ADVERTISEMENT

ದಕ್ಷಿಣ ಕನ್ನಡ | ಕೋಟೆಪುರದ ಫಿಶ್ ಮಿಲ್‌ ಗೋದಾಮಿನಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 14:11 IST
Last Updated 8 ಅಕ್ಟೋಬರ್ 2025, 14:11 IST
   

ಉಳ್ಳಾಲ (ದಕ್ಷಿಣ ಕನ್ನಡ): ಇಲ್ಲಿನ ಕೋಟೆಪುರದಲ್ಲಿರುವ ಮೀನಿನ ಆಹಾರ ತಯಾರಿ ಹಾಗೂ ಸಂಸ್ಕರಣಾ ಘಟಕದ ಗೋದಾಮು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಸಂಜೆ ವೇಳೆ ಗೋದಾಮಿನ ಒಳಗೆ ಕಾಣಿಸಿಕೊಂಡ ಬೆಂಕಿ ಒಮ್ಮಿಂದೊಮ್ಮೆಲೇ ಸುತ್ತಲೂ ವ್ಯಾಪಿಸಿತು. ಬೆಂಕಿಯ ಕೆನ್ನಾಲೆ ಗೋದಾಮಿನ ಆಚೆಗೂ ಚಾಚಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದರು. ತುಂಬಾ ಹೊತ್ತಿನ ನಂತರ ಮಂಗಳೂರಿನಿಂದ ಅಗ್ನಿಶಾಮಕ ದಳದ ವಾಹನ ಬಂದು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಯಿತು.

ಬೆಂಕಿ ಅವಘಢಕ್ಕೆ ಒಳಗಾದ ಎಂಎಪಿ ಫಿಶ್ ಫುಡ್ ಗೋದಾಮು ಖಾದರ್ ಎಂಬುವರಿಗೆ ಸೇರಿದ್ದು ಎಂದು ಮೂಲಗಳು ತಿಳಿಸಿವೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿದರು.

ADVERTISEMENT

ಈ ಪರಿಸರಲ್ಲಿ 14 ಫಿಶ್ ಮಿಲ್‌ಗಳಿದ್ದರೂ ಅಗ್ನಿಶಾಮಕ ದಳವಾಗಲೀ, ಆಂಬುಲೆನ್ಸ್ ಸೌಕರ್ಯವಾಗಲೀ ಇಲ್ಲಿಲ್ಲ. ಸುರಕ್ಷಾ ಕ್ರಮಗಳನ್ನು ಕೈಗೊಳ್ಳದೇ ಸಾರ್ವಜನಿಕರನ್ನು ಅಪಾಯದಲ್ಲಿರಿಸಿ ಘಟಕಗಳು ಕಾರ್ಯಾಚರಿಸುತ್ತಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

‘ಇಲ್ಲಿನ 14 ಫಿಶ್ ಫುಡ್ ಮತ್ತು ಆಯಿಲ್ ಮಿಲ್‌ಗಳು ಪ್ರತಿವರ್ಷ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತವೆ. ಅವುಗಳಲ್ಲಿ ಸುರಕ್ಷತಾ ಕ್ರಮಗಳನ್ನೇ ಅನುಸರಿಸುತ್ತಿಲ್ಲ. ದುರ್ಘಟನೆ ಸಂಭಂವಿಸಿದಾಗ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ವಾಹನ 15 ಕಿ.ಮೀ ದೂರದ ಮಂಗಳೂರಿನಿಂದ ಬರಬೇಕಾಗಿದೆ. ಸ್ವಲ್ಪ ಎಚ್ಚರಿಕೆ ತಪ್ಪಿದರೂ ಸ್ಥಳದಲ್ಲಿ ವಾಸಿಸುವ ಸಾವಿರಾರು ಮನೆಗೂ ಅಪಾಯ ಕಟ್ಟಿಟ್ಟ ಬುತ್ತಿ. ಹೈಟೆನ್ಷನ್ ವಿದ್ಯುತ್ ತಂತಿಯೂ ಇಲ್ಲಿ ನೆಲದಡಿ ಹಾದುಹೋಗಿದೆ. ಆದರೂ ಸುರಕ್ಷಾ ಕ್ರಮಗಳನ್ನು ವಹಿಸದಿರುವುದು ಈ ಫಿಶ್‌ಮಿಲ್‌ಗಳ ಮಾಲೀಕರ ಬೇಜವಾಬ್ದಾರಿಯನ್ನು ತೋರಿಸುತ್ತದೆ’ ಎಂದು ಸ್ಥಳೀಯರೊಬ್ಬರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.