆ ಐಎಂಎ ವಿರೋಧ

ಐಎಂಎ ರಾಜ್ಯ ಘಟಕ ವಿರೋಧ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2023, 15:41 IST
Last Updated 11 ಮಾರ್ಚ್ 2023, 15:41 IST
ಸುದ್ದಿಗೋಷ್ಠಿಯಲ್ಲಿ ಡಾ.ಶಿವಕುಮಾರ್‌ ಬಿ.ಲಕ್ಕೋಲ್‌ ಮಾತನಾಡಿದರು. ಡಾ.ನಂದಕಿಶೋರ್‌, ಡಾ.ಸದಾನಂದ ಪೂಜಾರಿ, ಡಾ.ಗೀತಾ ದೊಪ್ಪ, ಡಾ.ವೇಣುಗೋಪಾಲ ಡಿ., , ಡಾ.ವೆಂಕಟಾಚಲಪತಿ, ಡಾ.ಮಧುಸೂದನ ಕರಿಗನೂರು, ಡಾ.ಲಕ್ಷ್ಮಣ ಡಿ.ಬಾಕಲೆ, ಡಾ.ಪ್ರಸನ್ನ ಶಂಕರ್‌, ಡಾ.ರಂಜನ್‌ ರಾವ್‌, ಡಾ.ಅರ್ಚಿತ್‌ ಬೋಳೂರು ಇದ್ದಾರೆ
ಸುದ್ದಿಗೋಷ್ಠಿಯಲ್ಲಿ ಡಾ.ಶಿವಕುಮಾರ್‌ ಬಿ.ಲಕ್ಕೋಲ್‌ ಮಾತನಾಡಿದರು. ಡಾ.ನಂದಕಿಶೋರ್‌, ಡಾ.ಸದಾನಂದ ಪೂಜಾರಿ, ಡಾ.ಗೀತಾ ದೊಪ್ಪ, ಡಾ.ವೇಣುಗೋಪಾಲ ಡಿ., , ಡಾ.ವೆಂಕಟಾಚಲಪತಿ, ಡಾ.ಮಧುಸೂದನ ಕರಿಗನೂರು, ಡಾ.ಲಕ್ಷ್ಮಣ ಡಿ.ಬಾಕಲೆ, ಡಾ.ಪ್ರಸನ್ನ ಶಂಕರ್‌, ಡಾ.ರಂಜನ್‌ ರಾವ್‌, ಡಾ.ಅರ್ಚಿತ್‌ ಬೋಳೂರು ಇದ್ದಾರೆ   

ಮಂಗಳೂರು: ‘ಇತರ ವೈದ್ಯಪದ್ಧತಿಗಳ ವೈದ್ಯರು ಆಧುನಿಕ ವೈದ್ಯಪದ್ಧತಿಯ (ಅಲೋಪಥಿ) ಪ್ರಕಾರ ಔಷಧ ನೀಡುವುದು ಅವೈಜ್ಞಾನಿಕ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು’ ಎಂದು ಭಾರತೀಯ ವೈದ್ಯಕೀಯ ಸಂಘಟನೆಯ (ಐಎಂಎ) ರಾಜ್ಯ ಘಟಕದ ಅಧ್ಯಕ್ಷ ಶಿವಕುಮಾರ್ ಬಿ.ಲಕ್ಕೋಲ್ ಒತ್ತಾಯಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ವೈದ್ಯರು ಯಾವ ವೈದ್ಯಪದ್ಧತಿಯಲ್ಲಿ ಪದವಿ ಪಡೆದಿದ್ದಾರೆಯೋ ರೋಗಿಗಳಿಗೆ ಅದೇ ಪದ್ಧತಿಯಲ್ಲಿ ಚಿಕಿತ್ಸೆ ನೀಡಬೇಕು. ಅಲೋಪಥಿ ಪದವಿ ಪಡೆಯದವರು ಈ ಪದ್ಧತಿಯ ಔಷಧ ನೀಡುವಂತಿಲ್ಲ. ಅಂಥವರನ್ನು ನಕಲಿ ವೈದ್ಯರೆಂದೇ ಪರಿಗಣಿಸಬೇಕಾಗುತ್ತದೆ’ ಎಂದರು.

‘ರಾಜ್ಯದಲ್ಲಿ 1 ಲಕ್ಷಕ್ಕೂ ಅಧಿಕ ನಕಲಿ ವೈದ್ಯರಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿತ್ತು. ಅವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದನ್ನು ತಡೆಯಲು ಕಟ್ಟುನಿಟ್ಟಿನ ಕಾನೂನು ರೂಪಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕಾರ್ಪೋರೇಟ್‌ ಸಂಸ್ಕೃತಿಯಿಂದಾಗಿ ಸಾಮಾನ್ಯ ಜನರ ಪಾಲಿಗೆ ವೈದ್ಯಕೀಯ ಸೇವೆ ದುಬಾರಿಯಾಗಿದೆ. ಕುಟುಂಬ ವೈದ್ಯ ಪದ್ಧತಿಗೆ ಒತ್ತು ನೀಡಿದರೆ ಇದು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬರಲಿದೆ. ಕುಟುಂಬ ವೈದ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಮನವಿ ಮಾಡಿದರು.

