ಮಂಗಳೂರು: ‘ಜಿಲ್ಲೆಯ ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಮಾದಕ ವ್ಯಸನ ನಿಗ್ರಹ ಸಮಿತಿಯನ್ನು ಇನ್ನು ಒಂದು ತಿಂಗಳ ಒಳಗೆ ರಚಿಸುವುದು ಕಡ್ಡಾಯ’ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ತಿಳಿಸಿದರು.
ಮಂಗಳೂರು ಸಿಟಿ ಪೊಲೀಸ್ ರಾಷ್ಟ್ರೀಯ ಸೇವಾ ಯೋಜನೆ, ಮಂಗಳೂರು ರೋಟರಿ ಕ್ಲಬ್, ನಿಟ್ಟೆ ವಾಸ್ತುಶಿಲ್ಪ ಸಂಸ್ಥೆ ಆಶ್ರಯದಲ್ಲಿ ಇಲ್ಲಿ ಸೋಮವಾರ ಏರ್ಪಡಿಸಿದ್ದ ಮಾದಕ ಪದಾರ್ಥ ದುರ್ಬಳಕೆ ವಿರುದ್ಧದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಮಾದಕ ವ್ಯಸನಕ್ಕೆ ವಿದ್ಯಾರ್ಥಿಗಳು ಬಲಿಯಾಗದಂತೆ ತಡೆಯಲು ಅನುಸರಿಸಬೇಕಾದ ಪ್ರಮಾಣೀಕೃತ ಕಾರ್ಯವಿಧಾನವನ್ನು (ಎಸ್ಒಪಿ) ರೂಪಿಸಲಾಗಿದೆ. ಅದರಂತೆ ಪ್ರತಿ ವಿದ್ಯಾಸಂಸ್ಥೆಯಲ್ಲೂ ದಿಢೀರ್ ತಪಾಸಣಾ ಕಾರ್ಯಗಳು ನಡೆಯಬೇಕು. ಈಗ ನಾವು ಜಾಗೃತಿ ಕಾರ್ಯಕ್ರಮವನ್ನು ಮಾತ್ರ ನಡೆಸುತ್ತಿದ್ದೇವೆ. ಕಟ್ಟುನಿಟ್ಟಿನ ಕ್ರಮಕ್ಕೆ ಇಳಿದರೆ, ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ’ ಎಂದರು.
‘ಮಾದಕ ದಂಧೆಯ ಹಣವು ಸಮಾಜ ದ್ರೋಹಿ, ದೇಶದ್ರೋಹಿ ಚಟುವಟಿಕೆಗೆ ಬಳಕೆಯಾಗುತ್ತಿದೆ. ಇದರಿಂದ ವ್ಯಸನಿಯ ಕುಟುಂಬದವರ ಮೇಲಾಗುವ ದುಷ್ಪರಿಣಾಮಗಳನ್ನೂ ವಿಶ್ಲೇಷಿಸಬೇಕಾಗುತ್ತದೆ. ಇಡೀ ಸಮಾಜ ಕಾರ್ಯಪ್ರವೃತ್ತರಾದರೆ ಮಾತ್ರ ಈ ಹಾವಳಿಯನ್ನು ಮಟ್ಟಹಾಕಬಹುದು’ ಎಂದರು.
ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ‘ಈಚಿನ ವರ್ಷಗಳಲ್ಲಿ ಮಾದಕ ಪದಾರ್ಥ ಸೇವನೆಗಾಗಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ತೀರಾ ಈಚೆಗೆ ಮಾದಕ ಪದಾರ್ಥ ಸೇವನೆ ದೃಢಪಟ್ಟ 150 ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರನ್ನೂ ಈ ಕಾರ್ಯಕ್ರಮಕ್ಕೆ ಕರೆಸಿದ್ದೇವೆ’ ಎಂದರು.
