ADVERTISEMENT

ತುಂಬೆ: ದುರಸ್ತಿಯಾಗದ ಕೊಳವೆ, ನೀರಿಲ್ಲದೇ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 4:59 IST
Last Updated 2 ಆಗಸ್ಟ್ 2024, 4:59 IST

ಮಂಗಳೂರು: ತುಂಬೆಯಿಂದ ನಗರಕ್ಕೆ ಕುಡಿಯುವ ನೀರು ಪೂರೈಸುವ ಮುಖ್ಯ ಕೊಳವೆ ಹಾನಿಗೊಂಡಿದ್ದು, ಅದರ ದುರಸ್ತಿ ಕಾರ್ಯ ಗುರುವಾರವೂ ಪೂರ್ಣಗೊಂಡಿಲ್ಲ. ಹಾಗಾಗಿ ನಗರದ 20ಕ್ಕೂ ಹೆಚ್ಚು ವಾರ್ಡ್‌ಗಳ ನಿವಾಸಿಗಳು ಎರಡನೇ ದಿನವೂ ಕುಡಿಯುವ ನೀರಿಲ್ಲದೇ ಸಮಸ್ಯೆ ಎದುರಿಸಿದರು.

‘ಎಲ್ಲೆಡೆ ಮಳೆಯಾಗುತ್ತದೆ. ನೋಡಿದಲ್ಲೆಲ್ಲವೂ ನೀರು. ಆದರೆ ಪಾಲಿಕೆಯಿಂದ ನೀರು ಪೂರೈಕೆಯಾಗದ ಕಾರಣ ಅಡುಗೆ ಮಾಡಲು ನೀರಿಲ್ಲ ಎಂಬ ಸ್ಥಿತಿ ನಮ್ಮದು’ ಎಂದು ಶಕ್ತಿನಗರದ ನಿವಾಸಿಯೊಬ್ಬರು ಅಳಲು ತೋಡಿಕೊಂಡರು.

ಗೇಲ್‌ ಸಂಸ್ಥೆಯ ಕೊಳವೆ ಅಳವಡಿಕೆಗಾಗಿ ಮಣ್ಣು ಅಗೆದಾಗ ಪಾಲಿಕೆ ವ್ಯಾಪ್ತಿಗೆ ಕುಡಿಯುವ ನೀರು ಪೂರೈಸುವ 1100 ಮಿ.ಮೀ ಸುತ್ತಳತೆಯ ಕೊಳವೆಗೆ ಬುಧವಾರ ಹಾನಿ ಉಂಟಾಗಿತ್ತು.

ADVERTISEMENT

‘ನೀರು ಪೂರೈಕೆ ಕೊಳವೆ ನೆಲಮಟ್ದಿಂದ 25 ಅಡಿಗಳಷ್ಟು ಆಳದಲ್ಲಿತ್ತು. ಕೊಳವೆಗೆ ಎಲ್ಲಿ ಹಾನಿಯಾಗಿದೆ ಎಂಬುದನ್ನು ಪತ್ತೆ ಹಚ್ಚುವುದು ಸವಾಲಾಗಿತ್ತು. ಹಾನಿಗೊಳಗಾದ ಕೊಳವೆ ಪತ್ತೆಯಾಗಿದೆ. ಇದು 40 ವರ್ಷಗಳ ಹಳೆಯ ಕೊಳವೆಯ. ಇದನ್ನು ದುರಸ್ತಿಪಡಿಸಲು ಸಮರೋಪಾದಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ. ನಾನು ಎರಡು ಸಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ರಾತ್ರಿಯೂ ದುರಸ್ತಿ ಕಾರ್ಯ ಮುಂದುವರಿಯಲಿದೆ. ಶುಕ್ರವಾರದೊಳಗೆ ದುರಸ್ತಿ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ತಕ್ಷಣವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಪಾಲಿಕೆ ಆಯುಕ್ತ ಆನಂದ ಸಿ.ಎಲ್‌ ’ಪ್ರಜಾವಾಣಿ‘ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.