ADVERTISEMENT

ದುಬೈನಲ್ಲೂ ಗಡಿನಾಡಿಗರ ಕನ್ನಡಪ್ರೇಮ ಮಾದರಿ: ಸೋಮಣ್ಣ ಬೇವಿನಮರದ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 5:03 IST
Last Updated 22 ಏಪ್ರಿಲ್ 2025, 5:03 IST
ದುಬೈನಲ್ಲಿ ನಡೆದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿದರು
ದುಬೈನಲ್ಲಿ ನಡೆದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿದರು   

ಕಾಸರಗೋಡು: ದುಬೈನಲ್ಲಿರುವ ಗಡಿನಾಡು ಕನ್ನಡಿಗರ ಭಾಷಾಪ್ರೇಮ ಮಾದರಿಯಾಗಿದೆ ಎಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು.

ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿಯ ದುಬೈ ಘಟಕದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ದುಬೈನ ಕರಾಮ ಫಾರ್ಚೂನ್ ಆಟ್ರೀಯಂ ಸಭಾಂಗಣದಲ್ಲಿ ಮಹಾಸಭೆ ನಡೆಯಿತು.

ADVERTISEMENT

ವಕೀಲ ಇಬ್ರಾಹಿಂ ಕಲೀಲ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಧಿಕಾರ ಸದಸ್ಯ ಸಂಜೀವಕುಮಾರ್ ಅತಿವಾಲೆ, ಝೆಡ್.ಎ.ಕಯ್ಯಾರ್, ಅಶ್ರಫ್ ಷಾ ಮಂತೂರು, ಶಿವಶಂಕರ ನೆಕ್ರಾಜೆ, ಸಂದೀಪ್ ಅಂಚನ್ ಭಾಘವಹಿಸಿದ್ದರು. ಸಮಿತಿಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಮರ್ ದೀಪ್ ಕಲ್ಲೂರಾಯ ಸ್ವಾಗತಿಸಿದರು. ಅಶ್ರಫ್ ಪಿ.ಪಿ.ಬಾಯಾರು ವಂದಿಸಿದರು.

ಎಡರಂಗ ಸರ್ಕಾರದ ವಾರ್ಷಿಕೋತ್ಸವಕ್ಕೆ ಚಾಲನೆ

ಕಾಸರಗೋಡು: ಕೇರಳದ ಎಡರಂಗ ಸರ್ಕಾರದ 4ನೇ ವಾರ್ಷಿಕೋತ್ಸವಕ್ಕೆ ಜಿಲ್ಲೆಯ ಕಾಲಿಕಡವಿನಲ್ಲಿ ಸೋಮವಾರ ಚಾಲನೆ ನೀಡಲಾಯಿತು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು. ಕಂದಾಯ ಸಚಿವ ಕೆ.ರಾಜನ್ ಅಧ್ಯಕ್ಷತೆ ವಹಿಸಿದ್ದರು.

ಸಚಿವರಾದ ರೋಷಿ ಆಗಸ್ಟಿನ್, ಕೆ.ಕುಂಞಿಕೃಷ್ಣನ್, ಎ.ಕೆ.ಶಶೀಂದ್ರನ್, ಕಡನ್ನಪಳ್ಳಿ ರಾಮಚಂದ್ರನ್, ಕೆ.ಬಿ.ಗಣೇಶ್ ಕುಮಾರ್, ಕೆ.ಎನ್.ಬಾಲಗೋಪಾಲ್ ಭಾಗವಹಿಸಿದ್ದರು.

ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾರದಾ ಮುರಳೀಧರನ್ ಸ್ವಾಗತಿಸಿದರು. 7 ದಿನ ಪಡನ್ನಕ್ಕಾಡ್ ಬೇಕಲ ಕ್ಲಬ್‌ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಈ ವಾರ್ಷಿಕೋತ್ಸವ ನಡೆಯಲಿದೆ.

