ADVERTISEMENT

ಜುಲೈ 7 ರಂದು ಆಹಾರ ಅದಾಲತ್‌

ಪಡಿತರ ಚೀಟಿ ಸಂಬಂಧಿ ಸಮಸ್ಯೆ ಪರಿಹಾರ: ಖಾದರ್

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 5:54 IST
Last Updated 29 ಜೂನ್ 2021, 5:54 IST
ಯು.ಟಿ. ಖಾದರ್‌
ಯು.ಟಿ. ಖಾದರ್‌   

ಮಂಗಳೂರು: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಡಿತರ ಸಮಸ್ಯೆ, ಎಪಿಎಲ್, ಬಿಪಿಎಲ್ ಕಾರ್ಡ್ ಸಿಗದೆ ಇರುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜುಲೈ 7ರಂದು ಆಹಾರ ಅದಾಲತ್ ನಡೆಸಲಾಗುವುದು ಎಂದು ಶಾಸಕ ಯು.ಟಿ. ಖಾದರ್‌ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಸ್ಯೆ ಇರುವವರು ತಮ್ಮ ಗ್ರಾಮ ಪಂಚಾಯಿತಿಗಳಿಗೆ ತೆರಳಿ ಜುಲೈ 1 ರೊಳಗೆ ಅರ್ಜಿ ಸಲ್ಲಿಸಬೇಕು ಎಂದರು.

ಪಡಿತರ ಅರ್ಜಿ ಸಮಸ್ಯೆ ಪರಿಹರಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡಿ ಒಂದೂವರೆ ತಿಂಗಳಾದರೂ ಯಾವುದೇ ಪರಿಹಾರ ದೊರೆತಿಲ್ಲ. ಪಡಿತರ ಚೀಟಿ ವಿತರಣೆ ಆಗುತ್ತಿಲ್ಲ. ಪರಿಹಾರಕ್ಕೆ ಯಾವುದೇ ಕ್ರಮ ನಡೆಯುತ್ತಿಲ್ಲ ಎಂದರು.

ADVERTISEMENT

ಮೂರು ಸೆಂಟ್ಸ್ ಜಾಗ ಹೊಂದಿರುವ ವ್ಯಕ್ತಿ ಮನೆ ಕಟ್ಟಲು ಸಾಲಕ್ಕೆ ಬ್ಯಾಂಕಿಗೆ ಅರ್ಜಿ ಹಾಕಿದರೆ, ಆತನ ಬಿಪಿಎಲ್ ಸೌಲಭ್ಯ ಕಡಿತವಾಗುತ್ತದೆ. ಈ ರೀತಿ ಅಸಮರ್ಪಕ ಮಾನದಂಡದಿಂದ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗುತ್ತಿದೆ. ಜನ ಕೋವಿಡ್ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಹೊಸ ಬಿಪಿಎಲ್ ಕಾರ್ಡ್ ವಿತರಿಸುವ ಬಗ್ಗೆ ಸರ್ಕಾರಕ್ಕೆ ಆಸಕ್ತಿ ಇಲ್ಲ. ಅದಕ್ಕಾಗಿ ಆಹಾರ ಅದಾಲತ್ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿವೆ. ಇದೀಗ ಲಾಕ್‌ಡೌನ್ ಮುಕ್ತಾಯವಾಗುತ್ತಿರುವ ಸಂದರ್ಭದಲ್ಲಿ ಅವುಗಳ ಪುನಶ್ಚೇತನ ಕ್ಕೆ ಸರ್ಕಾರ, ಜಿಲ್ಲಾಡಳಿತ ತುರ್ತು ನೆರವು, ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.

ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬವಾಗಿ ನಡೆಯುತ್ತಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ವಾಹನ ಸಂಚಾರ ಕಷ್ಟವಾಗಿದೆ. ಬಸ್ ಸಂಚಾರ ಆರಂಭಗೊಂಡಾಗ ಇನ್ನಷ್ಟು ಹದಗೆಡುತ್ತದೆ. ಈ ಬಗ್ಗೆ ಪಾಲಿಕೆ ಆಯುಕ್ತರು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಮುಖಂಡರಾದ ಈಶ್ವರ ಉಳ್ಳಾಲ್, ಸಂತೋಷ್ ಶೆಟ್ಟಿ, ಮುರಳಿ ಮೋಹನ್ ಸಾಲ್ಯಾನ್ ತೊಕ್ಕೊಟ್ಟು, ಅಭಿಷೇಕ್ ಉಳ್ಳಾಲ್ ಇದ್ದರು.

‘ಬಿಜೆಪಿ ಈಗಲೇ ಸೋಲು ಒಪ್ಪಿಕೊಂಡಿದೆ’

ರಾಜ್ಯದಲ್ಲಿ ಬಿಜೆಪಿ ಈಗಾಗಲೇ ಸೋಲೊಪ್ಪಿಕೊಂಡಿದೆ. ಅದಕ್ಕಾಗಿಯೇ ಕಾಂಗ್ರೆಸ್ ಸಿಎಂ ಬಗ್ಗೆ ಮಾತನಾಡುತ್ತಿದ್ದಾರೆ. ಬಿಜೆಪಿಯವರ ಬೇಜವಾಬ್ದಾರಿ ನಡುವಳಿಕೆಯಿಂದ ರಾಜ್ಯದ ಜನತೆ ರೋಸಿ ಹೋಗಿದ್ದಾರೆ ಎಂದು ಯು.ಟಿ. ಖಾದರ್ ಹೇಳಿದರು.

ಕೇರಳ ಸರ್ಕಾರ ಕನ್ನಡದಲ್ಲಿರುವ ಹೆಸರು ಬದಲಾವಣೆ ಮಾಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಗಡಿ ಪ್ರದೇಶದಲ್ಲಿ ಕನ್ನಡಿಗರಿಗೆ ಅಥವಾ ಕನ್ನಡ ಭಾಷೆಯ ಬೆಳವಣಿಗೆಗೆ ಧಕ್ಕೆಯಾಗುವ ಯಾವ ಕೆಲಸ ನಡೆಯಬಾರದು ಎನ್ನುವುದು ಎಲ್ಲರ ಆಶಯ ಎಂದರು.

ಅಲ್ಲಿನ ಶಾಸಕರೊಬ್ಬರು ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲಿ ಪ್ರತಿಜ್ಞೆ ಸ್ವೀಕರಿಸಿ ಕನ್ನಡ ಅಭಿಮಾನ ತೋರಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.