‘ಜಿಲ್ಲೆಯ 107 ಕಾಲೇಜುಗಳಲ್ಲಿ ಮಾತ್ರ ಮಾದಕ ವ್ಯಸನ ನಿಗ್ರಹ ಸಮಿತಿ ರಚನೆ ಯಾಗಿದೆ. ಅಲ್ಲಿ ಯಾವಾಗ ದಿಢೀರ್ ತಪಾಸಣೆ ನಡೆಸಲಾಗುತ್ತದೆ ಎಂಬ ಮಾಹಿತಿಯನ್ನು ನಮಗೆ ನೀಡಬೇಕು. ನೀವು ತಪಾಸಣೆ ಮಾಡದಿದ್ದರೆ ಪೊಲೀಸರೇ ಶಾಲಾ ಕಾಲೇಜುಗಳಿಗೆ ಬಂದು ತಪಾಸಣೆ ನಡೆಸಬೇಕಾಗುತ್ತದೆ. ಸಮಸ್ಯಾತ್ಮಕವಾದ ಶೇ 10ರಷ್ಟು ವಿದ್ಯಾರ್ಥಿಗಳ ದೆಸೆಯಿಂದ ಶೇ 90ರಷ್ಟು ವಿದ್ಯಾರ್ಥಿಗಳು ತೊಂದರೆ ಎದುರಿಸುವುದು ನಮಗೆ ಇಷ್ಟ ಇಲ್ಲ’ ಎಂದರು.
‘ಮಾದಕ ಪದಾರ್ಥವನ್ನು ಮೊದಲ ಸಲ ಸೇವಿಸಿದಾಗ ಚೆನ್ನಾಗಿ ಕಾಣುತ್ತದೆ. ಆದರೆ ನಂತರದ ದಿನಗಳೂ ಯಾತನಾಮಯ. ನಾವು ಈಚೆಗೆ ಜೈಲಿನಲ್ಲಿ ಪರಿಶೀಲನೆ ನಡೆಸಿದಾಗಲು ಡ್ರಗ್ಸ್ ವ್ಯಸನಿಗಳು ಪತ್ತೆಯಾದರು. ಶಿಕ್ಷಣ ಸಂಸ್ಥೆಗಳೇ ಈ ರೀತಿ ತಪಾಸಣೆ ನಡೆಸಿ. ಆರಂಭಿಕ ಹಂತದಕ್ಕೇ ಈ ವ್ಯವಸ್ಥೆ ತಡೆಯದೇ ಹೋದರೆ, ಮುಂದೆ ನಾವು ಜೈಲಿನಲ್ಲಿ ಅವರನ್ನು ಪರಿಶೀಲನೆ ನಡೆಸುವ ಪ್ರಮೇಯ ಎದುರಾಗುತ್ತದೆ. ಈ ದುಶ್ಚಟದ ದಾಸರಾಗಿದ್ದರೆ, ಅದನ್ನು ತ್ಯಜಿಸುವ ನಿರ್ಧಾರ ಕೈಗೊಳ್ಳಲು ಒಂದು ಸೆಕೆಂಡ್ ಸಮಯ ಸಾಕು’ ಎಂದರು.
‘ಯಾವುದೇ ವಿದ್ಯಾರ್ಥಿ ಮಾದಕ ವ್ಯಸನಿಯಾಗಿದ್ದು ಗೊತ್ತಾದರೆ ಪೊಲೀಸರಿಗೆ ಮಾಹಿತಿ ನೀಡಿ. ಅಪ್ಪ ಅಮ್ಮನಿಗೆ ವಿಷಯ ತಿಳಿಸಬೇಡಿ ಎಂದು ವಿದ್ಯಾರ್ಥಿಗಳು ಗೋಗರೆಯುತ್ತಾರೆ. ನೀವು ಈ ಬಗ್ಗೆ ಪೋಷಕರಿಗೆ ಹಾಗೂ ಪೊಲೀಸರಿಗೆ ತಿಳಿಸದೇ ಹೋದರೆ ಆ ವಿದ್ಯಾರ್ಥಿಯ ಭವಿಷ್ಯವೇ ಹಾಳಾಗುತ್ತದೆ’ ಎಂದರು.
ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ಭಟ್, ‘ವಿದ್ಯಾರ್ಥಿಯ ಗೆಳೆಯರ ಬಳಗವನ್ನು ಬದಲಾಯಿಸುವುದು, ಧರಿಸುವ ಉಡುಪಿನ ಬಗ್ಗೆ ವಹಿಸುವ ಕಾಳಜಿ ಬದಲಾಗುವುದು, ಹಾಜರಾತಿ ಕಡಿಮೆಯಾಗುವುದು, ತಲೆ ಬಾಚದಿರುವುದು, ಇದ್ದಕ್ಕಿದ್ದಂತೆಯೇ ಮೌನಿಯಾಗುವುದು, ತರಗತಿಯಿಂದ ದಿಢೀರ್ ಎದ್ದುಹೋಗುವುದು, ಅಪ್ರಸ್ತುತವಾಗಿ ಮಾತನಾಡುವುದು, ಜಗಳಕ್ಕೆ ಬರುವುದು, ಮಧ್ಯರಾತ್ರಿವರೆಗೂ ಎಚ್ಚರವಾಗಿರುವುದು, ಶೌಚಾಲಯದಲ್ಲಿ ದೀರ್ಘ ಸಮಯವನ್ನು ಕಳೆಯುವುದದೆಲ್ಲವೂ ಮದ್ಯ ವ್ಯಸನಕ್ಕೆ ಬಲಿಯಾದವರ ಲಕ್ಷಣಗಳು. ಇದನ್ನು ಗುರತಿಸಿದರೆ ಸಾಲದು, ಸರಿಪಡಿಸಲು ಕ್ರಕಮ ವಹಿಸಬೇಕು’ ಎಂದು ಸಲಹೆ ನೀಡಿದರು.
ಮೂತ್ರ ತಪಾಸಣೆ, ರಕ್ತ ತಪಾಸಣೆಯಿಂದ ಅವರು ಮಾದಕ ಪದಾರ್ಥ ಸೇವಿಸಿದ್ದಾರೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು ಎಂದರು.
ಡಿಸಿಪಿ (ಅಪರಾಧ) ರವಿಶಂಕರ್, ನಗರದ ‘ಬಾರ್ನ್ ಎಗೈನ್ ರಿಕವರಿ ಸೆಂಟರ್’ನ ಸ್ಥಾಪಕ ನಿರ್ದೇಶಕ ಗುರುಪ್ರಸಾದ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ರಾಜೇಶ್ವರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಹೇಮಲತಾ, ನಿಟ್ಟೆ ವಾಸ್ತುಶಿಲ್ಪ ಸಂಸ್ಥೆ ನಿರ್ದೇಶಕ ವಿನೋದ್ ಅರಾನ್ಹ, ಉಪ ಔಷಧ ನಿಯಂತ್ರಕ ಸುಜಿತ್, ಗೋವಿಂದ್, ಎಸಿಪಿಗಳಾದ ರವೀಶ್ ನಾಯಕ್, ಶ್ರೀಕಾಂತ್ ಮೋದಲಾದವರು ಭಾಗವಹಿಸಿದರು. ಗೀತಾ ಕುಲಕರ್ಣಿ ಸ್ವಾಗತಿಸಿದರು. ಪಣಂಬೂರು ಠಾಣೆಯ ಇನ್‌ಸ್ಪೆಕ್ಟರ್ ಸಲೀಂ ಅಬ್ಬಾಸ್ ಧನ್ಯವಾದ ಸಲ್ಲಿಸಿದರು. ಅಕ್ಷತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.
ರೋಶನಿ ನಿಲಯ ಕಾಲೇಜಿನ ವಿದ್ಯಾರ್ಥಿಗಳು ಪ್ರಹಸನ ಪ್ರದರ್ಶಿಸಿದರು ಜಿಲ್ಲೆಯ ವಿವಿಧ ಕಾಲೇಜುಗಳ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗಿ
ಯಾರೇ ಮಾದಕ ಪದಾರ್ಥ ಸೇವಿಸುತ್ತಿದ್ದರೂ ನಮ್ಮ ಗಮನಕ್ಕೆ ತನ್ನಿ. ನಿಮ್ಮ ಹೆಸರನ್ನು ಬಹಿರಂಗಪಡಿಸುವುದಿಲ್ಲ. ಮುಂದಿನ ಕ್ರಮವನ್ನು ನಾವು ಕೈಗೊಳ್ಳುತ್ತೇವೆಸುಧೀರ್ ಕುಮಾರ್ ರೆಡ್ಡಿ ಮಂಗಳೂರು ಪೊಲೀಸ್ ಕಮಿಷನರ್
