
ಮಂಗಳೂರಿನ ಕ್ರೈಸ್ತ ಧರ್ಮಪ್ರಾಂತ್ಯದ ವಾರ್ಷಿಕ ಭವ್ಯ ಪರಮ ಪವಿತ್ರ ಪ್ರಸಾದದ ಮೆರವಣಿಗೆ ಮಿಲಾಗ್ರಿಸ್ ಚರ್ಚ್‌ನಿಂದ ರೊಸಾರಿಯೊ ಕೆಥೆಡ್ರಲ್‌ವರೆಗೆ ಭಾನುವಾರ ನೆರವೇರಿತು
ಮಂಗಳೂರು: ಯೇಸು ಕ್ರಿಸ್ತರ ದೈವ ದರ್ಶನ ಮಹೋತ್ಸವದ (ಎಪಿಫನಿ) ಪ್ರಯುಕ್ತ ಮಂಗಳೂರು ಧರ್ಮ ಪ್ರಾಂತ್ಯದ ವತಿಯಿಂದ ಇಲ್ಲಿನ ಮಿಲಾಗ್ರಿಸ್ ಚರ್ಚ್‌ನಿಂದ ರೊಸಾರಿಯೊ ಕೆಥೆಡ್ರಲ್‌ವರೆಗೆ ವಾರ್ಷಿಕ ಭವ್ಯ ಪರಮ ಪವಿತ್ರ ಪ್ರಸಾದದ ಮೆರವಣಿಗೆಯು ಭಾನುವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಭಕ್ತಾದಿಗಳ ಆಧ್ಯಾತ್ಮಿಕ ಉತ್ಸಾಹ ಮತ್ತು ಪ್ರಾರ್ಥನಾ ಒಗ್ಗಟ್ಟನ್ನು ಈ ಮೆರವಣಿಗೆ ಪ್ರತಿಬಿಂಬಿಸಿತು.
ಪವಿತ್ರ ಪ್ರಸಾದದ ಆಶೀರ್ವಾದದ ನಂತರ ಬಿಷಪ್ ಫಾ.ಪೀಟರ್ ಪಾವ್ಲ್ ಸಲ್ಡಾನ, ‘ನಮ್ಮ ಮಕ್ಕಳು ದೇವರ ರಾಜ್ಯದ ಫಲಗಳು’ ಎಂಬ ಧ್ಯೇಯವಾಕ್ಯದ ಲಾಂಛನವನ್ನು ಅನಾವರಣಗೊಳಿಸಿದರು. 2026 ಅನ್ನು ಅಧಿಕೃತವಾಗಿ 'ಮಕ್ಕಳ ವರ್ಷ' ಎಂದು ಘೋಷಿಸಿದರು.
‘18 ವರ್ಷದೊಳಗಿನ ಮಕ್ಕಳ ಕ್ಷೇಮಕ್ಕೆ ಆದ್ಯತೆ ನೀಡಬೇಕು. ಅವರಿಗೆ ಕೇವಲ ಶಿಕ್ಷಣವಷ್ಟೇ ಅಲ್ಲದೆ, ಮಾನವೀಯ ಮೌಲ್ಯಗಳು, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಬಗ್ಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ. ಮಕ್ಕಳ ಬೆಳವಣಿಗೆಗೆ ಧರ್ಮಗುರುಗಳು ವಿಶೇಷ ಆದ್ಯತೆ ನೀಡಬೇಕು ’ ಎಂದು ಹೇಳಿದರು.
ಜೋತಿಷಿಗಳ ಭೇಟಿಯ ಮೂಲಕ ಯೇಸು ಕ್ರಿಸ್ತರು ಜಗತ್ತಿಗೆ ದೈವ ದರ್ಶನ ನೀಡಿದ ಘಟನೆಯ ಸ್ಮರಣಾರ್ಥ ನಡೆಯುವ ಈ ಮೆರವಣಿಗೆಯು ಮಿಲಾಗ್ರಿಸ್ ಚರ್ಚ್‌ನಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಫಾ.ಪೀಟರ್ ಪಾವ್ಲ್ ಸಲ್ಡಾನ ಅಧ್ಯಕ್ಷತೆಯಲ್ಲಿ ನಡೆದ ಸಾಮೂಹಿಕ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ಅಲಂಕೃತ ವಾಹನದಲ್ಲಿ ಪವಿತ್ರ ಪ್ರಸಾದದ ಮೆರವಣಿಗೆಯು ಹಂಪನಕಟ್ಟೆ, ಗಡಿಯಾರ ಗೋಪುರ ವೃತ್ತ, ಎ.ಬಿ. ಶೆಟ್ಟಿ ವೃತ್ತ ಮತ್ತು ನೆಹರೂ ವೃತ್ತದ ಮೂಲಕ ಸಾಗಿ ರೊಸಾರಿಯೊ ಕೆಥೆಡ್ರಲ್ ತಲುಪಿತು.
ರೊಸಾರಿಯೊ ಕೆಥೆಡ್ರಲ್ ಆವರಣದಲ್ಲಿ ಸಮಾರಂಭದಲ್ಲಿ ಪೋಪ್ ಲಿಯೋ XIV ಅವರ ಬೋಧನೆಯ ಕುರಿತು ಸಂದೇಶ ನೀಡಿದ ಫಾ. ಅಬ್ರಹಾಂ ಡಿಸೋಜ, 'ದೇವರ ಪ್ರೀತಿಯು ಪ್ರಾರ್ಥನೆಗೆ ಸೀಮಿತವಾಗಿರಬಾರದು. ಅದು ಬಡವರ, ನಿರ್ಗತಿಕರ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆಯಲ್ಲಿ ವ್ಯಕ್ತವಾಗಬೇಕು. ದೇವರನ್ನು ಪ್ರೀತಿಸುವುದೆಂದರೆ ಬಡವರಲ್ಲಿ ಯೇಸುಕ್ರಿಸ್ತರನ್ನು ಕಾಣುವುದು. ನಮ್ಮ ಕಾರ್ಯಗಳ ಮೂಲಕ ಅವರಿಗೆ ಸೇವೆ ಸಲ್ಲಿಸುವುದು’ ಎಂದರು.
ರೊಸಾರಿಯೊ ಕೆಥೆಡ್ರಲ್‌ನಲ್ಲಿ ನಡೆದ ಆರಾಧನೆ ಮತ್ತು ಪ್ರಾರ್ಥನಾ ವಿಧಿಗಳನ್ನು ಬೈಬಲ್ ಆಯೋಗದ ಕಾರ್ಯದರ್ಶಿ ಫಾ.ವಿನ್ಸೆಂಟ್ ಸಿಕ್ವೇರಾ ನೆರವೇರಿಸಿದರು. ಮಂಗಳ ಜ್ಯೋತಿ ಲಿಟರ್ಜಿಕಲ್ ಸೆಂಟರ್‌ನ ನಿರ್ದೇಶಕ ಫಾ.ರೋಹಿತ್ ಡಿಕೋಸ್ಟಾ ಕಾರ್ಯಕ್ರಮ ಸಂಘಟಿಸಿದರು.