ADVERTISEMENT

ಏಳಿಂಜೆ: ದಂಪತಿ ಕೊಲೆ– ಆರೋಪ ಸಾಬೀತು

ಅಪರಾಧಿ ಆಲ್ಫೋನ್ಸ್ ಸಲ್ಡಾನಗೆ ಶಿಕ್ಷೆಯ ಪ್ರಮಾಣ ನಿಗದಿಯಷ್ಟೇ ಬಾಕಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 6:11 IST
Last Updated 14 ಜನವರಿ 2026, 6:11 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಮಂಗಳೂರು: ತಾಲ್ಲೂಕಿನ ಏಳಿಂಜೆ ಗ್ರಾಮದಲ್ಲಿ 2020ರಲ್ಲಿ ನಡೆದಿದ್ದ ವಿನ್ಸೆಂಟ್‌ ಡಿಸೋಜ–ಹೆಲೆನ್ ಡಿಸೋಜ ದಂಪತಿ ಕೊಲೆ ಪ್ರಕರಣದಲ್ಲಿ ಅವರ ನೆರೆಮನೆಯ ಆಲ್ಫೋನ್ಸ್‌ ಸಲ್ಡಾನ ಮೇಲಿನ ಕೊಲೆ ಆರೋಪವು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಅಪರಾಧಿ ಆಲ್ಫೋನ್ಸ್‌ ಸಲ್ಡಾನಗೆ ಶಿಕ್ಷೆಯ ಪ್ರಮಾಣ ನಿರ್ಧರಿಸುವ ಬಗ್ಗೆ ಇದೇ ಬುಧವಾರ ವಿಚಾರಣೆ ನಿಗದಿಯಾಗಿದೆ. 

ADVERTISEMENT

ಸ್ನೇಹಿತರಾಗಿದ್ದ ಆಲ್ಫೋನ್ಸ್ ಸಲ್ಡಾನ ಮತ್ತು ನೆರಮನೆಯ ವಿನ್ಸೆಂಟ್‌ ಡಿಸೋಜ ಸಂಬಂಧ ಕ್ರಮೇಣ ಹಳಸಿತ್ತು. ಆಲ್ಫೋನ್ಸ್‌ ಜಾಗದಲ್ಲಿದ್ದ ಮರದ ಕೊಂಬೆಗಳು ವಿನ್ಸೆಂಟ್ ಜಾಗದತ್ತ ಚಾಚಿಕೊಂಡಿದ್ದವು. ಇವುಗಳನ್ನು ತೆರವುಗೊಳಿಸುವ ವಿಚಾರದಲ್ಲಿ ಅವರಿಬ್ಬರ ನಡುವೆ ಜಗಳ ನಡೆದಿತ್ತು. ಈ ವಿವಾದ ಇತ್ಯರ್ಥಕ್ಕಾಗಿ ಆಲ್ಫೋನ್ಸ್‌ 2020ರಲ್ಲಿ ಏ. 29ರಂದು ವಿನ್ಸೆಂಟ್‌ ಅವರನ್ನು ಮನೆಗೆ ಕರೆಸಿಕೊಂಡಿದ್ದ. ಮರದ ಕೊಂಬೆಗಳನ್ನು ತೆರವುಗೊಳಿಸಲು ನಿರಾಕರಿಸಿದ್ದ ಆತ, ಜಗಳ ಕಾಯ್ದು ಸ್ಥಳದಲ್ಲಿದ್ದ ಹಾರೆಯನ್ನು ಹಿಡಿದು ವಿನ್ಸೆಂಟ್ ಮೇಲೆ ಹಲ್ಲೆಗೆ ಮುಂದಾಗಿದ್ದ. ಬಳಿಕ ಅಡುಗೆ ಮನೆಯಿಂದ ಚೂರಿಯನ್ನು ತಂದು ವಿನ್ಸೆಂಟ್‌ಗೆ ಇರಿದಿದ್ದ. ಪತಿಯ ರಕ್ಷಣೆಗೆ ಧಾವಿಸಿದ ವಿನ್ಸೆಂಟ್ ಪತ್ನಿ ಹೆಲೆನ್ ಎದೆ ಹಾಗೂ ಸೊಂಟಕ್ಕೂ ಚೂರಿಯಿಂದ ತಿವಿದಿದ್ದ. ವಿನ್ಸೆಂಟ್‌ ಸ್ಥಳದಲ್ಲೇ ಅಸುನೀಗಿದ್ದರೆ, ಹೆಲೆನ್ ಆಸ್ಪತ್ರೆಗೆ ಕರೆದೊಯ್ಯುವಾಗ  ದಾರಿ ಮಧ್ಯೆ ಮೃತಪಟ್ಟಿದ್ದರು.

