ADVERTISEMENT

ಶ್ರೀಮಂತರಿದ್ದರೂ ಬಡವರು

ಶಾಂತಿವನ ಟ್ರಸ್ಟ್: ಯೋಗ, ನೈತಿಕ ಶಿಕ್ಷಣ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 11:35 IST
Last Updated 11 ಜನವರಿ 2019, 11:35 IST
ಧರ್ಮಸ್ಥಳದಲ್ಲಿ ಶುಕ್ರವಾರ ನಡೆದ ವಿಜೇತರಿಗೆ ಪುರಸ್ಕಾರ ನೀಡುವ ಸಮಾರಂಭದಲ್ಲಿ ಹಾಸ್ಯ ಸಾಹಿತಿ ಎಚ್. ದುಂಡಿರಾಜ್  ಮಾತನಾಡಿದರು.
ಧರ್ಮಸ್ಥಳದಲ್ಲಿ ಶುಕ್ರವಾರ ನಡೆದ ವಿಜೇತರಿಗೆ ಪುರಸ್ಕಾರ ನೀಡುವ ಸಮಾರಂಭದಲ್ಲಿ ಹಾಸ್ಯ ಸಾಹಿತಿ ಎಚ್. ದುಂಡಿರಾಜ್  ಮಾತನಾಡಿದರು.   

ಉಜಿರೆ: ಹಿಂದೆ ನಮಗೆ ಆರ್ಥಿಕ ಬಡತನವಿದ್ದರೂ, ಸಾಂಸ್ಕೃತಿಕವಾಗಿ ಶ್ರೀಮಂತರಾಗಿದ್ದೆವು. ಆದರೆ ಈಗ ಆರ್ಥಿಕವಾಗಿ ಶ್ರೀಮಂತರಾಗಿದ್ದೇವೆ. ಸಾಂಸ್ಕೃತಿಕವಾಗಿ ಬಡವರಾಗಿದ್ದೇವೆ ಎಂದು ಹಾಸ್ಯ ಸಾಹಿತಿ ಎಚ್. ದುಂಡಿರಾಜ್ ಹೇಳಿದರು.

ಧರ್ಮಸ್ಥಳದಲ್ಲಿ ಶುಕ್ರವಾರ ನಡೆದ ಶಾಂತಿವನ ಟ್ರಸ್ಟ್‌ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ಆಶ್ರಯದಲ್ಲಿ ಜ್ಞಾನ ಗಂಗೆ ಮತ್ತು ಜ್ಞಾನ ತುಂಗೆ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು ಆಧರಿಸಿದ ಸ್ಪರ್ಧೆಗಳ ವಿಜೇತರಿಗೆ ಪುರಸ್ಕಾರ ನೀಡುವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ವಿತರಣೆ ಮೂಲಕ ಹೆಗ್ಗಡೆ ಅವರು ಶಿಕ್ಷಣದ ಮೂಲಕ ಸಭ್ಯ, ಸುಸಂಸ್ಕೃತ ನಾಗರಿಕರನ್ನು ರೂಪಿಸುತ್ತಿದ್ದಾರೆ. ಸರ್ಕಾರ ಮಾಡಬೇಕಾದ ಕಾರ್ಯವನ್ನು ಅವರು ಮಾಡುತ್ತಿರವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಸಿ ಹಂಚಿದರೆ ವನಮಹೋತ್ಸವ. ಖುಷಿ ಹಂಚಿದರೆ ಜೀವನ ಮಹೋತ್ಸ. ಆದುದರಿಂದ ಕಲೆ, ಸಂಸ್ಕೃತಿ ಮೂಲಕ ಖುಷಿ ಹಂಚೋಣ. ಶಾಂತಿ, ನೆಮ್ಮದಿಯ ಜೀವನ ನಡೆಸೋಣ’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ‘ಶಿಕ್ಷಣದ ಮೂಲಕ ಜ್ಞಾನ ವೃದ್ಧಿಸಿಕೊಂಡು ಆದರ್ಶ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಭವಿಷ್ಯವೇ ದೇಶದ ಭಾಗ್ಯವಾಗಿದೆ. ಕೆಟ್ಟ ಗುಣಗಳನ್ನು ತ್ಯಜಿಸಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಬದುಕಿನ ಪಾಠವನ್ನೂ ಕಲಿಯಬೇಕು’ ಎಂದು ಹೆಗ್ಗಡೆ ಕಿವಿಮಾತು ಹೇಳಿದರು.

ಶ್ರದ್ಧಾ ಅಮಿತ್, ಭಾರತಿ ದುಂಡಿರಾಜ್, ಮತ್ತು ಉಡುಪಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಮಧುಕರ್ ಮತ್ತು ಚಂದ್ರಶೇಖರ ಕೆದಿಲಾಯ ಉಪಸ್ಥಿತರಿದ್ದರು.

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಶಶಿಕಾಂತ ಜೈನ್ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಂಘಟಕ ಅಶೋಕ ಸಿ. ಪೂಜಾರಿ ಧನ್ಯವಾದ ಸಲ್ಲಿಸಿದರು. ಬಂಟ್ವಾಳದ ಸದಾಶಿವ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.