‘ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಿ’ ‘ಮಾದಕ ಪದಾರ್ಥ ಸೇವಿಸುವುದಿಲ್ಲ ಎಂಬ ಬಗ್ಗೆ ವಿದ್ಯಾರ್ಥಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಿ. ವಿದ್ಯಾರ್ಥಿಗಳನ್ನು ಆಗಾಗ ದಿಢೀರ್ ತಪಾಸಣೆ ನಡೆಸಬೇಕು. ಮಾದಕ ವ್ಯಸನ ತಡೆಯುವುದೂ ಶಿಕ್ಷಣ ಸಂಸ್ಥೆಯ ದೈನಂದಿನ ಚಟುವಟಿಕೆಯ ಭಾಗವಾಗಬೇಕು’ ಎಂದು ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕೆ.ಹೇಳಿದರು. ‘ವ್ಯಸನಿ ಪತ್ತೆಯಾದರೆ ಅವರಿಗೆ ಕಾಲೇಜಿನಲ್ಲೇ ಆಪ್ತ ಸಮಾಲೋಚನೆ ನಡೆಸಿದರೆ ಸಾಲದು. ಈ ವಿಚಾರವನ್ನು ಪೊಲೀಸರ ಗಮನಕ್ಕೆ ತರಲೇಬೇಕು. ವೃತ್ತಿಪರ ಆಪ್ತಸಮಾಲೋಚಕರ ನೆರವು ಅವವರಿಗೆ ಸಿಗುವಂತೆ ಮಾಡಬೇಕು. ದಕ್ಷಿಣ ಕನ್ನಡಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೆಸರಿದೆ. ಇಲ್ಲಿ ಮಾದಕ ವ್ಯಸನಿಗಳೂ ಇದ್ದಾರೆ ಎಂದರೆ ಈ ವ್ಯವಸ್ಥೆಯಲ್ಲಿ ಲೋಪ ಇದೆ ಎಂದರ್ಥ. ಅದೇನೆಂದು ಪತ್ತೆ ಹಚ್ಚಿ ಸರಿಪಡಿಸಬೇಕು. ಸಮಸ್ಯೆ ಇರುವುದನ್ನೇ ಒಪ್ಪದಿದ್ದರೆ ಅದನ್ನು ಸರಿಪಡಿಸುವುದು ಕಷ್ಟವಾಗುತ್ತದೆ’ ಎಂದರು.
- ‘ಸರ್ವಸ್ವವನ್ನೂ ಕಳೆದುಕೊಂಡೆ’ ‘ಬದುಕಿನಲ್ಲಿ ಅನೇಕ ಕನಸುಗಳನ್ನು ಕಂಡಿದ್ದವ ನಾನು. 20 ವರ್ಷ ಹಿಂದೆ ಇಟ್ಟ ಒಂದು ತಪ್ಪು ಹೆಜ್ಜೆಯಿಂದಾಗಿ ಸರ್ವಸ್ವವನ್ನೂ ಕಳೆದುಕೊಂಡೆ. ಮಾದಕ ವ್ಯಸನದಿಂದಾಗಿ ಆರೋಗ್ಯ ಶಿಕ್ಷಣ ಉದ್ಯೋಗ ಕಳೆದುಕೊಂಡು ನನ್ನ ಭವಿಷ್ಯದ ಮೇಲೆ ನಾನೇ ಚಪ್ಪಡಿ ಹಾಕಿಕೊಂಡೆ. ಬಹಳ ಕಷ್ಟ ಪಟ್ಟು ನನ್ನನ್ನು ಓದಲು ಕಳುಹಿಸಿದ್ದ ಕುಟುಂಬದವರಿಂದಲೂ ದೂರಾಗಿ ನರಕಯಾತನೆ ಅನುಭವಿಸಿದೆ. ದುಡಿಯಲು ಸೇರಿದ ಬಳಿಕ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವ ಬದಲು ಮನೆಯಿಂದಲೇ ಕದಿಯಲಾರಂಭಿಸಿದೆ. ನೋವು ಕಣ್ಣೀರಿನ ಬದುಕಿನಿಂದ ಮುಕ್ತಿ ಪಡೆಯಲು ಒಂದು ದಿನ ಗಟ್ಟಿ ನಿರ್ಧಾರ ಮಾಡಿ ಈ ವ್ಯಸನದಿಂದ ಹೊರ ಬಂದೆ. ಆದರೆ ಕಳೆದುಹೋದ ಸಮಯ ಯಾವತ್ತೂ ಮರಳಿ ಸಿಗದು’ ಎಂದು ಮಾದಕ ವ್ಯಸನದಿಂದ ಮುಕ್ತಿ ಪಡೆದ ವ್ಯಕ್ತಿಯೊಬ್ಬರು ಅನುಭವ ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.