ಮೂಲ್ಕಿ ಠಾಣೆಯ ಆಗಿನ ಪಿಎಸ್‌ಐ ಶೀತಲ್ ಆಲಗೂರು ಪ್ರಕರಣ ದಾಖಲಿಸಿಕೊಂಡಿದ್ದರು. ನ್ಯಾಯಾಲಯಕ್ಕೆ ಇನ್‌ಸ್ಪೆಕ್ಟರ್ ಜಯರಾಮ ಗೌಡ  ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎನ್  ನಡೆಸಿದ್ದರು.  ನಂತರ ಪ್ರಕರಣವು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಆಲ್ಫೋನ್ಸ್‌ ಸಲ್ಡಾನ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 341 (ಅಕ್ರಮ ಬಂಧನ), ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), ಸೆಕ್ಷನ್ 302 (ಕೊಲೆ)ರ ಅಡಿ ಅಪರಾಧ ಎಸಗಿರುವುದು ಸಾಬೀತಾಗಿದೆ ಎಂದು ನ್ಯಾಯಾಧೀಶರಾದ ಜಗದೀಶ್‌ ವಿ.ಎನ್‌  ತೀರ್ಪು ನೀಡಿದ್ದಾರೆ ಎಂದು ಈ ಪ್ರಕರಣದಲ್ಲಿ ಸರ್ಕಾರಿ ವಕೀಲರಾದ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತ ಸುದ್ದಿಗಾರರಿಗೆ ತಿಳಿಸಿದರು.  

‘ಆಲ್ಫೋನ್ಸ್ ಸಲ್ಡಾನ ಜೈಲಿನಲ್ಲಿದ್ದಾನೆ. ಆತನಿಗೆ ಮದುವೆಯಾಗಿಲ್ಲ. ವಿದೇಶದಲ್ಲಿ ಉದ್ಯೋಗದಲ್ಲಿದ್ದ ಆತ ಕುಟುಂಬದ ಕೃಷಿ ಜಮೀನು ನೋಡಿಕೊಳ್ಳಲು ಹುಟ್ಟೂರಾದ ಏಳಿಂಜೆಗೆ ಮರಳಿದ್ದ. ಆತ ಮನೆ ನಿರ್ಮಿಸಲು ವಿನ್ಸೆಂಟ್‌ ಡಿಸೋಜ ಹಾಗೂ ನೆರೆ ಕರೆಯವರು ನೆರವಾಗಿದ್ದರು. ನಂತರ ಅವರ ನಡುವೆಯೇ ವೈಮನಸ್ಸು ಬೆಳೆದಿತ್ತು’ ಎಂದು ಅವರು ವಿವರಿಸಿದರು. 

ದಂಪತಿ ಕೊಲೆಯಾದಾಗ ಅವರಿಗೆ 10ನೇ ತರಗತಿಯಲ್ಲಿ ಕಲಿಯುತ್ತಿದ್ದ ಮಗಳು ಹಾಗೂ 5ನೇ ತರಗತಿಯಲ್ಲಿ ಕಲಿಯುತ್ತಿದ್ದ ಮಗ ಇದ್ದರು. ಅಪ್ರಾಪ್ತ ವಯಸ್ಸಿನ ಆ ಇಬ್ಬರೂ ಅನಾಥರಾಗಿದ್ದರು. ಬಳಿಕ ಹೆಲೆನ್ ಅವರ ಸೋದರಿ ಅವರನ್ನು ಬೆಳೆಸಿದ್ದರು. ಸಂತ್ರಸ್ತ ಮಕ್ಕಳಿಗೆ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ಒದಗಿಸಬೇಕು ಎಂದು ನ್ಯಾಯಾಲಯವನ್ನು ಕೋರುತ್ತೇವೆ’ ಎಂದು ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.