ಕೊಲೆ: 4 ಮಂದಿ ಪೊಲೀಸ್ ವಶಕ್ಕೆ

ಕಾಸರಗೋಡು: ನಗರದ ಆನೆಬಾಗಿಲಿನಲ್ಲಿ ಸೋಮವಾರ ನಡೆದ ಪಶ್ಚಿಮ ಬಂಗಾಳ ನಿವಾಸಿಯ ಕೊಲೆಗೆ ಸಂಬಂಧಿಸಿ 4 ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಾರಾಗಾರಿಯ ನಿವಾಸಿ ಸುಶಾಂತ್ ರಾಯ್ (28) ಕೊಲೆಯಾದವರು. ಆರೋಪಿಗಳಲ್ಲಿ 6 ಮಂದಿ ಘಟನೆ ರೈಲಿನಲ್ಲಿ ಪರಾರಿಯಾಗಲು ಯತ್ನಿಸಿದ್ದು, ಅವರಲ್ಲಿ ನಾಲ್ವರನ್ನು ಒಟ್ಟಪ್ಪಾಲಂ ಎಂಬಲ್ಲಿಂದ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಶಾಂತ್‌ ಹಾಗೂ ಆರೋಪಿಗಳು ವಲಸೆ ಕಾರ್ಮಿಕರಾಗಿದ್ದು, ಆನೆಬಾಗಿಲಿನ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ಜತೆಗೆ ವಾಸಿಸುತ್ತಿದ್ದರು. ಅವರ ಮಧ್ಯೆ ಸೋಮವಾರ ನಸುಕಿನಲ್ಲಿ ಜಗಳ ನಡೆದಿದ್ದು, ಕೊಲೆಗೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ.

ಚಾಕು ಇರಿತ: ಆರೋಪಿಗಳು ಪರಾರಿ

ಕಾಸರಗೋಡು: ಮುನ್ನಾಡ್ ಕೊರತ್ತಿಕುಂಡು ಎಂಬಲ್ಲಿ ಪೊಲೀಸ್ ಸಿಬ್ಬಂದಿ ಸಹಿತ ಇಬ್ಬರಿಗೆ ಚಾಕು ಇರಿತ ನಡೆದಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಬೇಡಗಂ ಠಾಣೆ ಸಿಬ್ಬಂದಿ ಸೂರಜ್, ಬೀಂಬುಂಗಾಲು ನಿವಾಸಿ ಸಮೀಷ್‌ ಎಂಬುವರು ಚಾಕು ಇರಿತಕ್ಕೊಳಗಾದವರು. ಸ್ಥಳೀಯ ನಿವಾಸಿಗಳಾದ ವಿಷ್ಣು (25), ಜಿಷ್ಣು (24) ಆರೋಪಿಗಳು. ಸಮೀಷ್ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪಘಾತ: ಇಬ್ಬರು ಸಾವು

ಕಾಸರಗೋಡು: ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಕಡೆಗಳಲ್ಲಿ ರಸ್ತೆದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ.

ಬಂದ್ಯೋಡಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಮುಟ್ಟಂ ಕುನ್ನಿಲ್ ನಿವಾಸಿ ಅಬೂಬಕ್ಕರ್ (70) ಮೃತಪಟ್ಟಿದ್ದಾರೆ. ಪರಾರಿಯಾದ ಕಾರನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಬೇಳದಲ್ಲಿ ನಡೆದ ಅವಘಡದಲ್ಲಿ ಮಾನ್ಯಕಡವು ನಿವಾಸಿ ಗೋಪಾಲ ಶೆಟ್ಟಿ (60) ಮೃತ ಪಟ್ಟಿದ್ದಾರೆ. ಬದಿಯಡ್ಕದಿಂದ ಕುಂಬಳೆಗೆ ತೆರಳುತ್ತಿದ್ದ ಕಾರು ಡಿಕ್ಕಿಯಾಗಿತ್ತು.

ಆತ್ಮಹತ್ಯೆ

ಕಾಸರಗೋಡು: ಪೆರಿಯಾಟಡ್ಕ ನಿವಾಸಿ ಬೀಕೇಶ್ (27) ಸೋಮವಾರ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಜ್ಯೋತಿಷಿಯಾಗಿದ್ದರು. ಬೇಕಲ ಪೊಲೀಸರು ತನಿಖೆ ನಡೆಸಿದ್ದಾರೆ.

ಕಾಸರಗೋಡಿನ ಕಾಲಿಕಡವಿನಲ್ಲಿ ನಡೆದ ಕೇರಳ ಸರ್ಕಾರದ 4ನೇ ವಾರ್ಷಿಕೋತ್ಸವವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.