ಮಂಗಳೂರು: ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ನೌಕರರ ಪಿಂಚಣಿ ಹಾಗೂ ಗ್ರ್ಯಾಚುಟಿಗಾಗಿ ಗ್ರಾಹಕರಿಂದ ಹಣ ವಸೂಲಿ ಮಾಡುತ್ತಿರುವುದು ಹಗಲು ದರೋಡೆಗೆ ಸಮಾನ ಎಂದು ಶಾಸಕ ವೇದವ್ಯಾಸ ಕಾಮತ್ ದೂರಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಿಂಚಣಿ ಮತ್ತು ಗ್ರ್ಯಾಚುಟಿಗಾಗಿ ಗ್ರಾಹಕರ ಬಿಲ್ ಜೊತೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವುದರ ಬಗ್ಗೆ ಮಾತನಾಡಿದ ಅದು ಹಿಂದಿನ ಸರ್ಕಾರದ ಯೋಜನೆ ಎಂದು ಸರ್ಕಾರದ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಇದು ಶುದ್ಧ ಸುಳ್ಳು ಎಂಬುದು ಬಿಜೆಪಿ ಸರ್ಕಾರ ಮತ್ತು ಈಗಿನ ಸರ್ಕಾರದ ಅವಧಿಯ ಬಿಲ್ ಪರಿಶೀಲಿಸಿದರೆ ತಿಳಿಯುತ್ತದೆ ಎಂದರು. ಒಂದು ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ಜಾರಿ ಮಾಡಿದ್ದಾಗಿದ್ದರೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ತೆಗೆದುಕೊಂಡಂತೆ ಇದನ್ನು ಕೂಡ ವಾಪಸ್ ತೆಗೆದುಕೊಳ್ಳಲು ಏನು ಉದಾಸೀನ ಎಂದು ಅವರು ಪ್ರಶ್ನಿಸಿದರು.
‘ಎಸ್ಕಾಂಗಳ ನೌಕರರು ಅತ್ಯಂತ ದುಷ್ಕರ ಸನ್ನಿವೇಶದಲ್ಲೂ ಕೆಲಸ ಮಾಡಿ ಜನರಿಗೆ ವಿದ್ಯುತ್ ಒದಗಿಸಲು ಪ್ರಯತ್ನಿಸುತ್ತಾರೆ. ಅವರಿಗೆ ಪಿಂಚಣಿ ಹಾಗೂ ಗ್ರಾಚ್ಯುಟಿ ನೀಡಲೇಬೇಕು. ಆದರೆ ಅದಕ್ಕೆ ಬೊಕ್ಕಸದಿಂದ ಹಣ ಬಳಸಬೇಕೇ ಹೊರತು ಜನರ ಜೇಬಿನಿಂದ ಕಸಿಯಬಾರದು’ ಎಂದು ಹೇಳಿದರು.
‘ಸ್ಮಾರ್ಟ್ ಮೀಟರ್ ಕಡ್ಡಾಯವಾಗಿ ಅಳವಡಿಸಬೇಕು ಎಂಬ ಆದೇಶದ ಮೂಲಕವೂ ಸರ್ಕಾರ ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಹೊರಟಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಇದನ್ನು ಜಾರಿಮಾಡಿದಾಗ ಹೈಕೋರ್ಟ್ ಛೀಮಾರಿ ಹಾಕಿದೆ. ಆದರೂ ಈಗ ಬೇರೆ ಎಸ್ಕಾಂಗಳಲ್ಲಿ ಜಾರಿಗೆ ತರಲು ಹುನ್ನಾರ ನಡೆಯುತ್ತಿದೆ. ಇದು ಜಾರಿಯಾದರೆ ₹ 900ರಿಂದ ಒಂದೂವರೆ ಸಾವಿರಕ್ಕೆ ಸಿಗುವ ಮೀಟರ್‌ಗೆ ₹ 10 ಸಾವಿರ ವ್ಯಯಿಸಬೇಕಾಗುತ್ತದೆ’ ಎಂದು ಶಾಸಕರು ಹೇಳಿದರು.
ಹೆಚ್ಚುವರಿ ಭದ್ರತಾ ಠೇವಣಿ ಹೆಸರಿನಲ್ಲೂ ದುಬಾರಿ ಮೊತ್ತದ ಬಿಲ್ ನೀಡಲಾಗುತ್ತದೆ. 200 ಯೂನಿಟ್‌ಗಿಂತ ಕಡಿಮೆ ಬಳಸುವ ಗೃಹಜ್ಯೋತಿ ಫಲಾನುಭವಿಗಳು ಕೂಡ ಹೆಚ್ಚುವರಿ ಭದ್ರತಾ ಠೇವಣಿ ಇರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಕೆಂಪು ಕಲ್ಲು ಮತ್ತು ಮರಳು ಕೊರತೆಯಿಂದಾಗಿ ಜಿಲ್ಲೆಯಲ್ಲಿ ಸಮಸ್ಯೆ ಹೆಚ್ಚಾಗಿದ್ದು ಸರ್ಕಾರ ಇದಕ್ಕೆ ಸ್ಪಂದಿಸದೇ ಇರುವುದು ಬೇಸರದ ವಿಷಯ. ಕೆಲಸ ಇಲ್ಲದೆ ಸಂಕಟಪಡುತ್ತಿರುವ ಕಾರ್ಮಿಕರ ಪರಿಸ್ಥಿತಿ ನೋಡಿಯಾದರೂ ಜನರಿಗೆ ಅನುಕೂಲವಾಗುವ ರೀತಿಯ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ರಮೇಶ್ ಕಂಡೆಟ್ಟು, ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್, ಸಂಜಯ್ ಪ್ರಭು, ಮುರಳಿ ಹೊಸಮಜಲು, ಗಂಗಾಧರ್ ಸಾಲ್ಯಾನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.