ADVERTISEMENT

ಉಪ್ಪಿನಂಗಡಿ ನೇರೆಂಕಿಮಲೆ ರಕ್ಷಿತಾರಣ್ಯದಿಂದ ಮರಗಳ ಲೂಟಿ

ಮರಕಳ್ಳರಿಗೆ ವರದಾನವಾದ ಸಾಗುವಾನಿ ನೆಡುತೋಪು

ಸಿದ್ದಿಕ್ ನೀರಾಜೆ
Published 20 ಡಿಸೆಂಬರ್ 2018, 6:30 IST
Last Updated 20 ಡಿಸೆಂಬರ್ 2018, 6:30 IST
ಉಪ್ಪಿನಂಗಡಿ ಸಮೀಪ ನೇರೆಂಕಿಮಲೆ ರಕ್ಷಿತಾರಣ್ಯದಲ್ಲಿ ಮರ ಕಳ್ಳರು ಸಾಗುವಾನಿ ಮರ ಕಡಿದು ಸಾಗಣೆ ಮಾಡಿರುರುವುದು.
ಉಪ್ಪಿನಂಗಡಿ ಸಮೀಪ ನೇರೆಂಕಿಮಲೆ ರಕ್ಷಿತಾರಣ್ಯದಲ್ಲಿ ಮರ ಕಳ್ಳರು ಸಾಗುವಾನಿ ಮರ ಕಡಿದು ಸಾಗಣೆ ಮಾಡಿರುರುವುದು.   

ಉಪ್ಪಿನಂಗಡಿ:ಇಲ್ಲಿನ ವಲಯ ಅರಣ್ಯ ವ್ಯಾಪ್ತಿಯಲ್ಲಿ ಬರುವ ಬಜತ್ತೂರು ಗ್ರಾಮದ ನೇರೇಂಕಿಮಲೆ ರಕ್ಷಿತಾರಣ್ಯದ ಸಾಗುವಾನಿ ಮರಗಳ ನೆಡುತೋಪಿನಿಂದ ಭಾರೀ ಪ್ರಮಾಣದಲ್ಲಿ ಸಾಗುವಾನಿ ಮರ ಲೂಟಿ ಆಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ವ್ಯಕ್ತವಾಗಿದೆ.

ರಕ್ಷಿತಾರಣ್ಯ ಪ್ರದೇಶ ಹೊಂದಿರುವ ಬಜತ್ತೂರು ಗ್ರಾಮದ ಬೀದಿಮಜಲು ಪರಿಸರದಲ್ಲಿ ನೇತ್ರಾವತಿ ನದಿ ತಟದಲ್ಲಿ, ಕಾಡಿನ ಅಂಚಿನಲ್ಲಿ ಎಲ್ಲೆಡೆಯಲ್ಲಿ ಮರಗಳನ್ನು ಕಡಿದಿರುವ ಕುರುಹುಗಳು ಪತ್ತೆ ಆಗಿದ್ದು, ರಾತ್ರಿ ಬೆಳಗಾಗುವುದರ ಒಳಗಾಗಿ ಕಡಿದ ಮರಗಳು ಕಾಡಿನ ದಾರಿಯಲ್ಲೇ ಸಾಗಾಟ ಆಗುತ್ತಿರುವುದಾಗಿ ಗ್ರಾಮಸ್ಥರಿಂದ ದೂರುಗಳು ವ್ಯಕ್ತವಾಗಿದೆ.

ನೇರೇಂಕಿಮಲೆ ರಕ್ಷಿತಾರಣ್ಯದಲ್ಲಿ ಬೀದಿಮಜಲು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಸಾಗುವಾನಿ ಮರಗಳು ಇದ್ದು, ಇವುಗಳು ನದಿ ತಟದ ತನಕ ವಿಸ್ತಾರವಾಗಿ ಇದೆ ಎಂದು ಹೇಳಲಾಗಿದ್ದು, ಇವುಗಳು ಮರಗಳ್ಳರ ಪಾಲಿಗೆ ವರದಾನವಾಗಿದ್ದು, ಈ ಭಾಗದ ಕೆಲ ಮಂದಿ ಇಲ್ಲಿನ ಮರಗಳನ್ನು ಕಡಿದು ಸಾಗಾಟ ಮಾಡುವುದನ್ನೇ ಕಸುಬು ಆಗಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ADVERTISEMENT

