ADVERTISEMENT

ಆನೆ ಕಾರ್ಯಪಡೆ ಶೀಘ್ರ ಕಾರ್ಯಾರಂಭ

ಪಿಲಿಕುಳದ ಸ್ಕೌಟ್ಸ್‌ ಭವನದಲ್ಲಿ ಹಕ್ಕಿ ಹಬ್ಬ ಆರಂಭ: ನಾಡಿನ ವಿವಿಧ ಕಡೆಯ ಹಕ್ಕಿಪ್ರಿಯರ ಕಲರವ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 7:32 IST
Last Updated 10 ಜನವರಿ 2026, 7:32 IST
ಹಕ್ಕಿಹಬ್ಬದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರ 
ಹಕ್ಕಿಹಬ್ಬದಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರ    

ಮಂಗಳೂರು: ಪರಿಸರ ಅಸಮತೋಲನದಿಂದ ರಾಜ್ಯದಲ್ಲಿ ಮಾನವ -ಪ್ರಾಣಿ ಸಂಘರ್ಷ ಹೆಚ್ಚಾಗಿದ್ದು ಆನೆಗಳ ಆವಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು ರಚಿಸಿದ ಆನೆ ಕಾರ್ಯಪಡೆ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮತ್ತು ಅರಣ್ಯ ಇಲಾಖೆ ನಗರ ಹೊರವಲಯದ ಪಿಲಿಕುಳದ ಸ್ಕೌಟ್ಸ್‌ ಭವನದಲ್ಲಿ ಆಯೋಜಿಸಿರುವ ಹಕ್ಕಿ ಹಬ್ಬವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು ಕಾಡಂಚಿನಲ್ಲಿ ಪ್ರಾಣಿಗಳ ಆಕ್ರಮಣದಿಂದ ರಾಜ್ಯದಲ್ಲಿ ಪ್ರತಿವರ್ಷ 45ರಿಂದ 50 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಯಲು ಬೆಂಗಳೂರಿನಲ್ಲಿ ಸಮಗ್ರ ನಿರ್ವಹಣಾ ಕೇಂದ್ರ ಸ್ಥಾಪಿಸಲಾಗಿದೆ ಎಂದರು.

ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ ಹುಲಿ ಮತ್ತು ಆನೆಗಳ ಸಂಖ್ಯೆ ಹೆಚ್ಚಾಗಿದೆ. ಅದಕ್ಕನುಗುಣವಾಗಿ ಅರಣ್ಯ ಪ್ರದೇಶ ಅಭಿವೃದ್ಧಿಯಾಗಲಿಲ್ಲ. ಅರಣ್ಯ ಭೂಮಿ ಒತ್ತುವರಿ ಹೆಚ್ಚಾಗಿರುವುದು ಕುಡ ಮಾನವ–ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿದೆ. ಅದರಿಂದ ಅಮೂಲ್ಯ ಜೀವಗಳು ಇಲ್ಲದಾಗುತ್ತಿರುವುದು ವಿಷಾದದ ವಿಷಯ ಎಂದು ಸಚಿವರು ಹೇಳಿದರು. ಅರಣ್ಯ ವ್ಯಾಪ್ತಿಯಿಂದ ಹೊರಬರಲು ಅನೇಕ ಮಂದಿ ಮುಂದಾಗಿದ್ದಾರೆ. ಅದಕ್ಕೆ ಯೋಜನೆ ರೂಪಿಸಲು ₹ 300 ಕೋಟಿ ಮೊತ್ತ ಅಗತ್ಯವಿದೆ. ಡೀಮ್ಡ್‌ ಅರಣ್ಯ ವಿಷಯದಲ್ಲಿ ಅಂತಿಮ ವರದಿಯನ್ನು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಲಾಗುವುದು ಎಂದರು.  

ADVERTISEMENT

ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮಳೆ ಏರುಪೇರಾಗುತ್ತಿದೆ. ಹೀಗಾಗಿ ಅರಣ್ಯ, ಪರಿಸರ ಉಳಿಯಬೇಕು. ವಲಸೆ ಹಕ್ಕಿಗಳನ್ನು ಗುರುತಿಸಿ ಅವುಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ ಪರಿಸರಕ್ಕೂ ಆರೋಗ್ಯಕ್ಕೂ ಸಂಬಂಧವಿದೆ. ಪರಿಸರ ಉಳಿಸದೇ ಇದ್ದರೆ ಭವಿಷ್ಯ ಸಂಕಷ್ಟಮಯವಾಗಲಿದೆ. ಪಶ್ಚಿಮ ಘಟ್ಟ ಅಳಿದು ಹೋದರೆ ಕರ್ನಾಟಕ ರಾಜ್ಯಕ್ಕೆ ದೊಡ್ಡ ನಷ್ಟವಾಗಲಿದೆ ಎಂದರು.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಉಮಾನಾಥ ಕೋಟ್ಯಾನ್‌, ಐವನ್ ಡಿಸೋಜ, ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಗಫೂರ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್‌, ಉಪಾಧ್ಯಕ್ಷ ರಮಾನಾಥ ರೈ, ಅರಣ್ಯ ಇಲಾಖೆ ಅಧಿಕಾರಿಗಳಾದ ಮೀನಾಕ್ಷಿ ನೇಗಿ, ಸುಧಾ, ಕರಿಕಾಲನ್, ಅ್ಯಾಂಟನಿ ಮರಿಯಪ್ಪ ಮತ್ತಿತರರು ಪಾಲ್ಗೊಂಡಿದ್ದರು. 

ಜೇನು ಕೃಷಿಕ ಪ್ರಜ್ವಲ್ ಎಂ ಕಿನ್ನಿಗೋಳಿ, ಪಕ್ಷಿಕೆರೆಯ ಪೇಪರ್ ಸೀಡ್ ಸಂಸ್ಥೆ ಸ್ಥಾಪಕ ನಿತಿನ್ ವಾಜ್, ಗಿಡ–ಮರ ಸಂರಕ್ಷಕ ಜೀತ್ ಮಿಲನ್ ರೋಚ್ ಅವರನ್ನು ಸನ್ಮಾನಿಸಲಾಯಿತು. 

ಮಂಗಳೂರಿನ ಕದ್ರಿ ಉದ್ಯಾನದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಕಟ್ಟಡವನ್ನು ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಿದರು. ದಿನೇಶ್ ಗುಂಡೂರಾವ್ ಯು.ಟಿ ಖಾದರ್ ಕ್ಯಾಪ್ಟನ್‌ ಬ್ರಿಜೇಶ್ ಚೌಟ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಐವನ್ ಡಿಸೋಜ ಪಾಲ್ಗೊಂಡಿದ್ದರು ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.