‘ವೈದ್ಯರು ಮತ್ತು ವೈದ್ಯ ಸಿಬ್ಬಂದಿ ಮೇಲಿನ ಹಲ್ಲೆ ಮತ್ತು ದೌರ್ಜನ್ಯ ತಡೆಯಬೇಕು. ಇಂತಹ ಹಲ್ಲೆಕೋರರನ್ನು ತಕ್ಷಣ ಬಂಧಿಸುವ ಹಾಗೂ ಇಂತಹವರಿಗೆ ಜಾಮೀನು ಸಿಗದ ರೀತಿ ಕಾನೂನು ತಿದ್ದುಪಡಿ ಮಾಡ‌ಬೇಕು’ ಎಂದು ಆಗ್ರಹಿಸಿದರು.

‘ಮಾನವ ಸಹಜವಾದ ಸಣ್ಣ ತಪ್ಪುಗಳಿಗೂ 1994ರ ಗರ್ಭಪೂರ್ವ, ಪ್ರಸವ ಪೂರ್ವ ಲಿಂಗ ಆಯ್ಕೆ ಪತ್ತೆ ನಿಷೇಧ (ಪಿಸಿಪಿಎನ್‌ಡಿಟಿ) ಕಾಯ್ದೆಯಡಿ ವೈದ್ಯರನ್ನು ಗಂಭೀರ ಶಿಕ್ಷೆಗೆ ಗುರಿಪಡಿಸುವುದು ಸರಿಯಲ್ಲ. ಈ ಕಾಯ್ದೆಗೂ ಕೆಲವೊಂದು ತಿದ್ದುಪಡಿ ಮಾಡಬೇಕು. ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆಯಲ್ಲಿ ಭಾಗಿಯಾಗುವ ವೈದ್ಯರನ್ನು ಮಾತ್ರ ಈ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸಬೇಕು’‌ ಎಂದು ಅಭಿಪ್ರಾಯಪಟ್ಟರು.

ಐಎಂಎ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಾ.ವೆಂಕಟಾಚಲಪತಿ, ರಾಜ್ಯ ಘಟಕದ ಸಹಾಯಕ ಕಾರ್ಯದರ್ಶಿ ಡಾ.ಲಕ್ಷ್ಮಣ್ ಡಿ. ಬಾಕಳೆ, ಮಾಜಿ ಅಧ್ಯಕ್ಷ ಡಾ.ಮಧುಸೂಧರ ಕರಿಗನೂರು, ಹಿರಿಯ ಉಪಾಧ್ಯಕ್ಷ ಡಾ.ಪ್ರಸನ್ನ ಶಂಕರ್, ವಿಭಾಗೀಯ ಸಂಯೊಜಕಿ ಡಾ.ಗೀತಾ ದೊಪ್ಪ, ಮಂಗಳೂರು ಘಟಕದ ಅಧ್ಯಕ್ಷ ಡಾ.ವೇಣುಗೋಪಾಲ್, ಕಾರ್ಯದರ್ಶಿ ಅರ್ಚಿತ್ ಬೋಳೂರು, ಖಜಾಂಚಿ ಬಿ. ನಂದಕಿಶೋರ್, ರಂಜನ್ ರಾವ್, ಜಿಲ್ಲಾ ಪ್ರತಿನಿಧಿ ಡಾ. ಸದಾನಂದ ಪೂಜಾರಿ ಇದ್ದರು.

‘ಔಷಧದ ಸೂತ್ರ ಚೀಟಿಯಲ್ಲಿ ನಮೂದಿಸಿ’

‘ಜನರಿಕ್‌ ಔಷಧ ಬಳಕೆಗೆ ಉತ್ತೇಜಿಸಲು ಕೇಂದ್ರ ಸರ್ಕಾರ ಔಷಧಗಳ ಬ್ರ್ಯಾಂಡ್‌ನ ಜತೆ ಅದರ ರಾಸಾಯನಿಕ ಸೂತ್ರವನ್ನೂ ಔಷಧ ಚೀಟಿಯಲ್ಲಿ ವೈದ್ಯರು ನಮೂದಿಸಬೇಕು ಎಂಬ ಕೇಂದ್ರ ಸರ್ಕಾರದ ನಿರ್ದೇಶನಕ್ಕೆ ನಮ್ಮ ಸಹಮತವಿದೆ. ಇದನ್ನು ವೈದ್ಯರು ಚಾಚೂತಪ್ಪದೇ ಪಾಲಿಸಬೇಕು’ ಎಂದು ಶಿವಕುಮಾರ್ ಬಿ. ಲಕ್ಕೋಲ್ ಹೇಳಿದರು.

‘ಈ ನಿರ್ದೇಶನವನ್ನು ಬಹುತೇಕ ವೈದ್ಯರು ಪಾಲಿಸುತ್ತಿಲ್ಲ’ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಐಎಂಎ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಾ.ವೆಂಕಟಾಚಲಪತಿ, ‘ಹಾಗಿದ್ದರೆ ಸರ್ಕಾರ ದೇಶದಲ್ಲಿ ಜನರಿಕ್‌ ಔಷಧ ಮಾತ್ರ ಮಾರಾಟ ಮಾಡಬಹುದು ಎಂಬ ಕಾನೂನು ತರಲಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.