ADVERTISEMENT

ಕಾರಿಗೆ ಹಾನಿ: ಗುಂಡಿನ ದಾಳಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 15:59 IST
Last Updated 31 ಅಕ್ಟೋಬರ್ 2020, 15:59 IST

ಮಂಗಳೂರು: ಕಾಸರಗೋಡಿನ ಬಂದ್ಯೋಡು ಬಳಿ ತಂಡವೊಂದು ಕಾರುಗಳನ್ನು ಹಾನಿಗೊಳಿಸಿದ್ದಲ್ಲದೇ, ಗುಂಡು ಹಾರಿಸಿ ಬೆದರಿಸಿದ ಘಟನೆ ಶುಕ್ರವಾರ ನಡೆದಿದೆ.

ಬಂದ್ಯೋಡು ಬೈದಲ ಎಂಬಲ್ಲಿ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರಿಗೆ ತಂಡವೊಂದು ಹಾನಿ ಮಾಡಿದೆ. ಬಳಿಕ ಗುಂಡು ಹಾರಿಸಲಾಗಿದೆ. ಶೇಕಾಲಿ ಎಂಬವರ ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರನ್ನು ಇನ್ನೊಂದು ಕಾರಿನಲ್ಲಿ ಬಂದ ತಂಡವು ಹಾನಿಗೊಳಿಸಿದೆ. ಶೇಕಾಲಿ ಅವರನ್ನು ವಿಚಾರಿಸಿಕೊಂಡು ಈ ತಂಡವು ಬಂದಿತ್ತು ಎನ್ನಲಾಗಿದೆ.

ಘಟನೆ ಬಗ್ಗೆ ಮಾಹಿತಿ ನೀಡಲು ಶೇಕಾಲಿ ಹಾಗೂ ಮನೆಯವರು ಇನ್ನೊಂದು ಕಾರಿನಲ್ಲಿ ಕುಂಬಳೆ ಪೊಲೀಸ್ ಠಾಣೆಗೆ ತೆರಳುತ್ತಿದ್ದಾಗ ಬೆನ್ನಟ್ಟಿ ಬಂದ ತಂಡವು, ಮತ್ತೆ ಕಾರಿನ ಮೇಲೆ ದಾಳಿ ಮಾಡಿದೆ. ದುಷ್ಕರ್ಮಿಗಳು ಬಂದಿದ್ದ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದು ಮಗುಚಿದೆ. ಈ ನಡುವೆ ಇನ್ನೊಂದು ವಾಹನದಲ್ಲಿ ಬಂದ ತಂಡವು, ಕಾರಿನ ಮೇಲೆ ಗುಂಡು ಹಾರಿಸಿದೆ. ಕೆಲವೇ ಕ್ಷಣದಲ್ಲಿ ದುಷ್ಕರ್ಮಿಗಳು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದಾರೆ.

ADVERTISEMENT

ಕುಂಬಳೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸ್ಥಳದಿಂದ ಒಂದು ತಲವಾರು, ಬಂದಿದ್ದ ಕಾರು ಪತ್ತೆಯಾಗಿದೆ. ಎರಡು ತಂಡಗಳ ನಡುವಿನ ಹಳೆ ದ್ವೇಷ ಕೃತ್ಯಕ್ಕೆ ಕಾರಣ ಎನ್ನಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಜುವೆಲ್ಲರಿ ಮಾಲೀಕರಿಗೆ ವಂಚನೆ

ಮಂಗಳೂರು: ಆದಾಯ ತೆರಿಗೆ ಅಧಿಕಾರಿ ಎಂದು ನಂಬಿಸಿ, ಉಪ್ಪಳ, ಕಾಸರಗೋಡು ಹಾಗೂ ಕಣ್ಣೂರಿನ ಜ್ಯುವೆಲ್ಲರಿಗಳ ಮಾಲೀಕರಿಗೆ ಯುವಕನೊಬ್ಬ ವಂಚಿಸಿದ್ದಾನೆ.

ಕಣ್ಣೂರಿಗೆ ಎರಡು ದಿನಗಳ ಹಿಂದೆ ಬಂದಿದ್ದ ಈತ, ಸುಮಾರು ₹2 ಲಕ್ಷ ಚಿನ್ನಾಭರಣ ವಂಚಿಸಿ ಪರಾರಿಯಾಗಿದ್ದಾನೆ. ಕಣ್ಣೂರು ಬ್ಯಾಂಕ್ ರಸ್ತೆಯ ಜ್ಯುವೆಲ್ಲರಿಗೆ ಬಂದಿದ್ದ ಯುವಕ ತನ್ನ ಹೆಸರು ಮಂಜುನಾಥ್ ಎಂದು ಹೇಳಿದ್ದು, ಆದಾಯ ತೆರಿಗೆ ಅಧಿಕಾರಿ ಎಂದು ಮಾಲೀಕರಿಗೆ ತಿಳಿಸಿದ್ದ.

ಈತ ಸರ ಹಾಗೂ ಉಂಗುರ ಸೇರಿದಂತೆ 42 ಗ್ರಾಂ ಚಿನ್ನಾಭರಣವನ್ನು ಖರೀದಿಸಿದ್ದು, ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದ. ಬಳಿಕ ಬ್ಯಾಂಕ್‌ ಅಕೌಂಟ್ ಪರಿಶೀಲಿಸಿದಾಗ ಹಣ ಬಂದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಇದರಿಂದ ವಂಚನೆಗೆ ಒಳಗಾಗಿರುವುದು ಗಮನಕ್ಕೆ ಬಂದಿದೆ. ಕಣ್ಣೂರು ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.