ADVERTISEMENT

ಮಂಗಳೂರು | ಕಡಲ ನಗರಿಯಲ್ಲಿ ಫಿನ್ ಸ್ವಿಮ್ಮಿಂಗ್‌ ಅಲೆ

ಕಾಲಿಗೆ ‘ರೆಕ್ಕೆ’ ಕಟ್ಟಿ ಈಜುವ ಕ್ರೀಡೆಗೆ ಜಗತ್ತಿನಾದ್ಯಂತ ಮಾನ್ಯತೆ; ಕರ್ನಾಟಕದಲ್ಲೂ ಮುನ್ನೆಲೆಗೆ; ಅಭ್ಯಾಸಕ್ಕೆ ಆಸಕ್ತಿ

ವಿಕ್ರಂ ಕಾಂತಿಕೆರೆ
Published 5 ಸೆಪ್ಟೆಂಬರ್ 2025, 5:18 IST
Last Updated 5 ಸೆಪ್ಟೆಂಬರ್ 2025, 5:18 IST
ಕಾಲಿಗೆ ಫಿನ್‌ ಜೋಡಿಸಿಕೊಂಡು ಈಜುತ್ತಿರುವುದು
ಕಾಲಿಗೆ ಫಿನ್‌ ಜೋಡಿಸಿಕೊಂಡು ಈಜುತ್ತಿರುವುದು   

ಮಂಗಳೂರು: ಈಚೆಗೆ ಪ್ರವರ್ಧಮಾನಕ್ಕೆ ಬಂದಿರುವ ಫಿನ್‌ ಸ್ವಿಮ್ಮಿಂಗ್‌ ಕಡಲ ನಗರಿ ಮಂಗಳೂರಿಗೂ ಕಾಲಿಟ್ಟಿದ್ದು ಈ ತಿಂಗಳ 7ರಂದು ಮಂಗಳ ಕ್ರೀಡಾಂಗಣದ ಈಜುಕೊಳದಲ್ಲಿ ನಡೆಯಲಿರುವ ರಾಜ್ಯಮಟ್ಟದ ಬೈಫಿನ್‌ ಸ್ಪರ್ಧೆಯ ಮೂಲಕ ಈ ಕ್ರೀಡೆಗೆ ಕಡಲ ನಗರಿಯಲ್ಲಿ ಅಧಿಕೃತ ಮುದ್ರೆ ಬೀಳಲಿದೆ. 

‌ಮೀನಿನ ರೆಕ್ಕೆಯಂಥ ವಸ್ತು (ಫಿನ್) ಪಾದಗಳಿಗೆ ಕಟ್ಟಿ ಈಜುವುದೇ ಫಿನ್ ಸ್ವಿಮ್ಮಿಂಗ್‌. ಇದರಲ್ಲಿ ಬೈ ಫಿನ್ ಮತ್ತು ಮೋನೊ ಫಿನ್ ಎಂಬ ಎರಡು ವಿಭಾಗಗಳಿವೆ. ಮೋನೊ ಫಿನ್‌ನಲ್ಲಿ ಎರಡೂ ಕಾಲುಗಳನ್ನು ಒಂದೇ ಫಿನ್‌ ಒಳಗೆ ಸೇರಿಸಿ ಈಜುತ್ತಾರೆ. ಬೈಫಿನ್‌ನಲ್ಲಿ ಎರಡು ಕಾಲುಗಳಿಗೆ ಎರಡು ಫಿನ್‌ಗಳನ್ನು ಕಟ್ಟಲಾಗುತ್ತದೆ. ಅಂಡರ್ ವಾಟರ್ (ನೀರಿನೊಳಗೆ) ಮತ್ತು ಸರ್ಫೇಸ್ ವಾಟರ್ (ನೀರಿನ ಮೇಲ್ಭಾಗದಲ್ಲಿ) ಈಜು ಇದರ ಎರಡು ಪ್ರಮುಖ ವಿಭಾಗಗಳು.

