ಮಂಗಳೂರು: ಮಾದಕ ವಸ್ತು ಕಳ್ಳಸಾಗಣೆ ಮತ್ತು ಮಾರಾಟ ಪ್ರಕರಣದಲ್ಲಿ ವಿದೇಶಿ ಪ್ರಜೆ ಸೇರಿ ಆರು ಆರೋಪಿಗಳನ್ನು ಕೆಐಸಿಒಸಿಎಲ್ ಪ್ರಾಂಗಣದ ಹಿಂಭಾಗದಿಂದ ಸಮುದ್ರದ ಕಿನಾರೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಪಣಂಬೂರು ಠಾಣೆಯ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಅವರಿಂದ 11 ಗ್ರಾಂ ಕೊಕೇನ್, 30 ಗ್ರಾಂ ಎಂಡಿಎಂಎ ಹೊಂದಿದ್ದ ಪೊಟ್ಟಣಗಳು, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ ಮತ್ತು 9 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಚಂದನ್, ಶರತ್, ಕೊಂಚಾಡಿಯ ಮಧುಸೂಧನ, ಆಕಾಶ್ ಭವನದ ಧನುಷ್, ದೇರೆಬೈಲಿನ ಮುಖೇಶ್ ಹಾಗೂ ನೈಜಿರಿಯಾ ದೇಶದ ಪ್ರಜೆ ಮೈಕಲ್ ಬಾಲಾಜಿ ಅಲಿಯಾಸ್ ಅಝಬೈಕ್ ಜಾನಿ ಬಂಧಿತರು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪಣಂಬೂರಿನ ಕೆಐಒಸಿಎಲ್ ಪ್ರಾಂಗಣದ ಹಿಂಭಾಗದ ರಸ್ತೆಯಲ್ಲಿ ಕೆಲವರು ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಠಾಣೆಯ ಪಿಎಸ್‌ಐ ಶ್ರೀಕಲಾ ಕೆ.ಟಿ. ಅವರಿಗೆ ಮಾಹಿತಿ ಬಂದಿತ್ತು. ನಗರ ಉತ್ತರ ಎಸಿಪಿ ಶ್ರೀಕಾಂತ್ ಕೆ. ನಿರ್ದೇಶನದಂತೆ ಶ್ರೀಕಲಾ ಸಿಬ್ಬಂದಿ ಜೊತೆ ಭಾನುವಾರ ಸಂಜೆ 4.05ರ ಸುಮಾರಿಗೆ ಸ್ಥಳಕ್ಕೆ ದಾಳಿ ನಡೆಸಿದ್ದರು. ಸ್ಥಳದಲ್ಲಿದ್ದ ಆರೋಪಿಗಳಾದ ಚಂದನ್, ಶರತ್ ಅವರನ್ನು ವಶಕ್ಕೆ ಪಡೆದಿದ್ದರು. ಅವರು ನೀಡಿದ ಮಾಹಿತಿ ಆಧಾರದಲ್ಲಿ ಇತರ ಆರೋಪಿಗಳಾದ ಮಧುಸೂಧನ, ಧನುಷ್, ಮುಖೇಶ್ ಹಾಗೂ ಮೈಕಲ್ ಬಾಲಾಜಿಯನ್ನು ಬಂಧಿಸಿದ್ದರು. ಆರೋಪಿಗಳಿಂದ ವಶಪಡಿಸಿಕೊಂಡ ಕೋಕೇನ್ ಮತ್ತು ಎಂಡಿಎಂಎಯ ದರ ₹ 91 ಸಾವಿರ ಎಂದು ಅಂದಾಜು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣೆಯ ಇನ್‌ಸ್ಪೆಕ್ಟರ್ ಮೊಹಮ್ಮದ್ ಸಲೀಂ ಅಬ್ಬಾಸ್ ಹಾಗೂ ಪಿಎಸ್ಐ ಶ್ರೀಕಲಾ ಕೆ .ಟಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್‌ಗಳಾದ ಪ್ರೇಮಾನಂದ, ಸತೀಶ್ ಎಂ.ಆರ್, ಸಯ್ಯದ್ ಇಮ್ತಿಯಾಜ್, ಚೆರಿಯನ್ ಕೆ., ಜೇಮ್ಸ್, ಕಾನ್‌ಸ್ಟೆಬಲ್‌ಗಳಾದ ಶಶಿಕುಮಾರ್, ರಾಕೇಶ್ ಎಲ್.ಎಂ. ಮಂಜುನಾಥ ಹಾಗೂ ಮಂಗಳೂರು ನಗರ ಉತ್ತರ ಉಪ ವಿಭಾಗದ ಮಾದಕ ಪದಾರ್ಥ ನಿಗ್ರಹ ದಳದ ಪಿಎಸ್‌ಐ ರಾಘವೇಂದ್ರ ಎಂ ನಾಯ್ಕ ಮತ್ತು ಸಿಬ್ಬಂದಿ ಸುನೀಲ್ ಎಚ್.ಎಂ, ವಿನಾಯಕ್, ಬಸವರಾಜು ಭಾಗವಹಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.