ಮಂಗಳೂರು: ಮಾದಕವಸ್ತು ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿ ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದು, ಅವರು ಸಚಿವ ಪ್ರಿಯಾಂಕ್ ಖರ್ಗೆ ಆಪ್ತ. ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಮಾತಾಡುವ ಪ್ರಿಯಾಂಕ್ ಈ ಬಗ್ಗೆ ಯಾಕೆ ಇನ್ನೂ ಟ್ವೀಟ್ ಮಾಡಿಲ್ಲ. ಆಪ್ತನ ಬಗ್ಗೆ ಪ್ರಿಯಾಂಕ್ ಸ್ಪಷ್ಟನೆ ನೀಡಬೇಕು ಇಲ್ಲವೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಆಗ್ರಹಿಸಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಬುರಗಿಯಲ್ಲಿ ಈ ಹಿಂದೆ ಡ್ರಗ್ಸ್ ಪೂರೈಕೆ ಪ್ರಕರಣ ದಾಖಲಾಗಿದ್ದರೂ, ಪೊಲೀಸರು ಯಾಕೆ ತನಿಖೆ ನಡೆಸಿಲ್ಲ? ಮಹಾರಾಷ್ಟ್ರ ಪೊಲೀಸರು ಆರೋಪಿಯನ್ನು ಬಂಧಿಸುವವರೆಗೆ ಕರ್ನಾಟಕದ ಪೊಲೀಸರು ಏನು ಮಾಡುತ್ತಿದ್ದರು? ಆರೋಪಿಗಳಿಗೆ ಯಾರ ಆಶೀರ್ವಾದ ಇದೆ? ಸಚಿವ ಪ್ರಿಯಾಂಕ್ ಮತ್ತು ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಆಪ್ತರಾಗಿರುವ ಕಾರಣಕ್ಕೆ ಲಿಂಗರಾಜ್ ಮೇಲೆ ಕ್ರಮ ಕೈಗೊಂಡಿಲ್ಲವೇ’ ಎಂದು ಪ್ರಶ್ನಿಸಿದರು.
ಈ ಪ್ರಕರಣವನ್ನು ಮರೆಮಾಚಲು ಬಿಜೆಪಿ ಮುಖಂಡ ಬೈರತಿ ಬಸವರಾಜ್ ಅವರ ಮೇಲೆ ಪ್ರಕರಣ ಫಿಕ್ಸ್ ಮಾಡಲಾಗಿದೆ. ರಾಜ್ಯದ ಬೇರೆ ಭಾಗಗಳ ಡ್ರಗ್ಸ್ ದಂಧೆಯ ಪೆಟ್ಟು ಮಂಗಳೂರಿನ ಮೇಲೆ ಆಗುತ್ತಿದೆ. ಮಂಗಳೂರು ಡ್ರಗ್ಸ್ ಉತ್ಪಾದನಾ ಕೇಂದ್ರವಲ್ಲ, ಇಲ್ಲಿಗೆ ಬೇರೆ ಕಡೆಗಳಿಂದ ಡ್ರಗ್ಸ್ ಪೂರೈಕೆಯಾಗುತ್ತದೆ. ಮಂಗಳೂರನ್ನು ‘ಉಡ್ತಾ ಪಂಜಾಬ್’ ಆಗಲು ಬಿಡುವುದಿಲ್ಲ’ ಎಂದು ಗೃಹ ಸಚಿವರು ಇತ್ತೀಚೆಗೆ ಹೇಳಿದ್ದರು. ಗುಪ್ತಚರ ಇಲಾಖೆಗಳಿಂದ ಅವರಿಗೆ ಆ ಮಾಹಿತಿ ಇದ್ದ ಕಾರಣಕ್ಕಾಗಿಯೇ ಅವರು ಆತಂಕ ಹೊರಹಾಕಿದ್ದಾರೆ ಎಂದು ಹೇಳಿದರು.
ಕರಾವಳಿಯ ಕೋಮುದ್ವೇಷ ನಿಗ್ರಹ ಪಡೆಗೆ ಕಾಯಂ ಕೆಲಸ ಇರುವುದಿಲ್ಲ. ಈ ಪಡೆಯನ್ನು ಡ್ರಗ್ಸ್ ನಿಯಂತ್ರಣಕ್ಕೆ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಪ್ರೇಮಾನಂದ ಶೆಟ್ಟಿ, ವಿಕಾಸ್ ಪುತ್ತೂರು, ರಾಜಗೋಪಾಲ ರೈ, ಗುರುಚರಣ್ ಉಪಸ್ಥಿತರಿದ್ದರು.
‘ಕಾಂಗ್ರೆಸ್ ಶಾಸಕರು ಪ್ರಯತ್ನಿಸಲಿ’
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಹಾಗೂ ಕೆಂಪುಕಲ್ಲು ಸಮಸ್ಯೆಗೆ ಬಿಜೆಪಿ ಕಾರಣ ಎಂಬ ಮಾಜಿ ಸಚಿವ ರಮಾನಾಥ ರೈ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಭರತ್ ಶೆಟ್ಟಿ ‘ರೈ ಅವರ ಈ ಹೇಳಿಕೆಯೇ ಹಾಸ್ಯಾಸ್ಪದ. ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ. ಬಿಜೆಪಿ ನಡೆಸಿದ ಮರಳು ಕೆಂಪುಕಲ್ಲು ಸಮಸ್ಯೆ ಕುರಿತ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ನವರೂ ಪಾಲ್ಗೊಂಡಿದ್ದರು. ಕಾಂಗ್ರೆಸ್‌ನ ನಾಲ್ವರು ಶಾಸಕರು ಇದ್ದು ಅವರು ಸಮಸ್ಯೆ ಪರಿಹರಿಸಲು ಯತ್ನಿಸಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.