
ಮಂಗಳೂರು: ಮಾದಕ ಪದಾರ್ಥಗಳ ಸೇವನೆ ಮತ್ತು ಸಾಗಾಟದ ಪಿಡುಗು ಹೆಚ್ಚಾಗುತ್ತಿದ್ದು ಅದನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಇದಕ್ಕೆ ಜನರ ಬೆಂಬಲ ಮತ್ತು ಸಹಕಾರ ಅಗತ್ಯ ಎಂದು ಸೆನ್ ಠಾಣೆಯ ಸಹಾಯಕ ಪೊಲೀಸ್ ಆಯುಕ್ತ ರವೀಶ್ ನಾಯ್ಕ್ ಹೇಳಿದರು.
ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘ, ಮಂಗಳೂರು ನಗರ ಪೊಲೀಸ್ ಮತ್ತು ರೋಷನಿ ನಿಲಯ ವಿದ್ಯಾಸಂಸ್ಥೆ ಗಳು ಸ್ಟೇಟ್‌ಬ್ಯಾಂಕ್‌ನ ಕೇಂದ್ರ ಬಸ್ ನಿಲ್ದಾಣ ಬಳಿ ಬುಧವಾರ ಆಯೋಜಿಸಿದ್ದ ಮಾದಕ ಪದಾರ್ಥ ವ್ಯಸನ ವಿರುದ್ಧದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಮಾದಕ ಪದಾರ್ಥ ಸೇವಿಸುವುದು ಕಂಡುಬಂದರೆ ಮಾಹಿತಿ ಗೌಪ್ಯವಾಗಿಟ್ಟು ಚಿಕಿತ್ಸೆಗೆ ಸಹಾಯ ಮಾಡಲಾಗುತ್ತದೆ. ಮಾಹಿತಿ ನೀಡಲು ಸಾರ್ವಜನಿಕರು ಭಯಪಡಬಾರದು ಎಂದು ಹೇಳಿದ ಅವರು ನಗರದಲ್ಲಿ ಸೈಬರ್ ಅಪರಾಧವೂ ಹೆಚ್ಚುತ್ತಿದ್ದು ಈ ವರಗೆ 6500 ಮಂದಿಯ ಮೇಲೆ ಪ್ರಕರಣ ದಾಖಲಾಗಿದೆ. ಇಂಥ ಅಪರಾಧಗಳಿಗೆ ಬಲಿಯಾದರೆ 1930ಗೆ ಕರೆ ಮಾಡಬೇಕು ಎಂದು ಅವರು ಹೇಳಿದರು.
ನಗರ ಸಶಸ್ತ್ರ ಪೊಲೀಸ್ ಉಪ ಆಯುಕ್ತ ಪಿ.ಉಮೇಶ್ ಕಾರ್ಯಕ್ರಮ ಉದ್ಘಾಟಿಸಿದರು. ರೋಷನಿ ನಿಲಯ ಸಮಾಜಕಾರ್ಯ ಕಾಲೇಜಿನ ಉಪನ್ಯಾಸಕರಾದ ಸ್ಯಾಂಡ್ರೊ ಲೋಬೊ, ಸಾರಿಕಾ ಅಂಕಿತ್, ದಕ್ಷಿಣ ಕನ್ನಡ ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಜೊತೆ ಕಾರ್ಯದರ್ಶಿ ರಾಜೇಶ್ ಟಿ, ಕೋಶಾಧಿಕಾರಿ ಜೋಯಲ್ ದಿಲ್‌ರಾಜ್ ಫೆರ್ನಾಂಡಿಸ್, ಮಾಜಿ ಅಧ್ಯಕ್ಷ ಜಯರಾಮ ಶೇಖ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್, ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.