ADVERTISEMENT

ಬಡ ಕುಟುಂಬಕ್ಕೆ ನ್ಯಾಯ ಒದಗಿಸಲು ಶಾಸಕ ಅಶೋಕ್‌ ಕುಮಾರ್ ಭರವಸೆ

ವೃದ್ಧ ದಂಪತಿ ಧರಣಿ: ಅಶೋಕ್ ರೈ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 6:53 IST
Last Updated 5 ಜನವರಿ 2026, 6:53 IST
ಪುತ್ತೂರು ಆಡಳಿತ ಸೌಧದ ಮುಂಭಾಘ ಧರಣಿ ನಡೆಸುತ್ತಿರುವ ವೃದ್ಧ ದಂಪತಿಯನ್ನು ಶಾಸಕ ಅಶೋಕ್ ರೈ ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು
ಪುತ್ತೂರು ಆಡಳಿತ ಸೌಧದ ಮುಂಭಾಘ ಧರಣಿ ನಡೆಸುತ್ತಿರುವ ವೃದ್ಧ ದಂಪತಿಯನ್ನು ಶಾಸಕ ಅಶೋಕ್ ರೈ ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದರು   

ಪುತ್ತೂರು: ಮನೆಯನ್ನು ಕಂದಾಯ ಇಲಾಖೆ ಅಧಿಕಾರಿಗಳು ನೆಲಸಮಗೊಳಿಸಿ ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ ಎಂದು ಆರೋಪಿಸಿ ಕಡಬ ತಾಲ್ಲೂಕಿನ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿಗಳಾದ ವೃದ್ಧ ರಾಧಮ್ಮ ಹಾಗೂ ಮುತ್ತು ಸ್ವಾಮಿ ದಂಪತಿ 7 ದಿನಗಳಿಂದ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಶೋಕ್‌ ಕುಮಾರ್ ರೈ ಮಾತುಕತೆ ನಡೆಸಿದರು.

ನೀತಿ ತಂಡದ ಜಯಂತ ಟಿ. ಧರಣಿ ನಿರತರ ಜತೆಗಿದ್ದರು.

ಅನ್ಯಾಯವನ್ನು ವಿವರಿಸಿದ ದಂಪತಿ, ಬೇಡಿಕೆಯನ್ನು ಮುಂದಿಟ್ಟರು. ಸೋಮವಾರ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನ್ಯಾಯ ಒದಗಿಸುವ ಭರವಸೆ ನೀಡಿದ ಶಾಸಕ, ಧರಣಿ ಹಿಂತೆಗೆದುಕೊಳ್ಳುವಂತೆ ವಿನಂತಿಸಿಕೊಂಡರು. ಆದರೆ, ಸ್ಪಂದಿಸಲಿಲ್ಲ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಶೋಕ್ ರೈ, ವೃದ್ಧ ದಂಪತಿ ಬಡವರಾಗಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಹೊರಗಿನವರಾದರೂ ಕ್ಷೇತ್ರದ ವ್ಯಾಪ್ತಿಯಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಕಚೇರಿಯ ಎದುರು ನ್ಯಾಯದ ಬೇಡಿಕೆಯನ್ನು ಮುಂದಿಟ್ಟು ಧರಣಿ ಕುಳಿತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಅವರಿಗೆ 94 ಸಿಯಡಿ ವಾಸ್ತವ್ಯದ ಮನೆಯ ಅಡಿಸ್ಥಳ ಮಾಡಿಕೊಡಬಹುದು ಎಂಬ ಕುರಿತು ಚರ್ಚಿಸಿ ಕೊಡಿಸುವ ಪ್ರಯತ್ನ ಮಾಡಲಾಗುವುದು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎಂದರು.

ನ್ಯಾಯಾಲಯ ಆದೇಶವಿದೆ ಎಂದು ಅಧಿಕಾರಿಗಳು ಅವರ ಮನೆಯನ್ನು ನೆಲಸಮ ಮಾಡಿದ್ದಾರೆ. ಆದರೆ, ನ್ಯಾಯಾಲಯ ಆದೇಶವಿರುವ ಮನೆ ಇನ್ನೊಬ್ಬರ ಹೆಸರಿನಲ್ಲಿದೆ. ಈ ಮನೆ ನಮ್ಮ ಹೆಸರಿನಲ್ಲಿದೆ. ನಾವು ಆ ಸ್ಥಳದಲ್ಲಿ 20 ವರ್ಷಗಳಿಂದ ವಾಸ್ತವ್ಯವಿದ್ದೇವೆ. 94ಸಿಗೂ ಅರ್ಜಿ ಸಲ್ಲಿಸಿದ್ದೇವೆ. ಆದರೆ, ಅಧಿಕಾರಿಗಳು ನಮ್ಮ ಅರ್ಜಿ ತಿರಸ್ಕರಿಸಿದ್ದಾರೆ. ಅಲ್ಲೇ ಇರುವ ಬೇರೆಯವರಿಗೆ ಮಾಡಿಕೊಟ್ಟಿದ್ದಾರೆ ಎಂದು ದಂಪತಿ ಹೇಳುತ್ತಿದ್ದಾರೆ ಎಂದ ಶಾಸಕ, ಅಧಿಕಾರಿಗಳು ತಪ್ಪು ಕೆಲಸ ಮಾಡಿದ್ದರೆ ಅವರ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.