ಅಂಡರ್ ವಾಟರ್ ಸ್ಪೋರ್ಟ್ಸ್ ಫೆಡರೇಷನ್ ಆಫ್ ಇಂಡಿಯಾ (ಯುಎಸ್‌ಎಫ್‌ಐ) ಭಾರತದಲ್ಲಿ ಫಿನ್‌ ಈಜಿಗೆ ಸಂಬಂಧಿಸಿದ ಅಧಿಕೃತ ಸಂಘಟನೆಯಾಗಿದ್ದು 2021ರಿಂದ ರಾಷ್ಟ್ರೀಯ ಟೂರ್ನಿ ಆಯೋಜಿಸುತ್ತಿದೆ. ಕರ್ನಾಟದಲ್ಲಿ ಇದರ ಅಂಗ ಸಂಸ್ಥೆ ಕರ್ನಾಟಕ ಅಂಡರ್ ವಾಟರ್ ಸ್ಪೋರ್ಟ್ಸ್ ಆ್ಯಂಡ್ ಫಿನ್ ಸ್ವಿಮ್ಮಿಂಗ್ ಅಸೋಸಿಯೇಷನ್ ಇದೆ. ಮಂಗಳೂರಿನಲ್ಲಿ ಫಿನ್‌ ಸ್ವಿಮ್‌ನಲ್ಲಿ ತೊಡಗಿಸಿಕೊಂಡಿರುವ ಅನೇಕ ಮಂದಿ ಇದ್ದಾರೆ. ಕಳೆದ ಬಾರಿ ರಾಷ್ಟ್ರೀಯ ಟೂರ್ನಿಯಲ್ಲಿ ವಾಫಿ ಅಬ್ದುಲ್‌ ಹಕೀಂ 2 ಚಿನ್ನ ಸೇರಿದಂತೆ ಒಟ್ಟು 4 ಪದಕಗಳನ್ನು ಗೆದ್ದುಕೊಂಡಿದ್ದರು.

ADVERTISEMENT

‘ಫಿನ್ ಸ್ವಿಮ್‌ ಅಭ್ಯಾಸ ಮಾಡುವುದರಿಂದ ಕಾಲಿನ ಮಾಂಸಪೇಶಿಗಳು ಬಲ ಪಡೆದುಕೊಳ್ಳುತ್ತವೆ. ಈಜುಗಾರನ ಸಾಮರ್ಥ್ಯ ಹೆಚ್ಚುತ್ತದೆ. ಆದ್ದರಿಂದ ಬಹುತೇಕ ಎಲ್ಲ ಈಜುಪಟುಗಳು ಈಚೆಗೆ ಇದನ್ನು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ರಾಷ್ಟ್ರೀಯ ಟೂರ್ನಿಯಲ್ಲಿ ಪಾಲ್ಗೊಳ್ಳಲು ಹೆಚ್ಚಿನವರಿಗೆ ಸಾಧ್ಯವಾಗುತ್ತಿಲ್ಲ. ಆ ಹಾದಿಯನ್ನು ಸುಲಭ ಮಾಡುವುದು ರಾಜ್ಯ ಟೂರ್ನಿಯ ಉದ್ದೇಶ’ ಎಂದು ಜೈ ಹಿಂದ್ ಕ್ಲಬ್‌ನ ಕಾರ್ಯದರ್ಶಿ ಮತ್ತು ಕೋಚ್ ರಾಮಕೃಷ್ಣ ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮಂಗಳೂರಿನಲ್ಲಿ 50, 100, 200 ಮತ್ತು 400 ಮೀಟರ್ಸ್ ಫ್ರೀಸ್ಟೈಲ್‌ ಹಾಗೂ 100 ಮೀ ಬಟರ್‌ಫ್ಲೈ ಸ್ಪರ್ಧೆಗಳು ನಡೆಯಲಿವೆ. ಬಾಲಕ ಮತ್ತು ಬಾಲಕಿಯರಿಗಾಗಿ ತಲಾ ನಾಲ್ಕು ವಿಭಾಗ, ಪುರುಷ ಮತ್ತು ಮಹಿಳೆಯರಿಗಾಗಿ ಮುಕ್ತ ವಿಭಾಗಗಳಲ್ಲಿ ಸ್ಪರ್ಧೆಗಳು ಇರುತ್ತವೆ. 

ಯಾವಾಗ ಆರಂಭ, ಹೇಗೆ?  

