ADVERTISEMENT

‘ಕರಾವಳಿ ಕಥನಗಳು’ ಬಿಡುಗಡೆಗೆ ಸಿದ್ಧ

ಜಾನಪದ ವಿದ್ವಾಂಸ ಡಾ. ಕೆ.ಚಿನ್ನಪ್ಪ ಗೌಡರ ಕೃತಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2022, 4:34 IST
Last Updated 20 ಏಪ್ರಿಲ್ 2022, 4:34 IST
ಡಾ. ಕೆ.ಚಿನ್ನಪ್ಪ ಗೌಡ ಅವರ ‘ಕರಾವಳಿ ಕಥನಗಳು’ ಕೃತಿ
ಡಾ. ಕೆ.ಚಿನ್ನಪ್ಪ ಗೌಡ ಅವರ ‘ಕರಾವಳಿ ಕಥನಗಳು’ ಕೃತಿ   

ಮಂಗಳೂರು: ಜಾನಪದ ವಿದ್ವಾಂಸ ಡಾ. ಕೆ.ಚಿನ್ನಪ್ಪ ಗೌಡ ಅವರು ಬರೆದಿರುವ ‘ಕರಾವಳಿ ಕಥನಗಳು’ ಕೃತಿ ಬಿಡುಗಡೆಗೆ ಸಿದ್ಧಗೊಂಡಿದೆ.

ಈ ಕೃತಿಯಲ್ಲಿ ಒಟ್ಟು ಎಂಟು ಲೇಖನಗಳಿವೆ. ‘ಉಳ್ಳಾಳ್ತಿ: ಪರಂಪರೆ ಮತ್ತು ಇತಿಹಾಸ ಕಥನ’ ಲೇಖನ ಹೊರತುಪಡಿಸಿದರೆ, ಉಳಿದ ಏಳು ಲೇಖನಗಳು ಇತ್ತೀಚಿನವು. ಪಾಡ್ದನಗಳು, ಅಜ್ಜಿಕತೆಗಳು, ಕೆಲಸ ಮತ್ತು ಕುಣಿತದ ಹಾಡುಗಳು, ಉಳ್ಳಾಲ್ತಿಯ ಕಥನ ಪರಂಪರೆ ಇವುಗಳಿಗೆ ಸಂಬಂಧಿಸಿದ ನಾಲ್ಕು ಲೇಖನಗಳಲ್ಲಿ ಕರಾವಳಿಯ ತುಳು ಭಾಷೆಯಲ್ಲಿರುವ ಮೌಖಿಕ ಸಾಹಿತ್ಯದ ವಿವರಗಳಿವೆ. ಆಧುನಿಕ ಕಾಲಘಟ್ಟದ ಲಿಖಿತ ಪರಂಪರೆಯ ತುಳು ಕಾವ್ಯ ಮತ್ತು ಸಣ್ಣ ಕತೆಗಳ ಬಗ್ಗೆ ನಂತರದ ಎರಡು ಲೇಖನಗಳಲ್ಲಿ ಮಾಹಿತಿ ಲಭ್ಯವಾಗುತ್ತದೆ. ತುಳು ಅನುವಾದದ ಅಗತ್ಯ ಮತ್ತು ವಿಧಾನ, ಕರಾವಳಿಯ ಯಕ್ಷಗಾನ ಪ್ರದರ್ಶನದ ಸಾಂಸ್ಕೃತಿಕ ಇತಿಹಾಸವನ್ನು ಕಟ್ಟುವ ಕಷ್ಟದ ಕೆಲಸದ ಬಗ್ಗೆ ಇನ್ನೆರಡು ಲೇಖನಗಳು ಇವೆ. ಎಲ್ಲ ಎಂಟು ಲೇಖನಗಳು ಪ್ರಾದೇಶಿಕವಾಗಿ ಕರಾವಳಿಗೆ ಸಂಬಂಧಪಟ್ಟಿವೆ.

‘ಅಗತ್ಯ ಮಾಹಿತಿಗಳ ತಾಳ್ಮೆಯ ಸಂಗ್ರಹ, ವಿಷಯಗಳನ್ನು ಅಚ್ಚುಕಟ್ಟಾಗಿ ಮಂಡಿಸಿ ವಿಶ್ಲೇಷಿಸುವ ವಿದ್ವತ್ತು, ಅಪೂರ್ವ ಒಳನೋಟಗಳುಳ್ಳ ಚಿಂತನಾಕ್ರಮ, ತುಳು-ಕನ್ನಡ ಭಾಷೆಗಳ ಮೇಲಣ ಅಪೂರ್ವ ಹಿಡಿತ, ವಸ್ತುವಿಗೆ ಅನುಗುಣವಾದ ಬರವಣಿಗೆಯ ವಿನ್ಯಾಸ, ಇತ್ಯಾದಿ ಕಾರಣಗಳಿಂದಾಗಿ ಈ ಪುಸ್ತಕ ಬಹಳ ವಿಶಿಷ್ಟವಾಗಿದೆ. ಯಾವ ಕೋನದಿಂದ ನೋಡಿದರೂ ಇದೊಂದು ಉಪಯುಕ್ತ ಲೇಖನ ಸಂಪುಟ ಎಂದು ಹೇಳಲು ಸಾಧ್ಯವಿದೆ’ ಎನ್ನುತ್ತಾರೆ ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು.

ADVERTISEMENT

ಏ.30ರಂದು ಮಧ್ಯಾಹ್ನ 3 ಗಂಟೆಗೆ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಕುಲಪತಿ ಪ್ರೊ. ಬಿ.ಎ.ವಿವೇಕ ರೈ ಅವರು ಕೃತಿ ಬಿಡುಗಡೆಗೊಳಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.