ADVERTISEMENT

ಜಾನುವಾರು ಗಣತಿ ಮುಗಿದು 7 ತಿಂಗಳು ಕಳೆದರೂ ಗಣತಿದಾರರಿಗೆ ಇನ್ನೂ ತಲುಪಿಲ್ಲ ಗೌರವಧನ

ಪ್ರವೀಣ್‌ ಕುಮಾರ್‌ ಪಿ.ವಿ
Published 22 ಅಕ್ಟೋಬರ್ 2025, 5:14 IST
Last Updated 22 ಅಕ್ಟೋಬರ್ 2025, 5:14 IST
ಜಾನುವಾರು ಗಣತಿ
ಜಾನುವಾರು ಗಣತಿ   

ಮಂಗಳೂರು: ರಾಜ್ಯದಲ್ಲಿ 21ನೇ ಜಾನುವಾರು ಗಣತಿ ಕಾರ್ಯ ಮುಗಿದು ಏಳು ತಿಂಗಳಾದರೂ ಗಣತಿದಾರರಿಗೆ ಗೌರವಧನ ಪಾವತಿ ಆಗಿಲ್ಲ. ಸರ್ಕಾರಿ ನೌಕರರಲ್ಲದ ಪಶುಸಖಿಯರನ್ನು ಗಣತಿ ಕಾರ್ಯಕ್ಕೆ ಬಳಸಿಕೊಳ್ಳಲಾಗಿತ್ತು. ಸ್ವಂತ ಹಣ ಖರ್ಚು ಮಾಡಿ ಸಮೀಕ್ಷೆ ನಡೆಸಿರುವ ಪಶು ಸಖಿಯರು, ಗೌರವಧನಕ್ಕಾಗಿ ಕಾಯುತ್ತಿದ್ದಾರೆ.

ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ನೇತೃತ್ವದಲ್ಲಿ ನಡೆದ ಜಾನುವಾರು ಗಣತಿ ಕಾರ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು  2024ರ ಅ.30ರಂದು ಚಾಲನೆ ನೀಡಿದ್ದರು.  2025ರ ಮಾರ್ಚ್‌ನಲ್ಲಿ ಪೂರ್ಣಗೊಂಡಿತ್ತು. ಪ್ರತಿ ಮನೆಯನ್ನು ಸಂದರ್ಶಿಸಿದ್ದಕ್ಕೆ ಗ್ರಾಮೀಣ ಗಣತಿದಾರರಿಗೆ ₹ 9 ಹಾಗೂ ನಗರ ಪ್ರದೇಶದಲ್ಲಿ ₹ 8 ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಇಲಾಖೆ ತಿಳಿಸಿತ್ತು.

ಗಣತಿದಾರರು ಪ್ರತಿ ಮನೆಗೆ ತೆರಳಿ ಅಲ್ಲಿ ಜಾನುವಾರುಗಳಿವೆಯೇ ಎಂಬುದನ್ನು ಪರಿಶೀಲಿಸಬೇಕಿತ್ತು. ಯಾವುದಾದರೂ ಕುಟುಂಬವು ಜಾನುವಾರುಗಳನ್ನು ಸಾಕುತ್ತಿದ್ದರೆ, ಅವುಗಳ ಸಂಖ್ಯೆ, ಅವುಗಳ ತಳಿ, ವರ್ಷ, ಮನೆಯವರ ಭೂಹಿಡುವಳಿ ವಿವರ, ಜಾನುವಾರು ಸಾಕುವವರ ಜಾತಿ, ವರ್ಗದ ಬಗ್ಗೆಯೂ ಮಾಹಿತಿ ಕಲೆ ಹಾಕಿ ಅದನ್ನು ‘21 ಲೈವ್‌ ಸ್ಟಾಕ್‌ ಸೆನ್ಸಸ್’ ಎಂಬ  ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕಿತ್ತು. ಗ್ರಾಮೀಣ ಪ್ರದೇಶದಲ್ಲಿ ಸರಾಸರಿ 4500 ಕುಟುಂಬಗಳ ಮಾಹಿತಿ ಕಲೆಹಾಕಬೇಕಾಗಿತ್ತು.  

ADVERTISEMENT

‘ಗ್ರಾಮೀಣ ಪ್ರದೇಶದಲ್ಲಿ ಮನೆಗಳು ದೂರ. ಜಾನುವಾರು ಇಲ್ಲದ ಮನೆಗಳಿಗೂ ನಾವು ಭೇಟಿ ನೀಡಬೇಕಿತ್ತು. ಕೆಲವೆಡೆ ರಿಕ್ಷಾ ಮಾಡಿಕೊಂಡು ಹೋಗಿ ಗಣತಿ ಮಾಡಿದ್ದೇವೆ. ಸ್ವಂತ ದ್ವಿಚಕ್ರ ವಾಹನ ಇದ್ದವರು ಸ್ವಂತ ಹಣದಲ್ಲಿ ಪೆಟ್ರೋಲ್ ಹಾಕಿಕೊಂಡು ಹೋಗಿ ಗಣತಿ ಮಾಡಿದ್ದೇವೆ. ಈಗ ನಮಗೆ ಗೌರವ ಧನ ನೀಡಲು ಮೀನ ಮೇಷ ಎಣಿಸಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಶು ಸಖಿಯೊಬ್ಬರು ಅಳಲು ತೋಡಿಕೊಂಡರು.

‘ನಾನು ಸುಮಾರು 2,300 ಕುಟುಂಬಗಳನ್ನು ಸಂದರ್ಶಿಸಿದ್ದೆ. ನನಗೆ ಸುಮಾರು ₹ 20 ಸಾವಿರ ಹಣ ಬರಬೇಕಿದೆ. ಗೌರವ ಧನ ಸಿಕ್ಕಿದ್ದರೆ ನಮ್ಮ ಕಷ್ಟ ಕಾಲಕ್ಕೆ ನೆರವಾಗುತ್ತಿತ್ತು’ ಎಂದು ಇನ್ನೊಬ್ಬ ಪಶು ಸಖಿ ತಿಳಿಸಿದರು.

ಗಣತಿ ಕಾರ್ಯಕ್ಕಾಗಿ ರಾಜ್ಯದಲ್ಲಿ 4,868 ಗಣತಿದಾರರನ್ನು ಹಾಗೂ 725 ಮೇಲ್ವಿಚಾರಕ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು.

2019ರ ಗಣತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 4.54 ಲಕ್ಷ ಮನೆಗಳಿದ್ದು, ಜಾನುವಾರು ಸಾಕುವ 68 ಸಾವಿರ ಕುಟುಂಬಗಳಿದ್ದವು.  ಜಾನುವಾರು ಗಣತಿಗೆ ಜಿಲ್ಲೆಯಲ್ಲಿ ಒಟ್ಟು 215 ಗಣತಿದಾರರನ್ನು ಬಳಸಿಕೊಳ್ಳಲಾಗಿತ್ತು. ಅವರಲ್ಲಿ 100ಕ್ಕೂ ಹೆಚ್ಚು  ಪಶು ಸಖಿಯರು ಹಾಗೂ ಇಲಾಖೆಯ ಡಿ ಗುಂಪಿನ ಸಿಬ್ಬಂದಿ ಸೇರಿದ್ದಾರೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.