
ಮಂಗಳೂರು: ‘ರಾಷ್ಟ್ರ ನಿರ‍್ಮಾಣಕ್ಕೆ ಶಿಕ್ಷಣ ಶಕ್ತಿಶಾಲಿ ಅಡಿಪಾಯ. ದೇಶ ಕಟ್ಟುವಲ್ಲಿ ಎಂಜಿನಿಯರ್‌ಗಳ ಪಾತ್ರ ಮಹತ್ವದ್ದು. ಬುದ್ಧಿಮತ್ತೆಯ ಜೊತೆಗೆ ಭಾವನಾತ್ಮಕ ಮತ್ತು ಆತ್ಮೀಯತೆಯೂ ಅಗತ್ಯ’ ಎಂದು ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು.
ವಾಮಂಜೂರಿನ ಸೇಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) ಬೆಳ್ಳಿಹಬ್ಬದ ಆಚರಣೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಶಾಸಕ ಡಾ. ಭರತ್ ಶೆಟ್ಟಿ ವೈ., ‘ವಿದ್ಯಾರ್ಥಿಗಳಿಗೆ ಶಿಷ್ಯವೇತನ ಯೋಜನೆಗಳನ್ನು ಘೋಷಿಸುವ ಮೂಲಕ ಎಸ್‌ಜೆಇಸಿಯು ಜವಾಬ್ದಾರಿಯುತ ವೃತ್ತಿಪರರನ್ನು ರೂಪಿಸುತ್ತಿದೆ’ ಎಂದು ಶ್ಲಾಘಿಸಿದರು.
ಕಾಂಗ್ರೆಸ್ ಮುಖಂಡ ಬಿ. ರಾಮನಾಥ ರೈ ಕಾಲೇಜಿನ 25 ವರ್ಷಗಳ ಸಾಧನೆಯನ್ನು ದಾಖಲಿಸುವ ಕಾಫಿ ಟೇಬಲ್ ಪುಸ್ತಕದ ಮುಖಪುಟವನ್ನು ಬಿಡುಗಡೆ ಮಾಡಿದರು. ಕಾಂಗ್ರೆಸ್ ಮುಖಂಡ ಜೆ.ಆರ್. ಲೋಬೊ ಸಿಬ್ಬಂದಿ ಮುಂದಾಳತ್ವ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಫಾ.ಜೆರಾಲ್ಡ್ ಐಸಾಕ್ ಲೋಬೊ ಅವರು ನವ ಮೂಲಸೌಕರ್ಯ ಯೋಜನೆಗಳ ವಿಡಿಯೊ ಅನಾವರಣಗೊಳಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಎಸ್‌ಜೆಇಸಿ ಅಧ್ಯಕ್ಷ ಫಾ.ಪೀಟರ್ ಪೌಲ್ ಸಲ್ಡಾನ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಜೆಇಸಿಯ ಬೆಳವಣಿಗೆಯನ್ನು ಕಟ್ಟಿಕೊಟ್ಟ ಪ್ರಾಂಶುಪಾಲ ರಿಯೋ ಡಿಸೋಜ, ‘ಮೌಲ್ಯಾಧಾರಿತ ಶಿಕ್ಷಣ ಮತ್ತು ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಂಸ್ಥೆಯು ಸದಾ ಬದ್ಧವಾಗಿದೆ’ ಎಂದರು.
ಕಾಲೇಜಿನ ಶೈಕ್ಷಣಿಕ ಸಾಧನೆಗಳು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಪರಿಚಯಿಸುವ ‘ಎಸ್‌ಜೆಇಸಿ – 25 ವರ್ಷಗಳ ಬೆಳವಣಿಗೆ, ಕೃಪೆ ಮತ್ತು ಕೃತಜ್ಞತೆ’ ಎಂಬ ವಿಡಿಯೊ ಪ್ರದರ್ಶಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಾರತದ ವಿವಿಧ ರಾಜ್ಯಗಳ ನೃತ್ಯರೂಪಕಗಳು ರಾಷ್ಟ್ರದ ವೈವಿಧ್ಯತೆಯಲ್ಲಿನ ಏಕತೆಯನ್ನು ಪ್ರತಿಬಿಂಬಿಸಿದವು. ಕಾರ್ಯಕ್ರಮವನ್ನು ಸ್ಮಿತಾ ಡಿಸೋಜ ಮತ್ತು ಅಶ್ವಿನ್ ಶೆಟ್ಟಿ ನಿರೂಪಿಸಿದರು. ಎಸ್‌ಜೆಇಸಿ ನಿರ್ದೇಶಕರಾದ ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜ ಸ್ವಾಗತಿಸಿದರು. ಸಬಿನಾ ರಚನಾ ಕ್ರಾಸ್ತ ಧನ್ಯವಾದ ಸಲ್ಲಿಸಿದರು. ಸಂಯೋಜಕ ವಿನೂತನ್ ಕಲಿವೀರ್, ಸಬಿನಾ ರಚನಾ ಕ್ರಾಸ್ತ ಮತ್ತು ಬೆಳ್ಳಿಹಬ್ಬ ಸಂಯೋಜಕ ಬಿನು ಕೆ.ಜಿ ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.