ADVERTISEMENT

ಮಂಗಳೂರಿನಲ್ಲಿ ರಸಗೊಬ್ಬರ ಕಾರ್ಖಾನೆಗೆ ಸಿದ್ಧತೆ: ಮುರುಗೇಶ್‌ ನಿರಾಣಿ

₹7,500 ಕೋಟಿ ಹೂಡಿಕೆ: ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ

​ಪ್ರಜಾವಾಣಿ ವಾರ್ತೆ
Published 12 ಮೇ 2022, 15:57 IST
Last Updated 12 ಮೇ 2022, 15:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಕರಾವಳಿಯ ಮಂಗಳೂರಿನಲ್ಲಿ ₹7,500 ಕೋಟಿ ಹೂಡಿಕೆಯಲ್ಲಿ ರಸಗೊಬ್ಬರ ಕಾರ್ಖಾನೆ ಆರಂಭಿಸುವ ಸಿದ್ಧತೆ ನಡೆಯುತ್ತಿದ್ದು, ಇದರಿಂದ 10 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಹೇಳಿದರು.

ನಗರದ ಹೋಟೆಲ್‌ ಓಷಿಯನ್‌ ಪರ್ಲ್‌ನಲ್ಲಿ ಗುರುವಾರ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಮಂಡಳಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಕರ್ನಾಟಕ ಮೆರಿಟೈಮ್‌ ಬೋರ್ಡ್‌ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ಕರ್ನಾಟಕ ಕೋಸ್ಟ್‌ಲೈನ್‌ ಬಿಸಿನೆಸ್‌ ಮತ್ತು ಮೆರಿಟೈಮ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ನವೆಂಬರ್‌ನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೂ ಮೊದಲೇ ಈ ಕಾರ್ಖಾನೆಯ ಕಾರ್ಯಾರಂಭಕ್ಕೆ ಸಿದ್ಧತೆ ನಡೆಯುತ್ತಿವೆ ಎಂದರು.

ADVERTISEMENT

ರಾಜ್ಯದ ಕೈಗಾರಿಕೆಗಳ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳು ಕಿರುಕುಳ ನೀಡುತ್ತಿರುವ ಕುರಿತು ದೂರುಗಳು ಬಂದಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪಾವತಿ ವ್ಯವಸ್ಥೆಯನ್ನು ಸರಳ ಮಾಡಲಾಗುವುದು ಎಂದು ತಿಳಿಸಿದರು.

ಕೈಗಾರಿಕೆಗಳ ತೆರಿಗೆ ಮೊತ್ತವನ್ನು ₹1 ಕೋಟಿ, ₹1ಕೋಟಿಯಿಂದ 10 ಕೋಟಿ, ₹10ಕೋಟಿಯಿಂದ ₹100 ಕೋಟಿ ಮತ್ತು ₹100 ಕೋಟಿ ಮೇಲಿನ ಹೀಗೆ ವಿವಿಧ ದರಗಳಲ್ಲಿ ಪಾವತಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಅಧಿಸೂಚನೆ ಮಾಡಿಸಿ, ನೇರವಾಗಿ ಆರ್‌ಟಿಜಿಎಸ್‌ ಮೂಲಕ ವ್ಯವಸ್ಥೆ ಮಾಡಲಾಗುವುದು. ಈ ವ್ಯವಸ್ಥೆಯಿಂದ ಯಾರೂ ಕೈಗಾರಿಕಾ ಆವರಣಕ್ಕೆ ಬಂದು ತೊಂದರೆ ನೀಡಲು ಅವಕಾಶ ಇರುವುದಿಲ್ಲ. ಜೊತೆಗೆ ಡೀಮ್ಡ್‌ ಎನ್‌ಒಸಿ ಬೇಡಿಕೆಯನ್ನೂ ಈಡೇರಿಸಲಾಗುವುದು ಎಂದು ಹೇಳಿದರು.

ಸಂಸದ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿ, ರಾಜ್ಯ ಹಾಗೂ ಕರಾವಳಿಯ ಕೈಗಾರಿಕಾ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿವೆ. ಮೂಲಸೌಕರ್ಯ ಅಭಿವೃದ್ಧಿಗೆ ಸಾವಿರಾರು ಕೋಟಿ ಹೂಡಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೈಗಾರಿಕಾ ಕ್ರಾಂತಿಯಾಗಲಿದೆ ಎಂದರು.

ನವಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ. ಎ.ವಿ. ರಮಣ್‌ ಮಾತನಾಡಿ, ಅಂತರರಾಷ್ಟ್ರೀಯ ವಿಹಾರ ನೌಕೆಗಳು ಲಂಗರು ಹಾಕುವ ನಿಟ್ಟಿನಲ್ಲಿ ಕರಾವಳಿಯಲ್ಲಿ ಬಂದರು ನಿರ್ಮಾಣದ ಅವಶ್ಯಕತೆಯಿದ್ದು, ಇದು ಪ್ರವಾಸೋದ್ಯಮ ಮಾತ್ರವಲ್ಲದೆ ಆರ್ಥಿಕ ಬೆಳವಣಿಗೆಗೂ ಸಹಕಾರಿ ಆಗಲಿದೆ ಎಂದರು.

ಕರ್ನಾಟಕ ಮರಿಟೈಮ್‌ ಬೋರ್ಡ್‌ ಸಿಇಒ ಕಪಿಲ್‌ ಮೋಹನ್‌ ಮಾತನಾಡಿ, ಕರಾವಳಿಯಲ್ಲಿ ಕೊಚ್ಚಿಯ ಇಂಡಿಯನ್‌ ಮರಿಟೈಮ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತರಬೇತಿ ಸಂಸ್ಥೆ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.

ರಾಜ್ಯ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಗೌರವ್‌ ಗುಪ್ತ, ಎಂಆರ್‌ಪಿಎಲ್‌ ವ್ಯವಸ್ಥಾಪಕ ನಿರ್ದೇಶಕ ಎಂ.ವೆಂಕಟೇಶ್‌, ಕೆಸಿಸಿಐ ಅಧ್ಯಕ್ಷ ಶಶಿಧರ ಪೈ ಮಾರೂರು ಭಾಗವಹಿಸಿದ್ದರು. ಸುಜಾತಾ ಕಾಮತ್‌, ಉಷಾ ಶೆಣೈ, ಪ್ರಮೋದ್‌ ಹೆಗ್ಡೆ, ಕೃಷ್ಣಾನಂದ ಕಾಮತ್‌, ಮುಕುಂದ್‌ ಕಾಮತ್‌ ಸೇರಿದಂತೆ ಹಲವರಿಗೆ ಸಾಧಕ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.