ADVERTISEMENT

ಬೆಳ್ತಂಗಡಿ: ಅಭಿವೃದ್ಧಿಯಲ್ಲಿ ಆಡಳಿತದ ಜತೆ ಕೈಜೋಡಿಸಿ

ಕೆರೆಗೆ 800 ಮೀನಿನ ಮರಿಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 16:04 IST
Last Updated 8 ಜುಲೈ 2020, 16:04 IST
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್, ಕೆರೆಗೆ ಮೀನಿನ ಮರಿಗಳನ್ನು ಬಿಟ್ಟರು.
ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್, ಕೆರೆಗೆ ಮೀನಿನ ಮರಿಗಳನ್ನು ಬಿಟ್ಟರು.   

ಬೆಳ್ತಂಗಡಿ: ಪ್ರಾಕೃತಿಕವಾಗಿ ಇರುವ ಸಂಪನ್ಮೂಲಗಳ ಬಳಕೆ ಮತ್ತು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜನರು ಆಡಳಿತದ ಜತೆ ಕೈಜೋಡಿಸಬೇಕು ಎಂದು ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಹೇಳಿದರು.

ಅಳದಂಗಡಿ ತೋಟಗಾರಿಕಾ ರೈತ ಉತ್ಪಾದನಾ ಕಂಪನಿ ವತಿಯಿಂದ ಬೆಳ್ತಂಗಡಿ ಕೋರ್ಟ್ ಬಳಿ ಇರುವ ಕೆರೆಗೆ 800 ಮೀನಿನ‌ ಮರಿಗಳನ್ನು ಬಿಟ್ಟ ಬಳಿಕ ಮಾತನಾಡಿದ ಅವರು, ‘ನಗರದ ಹತ್ತಿರದಲ್ಲೇ ಇಂತಹ ಕೆರೆ ಇರುವುದು ಸಂತೋಷದ ವಿಚಾರ. ಇಲ್ಲಿ ವಾಕಿಂಗ್ ಪಾತ್ ಹಾಗೂ ವಿಹಾರ ಕೇಂದ್ರವಾಗಿ ಮಾಡುವಲ್ಲಿ ಅವಕಾಶ ಇದೆ. ಆ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು’ ಎಂದರು.

ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಮಾತನಾಡಿ, ‘ಕೆರೆಗಳ ಶುದ್ಧೀಕರಣ ಮತ್ತು ಸಂರಕ್ಷಣೆಯಿಂದ ಅಂತರ್ಜಲ ಅಭಿವೃದ್ಧಿಯಾಗುತ್ತದೆ’ ಎಂದರು.

ADVERTISEMENT

ಕಾರ್ಯಕ್ರಮದಲ್ಲಿ ರೈತ ಉತ್ಪಾದನಾ ಕಂಪನಿಯ ನಿರ್ದೇಶಕಿ ಸುಕನ್ಯಾ, ಪ್ರಮುಖರಾದ ಶಿವಪ್ರಸಾದ್, ಶೇಖರ್ ಎಲ್., ಮಧುಸೂದನ ಕಳೆಂಜ, ಪದ್ಮಾವತಿ ಬೆಳ್ತಂಗಡಿ, ಶ್ವೇತಾ, ಲಕ್ಷ್ಮೀನಾರಾಯಣ, ಗಣೇಶ್ ಬೆಳ್ತಂಗಡಿ ಇದ್ದರು. ವಕೀಲ ಶಿವಕುಮಾರ್ ಸ್ವಾಗತಿಸಿದರು. ಹರಿದಾಸ್ ಎಸ್.ಎಂ. ವಂದಿಸಿದರು.

‘3 ವರ್ಷದವರೆಗೆ ಸಾಕಣೆ’

ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದಿಂದ ತರಿಸಿದ ಕಾಟ್ಲ ಮತ್ತು ಗ್ರಾಸ್‌ಕಾರ್ಪ್ ತಳಿಯ 800 ಮೀನಿನ ಮರಿಗಳನ್ನು ಇದೀಗ ಕೆರೆಗೆ ಬಿಡಲಾಗಿದೆ. ಕಳೆದ ವರ್ಷ ನಮ್ಮ ಕಂಪನಿಯಿಂದ ₹30 ಸಾವಿರ ಖರ್ಚು ಮಾಡಿ ಕೆರೆ ಹೂಳೆತ್ತುವ ಕಾರ್ಯ ನಡೆಸಿದ್ದೇವೆ ಎಂದು ಅಳದಂಗಡಿ ತೋಟಗಾರಿಕಾ ರೈತ ಉತ್ಪಾದನಾ ಕಂಪನಿಯ ಅಧ್ಯಕ್ಷ ಹರಿದಾಸ್ ಎಸ್.ಎಂ. ಹೇಳಿದರು.

ಇದೀಗ ಬಿಟ್ಟಿರುವ ಮೀನುಗಳನ್ನು ಮುಂದಿನ ಫೆಬ್ರುವರಿ ಅಂತ್ಯದೊಳಗೆ ಹಿಡಿದು ಮಾರಾಟ ಮಾಡಲಿದ್ದೇವೆ. ಈ ಮೀನನ್ನು 3 ವರ್ಷದವರೆಗೂ ಸಾಕಬಹುದಾಗಿದ್ದು, ಉತ್ತಮ ಆದಾಯ ಪಡೆಯಲು ಸಾಧ್ಯವಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.