ADVERTISEMENT

ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ

ಪೊಲೀಸರನ್ನು ನಿಂದಿಸಿದ ಗೃಹ ಸಚಿವರ ಮಾತಿಗೆ ರಮಾನಾಥ ರೈ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 16:20 IST
Last Updated 6 ಡಿಸೆಂಬರ್ 2021, 16:20 IST
ಬಿ. ರಮಾನಾಥ ರೈ
ಬಿ. ರಮಾನಾಥ ರೈ   

ಮಂಗಳೂರು: ರಾಜ್ಯದ ಪೊಲೀಸರನ್ನು ನಿಂದಿಸಿ ಗೃಹ ಸಚಿವರು ಆಡಿದ ಮಾತುಗಳು ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಸಚಿವರು ತಮ್ಮ ಇಲಾಖೆಯ ಬಗ್ಗೆ ಆಡಿರುವ ಮಾತುಗಳು, ಅವರ ವೈಫಲ್ಯವನ್ನು ಸೂಚಿಸುತ್ತದೆ ಎಂದರು.

ಅವರು ಇಲಾಖೆಯ ಮತ್ತು ಪೊಲೀಸರ ಬಗ್ಗೆ ಆಡಿರುವ ಕೀಳುಮಟ್ಟದ ಮಾತುಗಳು ಆಡಳಿತ ವ್ಯವಸ್ಥೆ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ. ಇದು ಸಚಿವರಿಗೆ ಶೋಭೆ ತರುವುದಿಲ್ಲ ಎಂದ ಅವರು, ಇದರಿಂದ ಕೆಲ ಪ್ರಾಮಾಣಿಕ ಅಧಿಕಾರಿಗಳನ್ನು ಅವಮಾನಿಸಿದಂತಾಗಿದೆ. ಇಂತಹ ಮಾತುಗಳನ್ನು ಆಡಿದವರು ಸಚಿವ ಸ್ಥಾನದಲ್ಲಿ ಮುಂದುರಿಯುವ ಅರ್ಹತೆ ಹೊಂದಿಲ್ಲ ಎಂದರು.

ADVERTISEMENT

ಪಂಚಾಯತ್ ರಾಜ್‌ ವ್ಯವಸ್ಥೆಯನ್ನು ಬಿಜೆಪಿ ದುರ್ಬಲ ಮಾಡುತ್ತ ಬಂದಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕುಸಿದಿದೆ. ಯುಪಿಎ ಸರ್ಕಾರ ಆರಂಭಿಸಿರುವ ಉದ್ಯೋಗ ಖಾತರಿ ಯೋಜನೆ ಹೊರತಾಗಿ ಎಲ್ಲಾ ಅಭಿವೃದ್ಧಿ ಯೋಜನೆಗಳು ಸ್ಥಗಿತಗೊಂಡಿವೆ. ಬಡವರಿಗೆ ಮನೆ ನಿರ್ಮಿಸಿ ಕೊಟ್ಟಿಲ್ಲ ಎಂದು ದೂರಿದರು.

ಬಿಜೆಪಿ ಅಪಪ್ರಚಾರದಲ್ಲಿ ಮುಂದೆ: ಮತೀಯ ಕಾರಣದಿಂದ ನಡೆದ ಹತ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಯಾವುದೇ ಪಾತ್ರ ಇಲ್ಲದಿದ್ದರೂ, ಪಕ್ಷದ ವಿರುದ್ಧ ಬಿಜೆಪಿ ಅಪಪ್ರಚಾರ ನಡೆಸಿದೆ ಎಂದು ರಮಾನಾಥ ರೈ ಟೀಕಿಸಿದರು.

ಕೊಲ್ಲೂರು ದೇವಸ್ಥಾನದಿಂದ ಕಾನೂನು ಬಾಹಿರವಾಗಿ ₹3.50 ಕೋಟಿ ಕಲ್ಲಡ್ಕದ ಶಿಕ್ಷಣ ಸಂಸ್ಥೆಗೆ ವರ್ಗಾವಣೆ ಮಾಡಿರುವುದನ್ನು ನಾನು ವಿರೋಧಿಸಿದಾಗ, ಕಾಂಗ್ರೆಸ್ ಮಕ್ಕಳಿಗೆ ಊಟ ಕೊಡುವುದಕ್ಕೆ ವಿರೋಧ ಮಾಡಿದೆ ಎಂದು ಬಿಜೆಪಿ ಪಕ್ಷದವರು ಅಪಪ್ರಚಾರ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಬಡ ಮಕ್ಕಳಿಗೆ ದೇವಸ್ಥಾನದ ಮೂಲಕ ಅನ್ನ ವಿತರಣೆ ಮಾಡುವ ಕೆಲಸಕ್ಕೆ ಪ್ರೋತ್ಸಾಹ ನೀಡುತ್ತ ಬಂದಿದೆಯೇ ಹೊರತು ವಿರೋಧಿಸಿಲ್ಲ ಎಂದು ತಿಳಿಸಿದರು.

‘ನಾನು ಆಗ ಎಸ್‌ಪಿಗೆ ಬೈದಿದ್ದೇನೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡಿದರು. ನಾನು ಎಸ್‌ಪಿ ಬೈದಿದ್ದೇನೆ ಎಂದು ಯಾರಾದರೂ ಸಾಬೀತು ಮಾಡಿದರೆ ಆ ಕ್ಷಣದಿಂದಲೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ’ ಎಂದರು.

ಶೇ 40 ಕಮಿಷನ್‌ ಸರ್ಕಾರ: ಗುತ್ತಿಗೆದಾರರ ಸಂಘದವರು ರಾಜ್ಯದಲ್ಲಿ ಶೇ 40 ರಷ್ಟು ಕಮಿಷನ್‌ ನೀಡಬೇಕಾಗಿದೆ ಎಂದು ದೂರು ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿಲ್ಲ ಎಂದು ರಮಾನಾಥ ರೈ ಟೀಕಿಸಿದರು.

ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಶೇ 10 ಕಮಿಷನ್‌ ಸರ್ಕಾರ ಎಂದು ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ, ಶೇ 40 ರಷ್ಟು ಕಮಿಷನ್‌ ಪಡೆಯುತ್ತಿರುವ ಬಿಜೆಪಿ ಸರ್ಕಾರದ ಮೇಲೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಪದಾಧಿಕಾರಿಗಳಾದ ಶಾಹುಲ್ ಹಮೀದ್, ಕೋಡಿಜಾಲ್ ಇಬ್ರಾಹಿಂ, ಶಾಲೆಟ್ ಪಿಂಟೋ, ಲುಕ್ಮಾನ್ ಬಂಟ್ವಾಳ, ಪದ್ಮನಾಭ ನರಿಂಗಾನ, ಹರಿನಾಥ್, ಸುರೇಂದ್ರ ಕಾಂಬ್ಳಿ, ವಿಶ್ವಾಸ್ ದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.