ಒಣಗಿದ ಮರಗಳ ಗುರಿ:
ನದಿ ಬದಿಗೆ ಕಾಡಿನ ಅಂಚಿನಲ್ಲಿ ಇರುವ ಮರಗಳು ನೂರು ವರ್ಷಗಳಿಗೂ ಮೇಲ್ಪಟ್ಟವುಗಳು ಎಂದು ಹೇಳಲಾಗುತ್ತಿದ್ದು, ಇವುಗಳು ಹುಲುಸಾಗಿ ಹೆಮ್ಮರವಾಗಿ ಬೊಳೆತು ಬೆಳೆದು ನಿಂತಿದ್ದು, ಅದರ ಆಯುಷ್ಯ ಮುಗಿಯುತ್ತಾ ಬಂದಿದ್ದು, ಇಂತಹ ನೂರಾರು ಮರಗಳು ಇಲ್ಲಿ ಇದ್ದು, ಇವುಗಳು ಮರ ಕಳ್ಳರ ಪಾಲಿಗೆ ವರದಾನವೇ ಆಗಿರುತ್ತದೆ ಎಂದು ಹೇಳಲಾಗಿದೆ.

ಬೊಳೆತು ಅದರ ಆಯುಷ್ಯ ಪೂರ್ಣಗೊಂಡು ಬೀಳುವ ಹಂತದಲ್ಲಿ ಇರುವ ಮರಗಳನ್ನು ಹುಡುಕಿ ತೆಗೆಯುವ ಮರಕಳ್ಳರು ಇದರ ಬುಡದಿಂದ ಮೇಲ್ಬಾಗದ ತನಕ ಸಲೀಸಾಗಿ ತೆಗೆದು ಉಳಿಕೆ ತುಂಡುಗಳನ್ನು ಅಲ್ಲೇ ಬಿಟ್ಟು ಗಸ್ತು ತಿರುಗುವ ಇಲಾಖಾ ಸಿಬ್ಬಂದಿಗಳ ಕಣ್ಣಿಗೆ ಮರ ಸತ್ತು ಬಿದ್ದಿರುವ ರೀತಿಯಲ್ಲಿ ಅವುಗಳ ರೆಂಬೆ, ಕೊಂಬೆಗಳನ್ನು ಅಲ್ಲೇ ಬಿಟ್ಟು ಹೋಗುತ್ತಿರುತ್ತಾರೆ ಎಂದು ಹೇಳಲಾಗುತ್ತಿದೆ.

2 ವರ್ಷದಿಂದ ತುಸು ಕಡಿಮೆ ಆಗಿತ್ತು:
ಇಲ್ಲಿನ ರಕ್ಷಿತಾರಣ್ಯದಿಂದ ಮರಗಳನ್ನು ಕಡಿದು ಬಳಿಕ ಅವುಗಳನ್ನು ನದಿಗೆ ತಂದು ಹಾಕುವುದು, ನದಿ ನೀರಿನಲ್ಲಿ ಕೆಳಗೆ ಬರುವ ಮರವನ್ನು ತೆಪ್ಪದ ಮೂಲಕ ನದಿ ಮಧ್ಯೆ ತೆರಳಿ ಅದನ್ನು ಹಿಡಿದು ಬದಿಗೆ ಸರಿಸಿ, ವ್ಯಕ್ತಿಯೋರ್ವರ ತೋಟದ ಮೂಲಕ ಸಾಗಾಟ ಮಾಡುತ್ತಿರುವ ಬಗ್ಗೆ ಒಂದೂವರೆ ವರ್ಷದ ಹಿಂದೆ ಪತ್ರಿಕೆ ಸಮಗ್ರ ವರದಿ ಪ್ರಕಟಿಸಿತ್ತು. ತದ ನಂತರ ಮರಕಳ್ಳತನ ಕಡಿಮೆ ಆಗಿದ್ದು, ಇದೀಗ ಮತ್ತೆ ಆರಂಭ ಆಗಿದೆ ಎಂದು ಹೇಳಲಾಗುತ್ತಿದೆ.