ಫಿನ್‌ ಈಜು ಜಗತ್ತಿನಾದ್ಯಂತ ಪ್ರಚಲಿತಗೊಂಡದ್ದು 1999ರ ವೇಳೆ. ಇದನ್ನು 2004 ಅಥೆನ್ಸ್‌ ಮತ್ತು 2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳಿಸಲು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಒ‍ಪ್ಪಿಕೊಂಡಿತ್ತು. ಆದರೆ ಅದು ಕಾರ್ಯಗತ ಆಗಲಿಲ್ಲ. ವಿಶ್ವವಿದ್ಯಾಲಯ ಕ್ರೀಡೆಗಳ ಅಂತರರಾಷ್ಟ್ರೀಯ ಒಕ್ಕೂಟ 2022ರಿಂದ ಜಾಗತಿಕ ವಿಶ್ವವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಇದನ್ನು ಸೇರ್ಪಡೆಗೊಳಿಸಿತು ಎಂದು ಯುಎಸ್‌ಎಫ್‌ಐ ಮೂಲಗಳು ತಿಳಿಸಿವೆ. 

ಭಾರತದಲ್ಲಿ 2002ರಿಂದ ಫಿನ್‌ ಈಜು ಮುನ್ನೆಲೆಯಲ್ಲಿದೆ. 2009ರಲ್ಲಿ ತಿರುವನಂತಪುರದಲ್ಲಿ ನಡೆದ ರಾಷ್ಟ್ರೀಯ ಈಜುಕೂಟದಲ್ಲಿ ಭಾರತ ಈಜು ಫೆಡರೇಷನ್ ಫಿನ್‌ ಈಜು ರಾಷ್ಟ್ರೀಯ ಟ್ರಯಲ್ಸ್ ಆಯೋಜಿಸಿತ್ತು. 2018ರಲ್ಲಿ ಚೀನಾದಲ್ಲಿ ನಡೆದ ಕೂಟವೊಂದಕ್ಕೆ ಭಾರತದ ತಂಡವೊಂದನ್ನು ಕಳುಹಿಸಲಾಗಿತ್ತು. 2019ರಲ್ಲಿ ಈಜಿಪ್ಟ್‌ನಲ್ಲಿ ನಡೆದ ಜೂನಿಯರ್ ಫಿನ್ ಈಜು ಚಾಂಪಿಯನ್‌ಷಿಪ್‌ ಮತ್ತು 2020ರಲ್ಲಿ ಜಪಾನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಭಾರತದ ಈಜುಪಟುಗಳು ಪಾಲ್ಗೊಂಡಿದ್ದರು. ಯುಎಸ್‌ಎಫ್‌ಐಯ ವ್ಯಾಪ್ತಿಯಲ್ಲಿ ಈಗ 34 ಫಿನ್ ಈಜು ಸಂಸ್ಥೆಗಳು ಇವೆ ಎಂದು ಮೂಲಗಳು ವಿವರಿಸಿವೆ. 

ಬೈ ಫಿನ್ ಮತ್ತು ಮೋನೊ ಫಿನ್ ಎಂಬ ಎರಡು ವಿಭಾಗಗಳು ಮಂಗಳೂರಿನಲ್ಲಿ ಬೈ ಫಿನ್ ಸ್ಪರ್ಧೆ ಮಾತ್ರ ಆಯೋಜನೆ ಈಜುಪಟುಗಳಿಗೆ ಫಿನ್ ಸ್ವಿಮ್‌ನಿಂದ ಪೂರಕ ವ್ಯಾಯಾಮ

ಫಿನ್‌ ಈಜು ಹೆಚ್ಚು ಪ್ರಚಾರ ಆಗಬೇಕು ಎಂಬುದೇ ಮಂಗಳೂರಿನಲ್ಲಿ ಟೂರ್ನಿ ಆಯೋಜಿಸುವುದರ ಉದ್ದೇಶ. ಅಭ್ಯಾಸದಲ್ಲಿ ಅಧಿಕ ಮಂದಿ ತೊಡಗಿಸಿಕೊಂಡು ಈ ಕ್ರೀಡೆ ಮುನ್ನೆಲೆಗೆ ಬರುವಂತಾಗಬೇಕು.
ರಾಮಕೃಷ್ಣ ರಾವ್ ಜೈ ಹಿಂದ್ ಈಜು ಕ್ಲಬ್‌ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.