
ಶೃಂಗೇರಿ: ‘ಶೃಂಗೇರಿ ಶಾರದಾ ಪೀಠದ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕರಿಸಿದ ಸುವರ್ಣ ಭಾರತೀ ಅಂಗವಾಗಿ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡವು ಭಾರತೀತೀರ್ಥ ಸ್ವಾಮೀಜಿ ಹೆಸರಿನಲ್ಲಿ ಆರಂಭಗೊಳ್ಳಲಿದೆ’ ಎಂದು ಜೆಸಿಬಿಎಂ ಕಾಲೇಜಿನ ಶ್ರೀಭಾರತೀ ವಿದ್ಯಾಸಂಸ್ಥೆ ಅಧ್ಯಕ್ಷ, ಹರಿಹರಪುರ ಮಠದ ಗುರುಗಳಾದ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಪದವಿ ಪೂರ್ವ ಕಾಲೇಜಿನ ಶಿಲಾನ್ಯಾಸ ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಮಲೆನಾಡು ಭಾಗದ ಮೊದಲ ಕಾಲೇಜಾಗಿ 1965ರಲ್ಲಿ ಆರಂಭಗೊಂಡು, ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಉತ್ತಮ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಣ ಪ್ರಸ್ತುತ ಅಗತ್ಯ ಮತ್ತು ಅನಿವಾರ್ಯವಾಗಿದೆ. ಬದಲಾದ ಶಿಕ್ಷಣ ಪದ್ಧತಿಯಲ್ಲಿ ಸ್ಥಳೀಯವಾಗಿ ಕಲೆ ಮತ್ತು ಸಾಹಿತ್ಯ, ನಾಟಕ, ನೃತ್ಯ, ವಾದ್ಯ ಸಂಗೀತ ಮೊದಲಾದ ವಿಷಯದಲ್ಲಿ ಸರ್ಕಾರದ ಅಧಿಕೃತ ಪ್ರಮಾಣ ಪತ್ರ ಇಲ್ಲಿ ಪಡೆಯಬಹುದಾಗಿದೆ. ಪದವಿ ಪೂರ್ವ ಹಾಗೂ ಪದವಿ ಕಾಲೇಜು ಒಂದೇ ಆವರಣದಲ್ಲಿದ್ದು, ನೂತನ ಕಟ್ಟಡ ಪದವಿ ಪೂರ್ವ ವಿಭಾಗಕ್ಕೆ ಅಗತ್ಯವಾದ ಸೌಲಭ್ಯದೊಂದಿಗೆ ಶೀಘ್ರದಲ್ಲಿ ಆರಂಭಗೊಳ್ಳಲಿದೆ. ಹಿರಿಯ ವಿದ್ಯಾರ್ಥಿಗಳು ಹಾಗೂ ದಾನಿಗಳು ಉದಾರವಾಗಿ ಸಹಾಯ ನೀಡಬೇಕು’ ಎಂದು ಮನವಿ ಮಾಡಿದರು.
ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯರಾದ ಚಂದ್ರಶೇಖರರಾವ್, ಪುಷ್ಪಾಲಕ್ಷ್ಮೀನಾರಾಯಣ, ಶ್ರೀಕಂಠರಾವ್, ಶ್ರೀಧರ್ ಪೈ, ಕಳಸಪ್ಪ, ಕೆ.ಎಸ್ ಮಂಜುನಾಥ್, ತ್ಯಾಗರಾಜರಾವ್, ಪರಾಶರ, ಪ್ರಾಂಶುಪಾಲರಾದ ಎಂ.ಸ್ವಾಮಿ, ಎ.ಜಿ.ಪ್ರಶಾಂತ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.