ಮರಗಳನ್ನು ರಕ್ಷಿಸುವಂತೆ ಆಗ್ರಹ:
ಕಾಡಿನ ಅಂಚಿನಲ್ಲಿ, ನದಿ ದಡದ ಬಳಿಯಲ್ಲಿ ನೂರಾರು ಮರಗಳು ಅದರ ಆಯುಷ್ಯ ಮುಗಿಯುತ್ತಾ ಒಣಗಿದ ರೀತಿಯಲ್ಲಿ ಇದ್ದು, ಇವುಗಳು ಮರಕಳ್ಳರ ಪಾಲಾಗುವ ಸಾಧ್ಯತೆ ಇದೆ, ಅರಣ್ಯ ಇಲಾಖೆ ಅಧಿಕಾರಿಗಳು ಅಂತಹ ಮರಗಳನ್ನು ಕಡಿದು ತಮ್ಮ ವಶಕ್ಕೆ ತೆಗೆದುಕೊಂಡು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವ ಬಗ್ಗೆ ಆಗ್ರಹ ವ್ಯಕ್ತವಾಗಿದೆ.
**
ಪತ್ತೆಯಾಗಿದ್ದ ಮರ ನೆಡುತೋಪಿನಿಂದ ಕಳವು ಮಾಡಿದ್ದು
ಕಾಡಿನಿಂದ ಮರಗಳು ಸಾಗಾಟ ಆಗುತ್ತಿರುವ ಬಗ್ಗೆ ಗ್ರಾಮಸ್ಥರು ನೀಡಿರುವ ಮಾಹಿತಿ ಆಧಾರದಲ್ಲಿ ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳ ತಂಡ 4 ದಿನಗಳ ಹಿಂದೆ ಜೀಪ್ನಲ್ಲಿ ಸಾಗುವಾನಿ ಮರದ ದಿಮ್ಮಿಗಳು ಸಾಗಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿತ್ತು. ಅದಾಗ್ಯೂ ಕಾಡಿನ ಅಂಚಿನಲ್ಲಿರುವ ಆರೋಪಿಯೋರ್ವನ ಮನೆಗೂ ಧಾಳಿ ನಡೆಸಿ, ಮನೆಯಲ್ಲಿದ್ದ ಇನ್ನಷ್ಟು ಮರ ಮತ್ತು ಮರ ಕೊಯ್ಯುವ ಯಂತ್ರವನ್ನು ವಶಕ್ಕೆ ತೆಗೆದುಕೊಂಡಿದ್ದರೆನ್ನಲಾಗಿದೆ. ಆದರೆ ಅಧಿಕಾರಿಗಳು ಪ್ರಕರಣ ದಾಖಲಿಸುವಾಗ ಈ ವಿಚಾರಗಳನ್ನು ಮರೆ ಮಾಚಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
**
ಪ್ರಸ್ತಾವನೆಸಲ್ಲಿಕೆಯಾಗಿದೆ-ಆರ್.ಎಫ್.ಓ.
ಈಗಾಗಲೇ ಈ ನೆಡುತೋಪಿನಿಂದ ಬಹುಪಾಲು ಮರಗಳನ್ನು ಕಡಿದು ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡಿದೆ. ಇನ್ನೂ ಸ್ವಲ್ಪ ಪ್ರಮಾಣದಲ್ಲಿ ಇದೆ, ಅವುಗಳು ನೀರಕಟ್ಟೆ ಡ್ಯಾಂ ನೀರು ನಿಲುಗಡೆ ಆಗುವ ಭಾಗದಲ್ಲಿ ಇದ್ದುದರಿಂದ ತೆಗೆಯಲು ಆಗಿಲ್ಲ, ಅದನ್ನು ತೆಗೆಯುವ ಬಗ್ಗೆಯೂ ಈಗಾಗಲೇ ಸಕರ್ಾರಕ್ಕೆ ಪ್ರಸ್ತಾವಣೆ ಸಲ್ಲಿಕೆ ಆಗಿದ್ದು, ಮುಂದೆ ಆ ಮರಗಳನ್ನು ರಕ್ಷಿಸಲಾಗುವುದು ಎಂದು ಉಪ್ಪಿನಂಗಡಿ ವಲಯ ಅರಣ್ಯ ಅಧಿಕಾರಿ ಸಂಧ್ಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.