ADVERTISEMENT

ಗೋರಕ್ಷಣೆಗೆ ರಸ್ತೆಗೆ ಇಳಿಯಲು ಸಿದ್ಧ

ಗೋಹತ್ಯೆ, ಗೋಕಳ್ಳತನ ಅವ್ಯಾಹತ: ಶರಣ್‌ ಪಂಪ್‌ವೆಲ್‌

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 3:01 IST
Last Updated 6 ಅಕ್ಟೋಬರ್ 2020, 3:01 IST
ಶರಣ್‌ ಪಂಪ್‌ವೆಲ್‌
ಶರಣ್‌ ಪಂಪ್‌ವೆಲ್‌   

ಮಂಗಳೂರು: ಪೂಜನೀಯವಾಗಿರುವ ಗೋಮಾತೆಗೆ ಹಿಂಸೆ ಕೊಡುವುದು ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದು, ಹಿಂದೂ ಸಮಾಜದ ಆಕ್ರೋಶ ಸ್ಫೋಟಗೊಳ್ಳುವ ಮೊದಲು ಜಿಲ್ಲಾಡಳಿತ ಎಚ್ಚರವಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಹೇಳಿದರು.

ಕದ್ರಿಯ ವಿಶ್ವಶ್ರೀಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದೇ ಒಂದು ಗೋ ವಧೆಯಾಗಲೀ, ಅಕ್ರಮ ಗೋ ಸಾಗಣೆಯಾಗಲಿ ಜಿಲ್ಲೆಯಲ್ಲಿ ನಡೆಯದಂತೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ ಬಜರಂಗದಳವು ಗೋರಕ್ಷಣೆಗಾಗಿ ರಸ್ತೆಗೆ ಇಳಿಯಲಿದ್ದು, ಅಕ್ರಮವನ್ನು ತಡೆಯಲಿದೆ. ಮುಂದೆ ಆಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ’ ಎಂದು ಎಚ್ಚರಿಸಿದರು.

ಮಹಾನಗರ ಪಾಲಿಕೆಯ ಕುದ್ರೋಳಿ ಕಸಾಯಿಖಾನೆ ಕೇಂದ್ರೀಕರಿಸಿ ಗೋ ಕಳ್ಳ ಸಾಗಣೆ ನಿರಂತರವಾಗಿ ನಡೆಯುತ್ತಿದೆ. ಜಿಲ್ಲೆಯಲ್ಲಿ ಗೋಹತ್ಯೆ, ಗೋ ಕಳ್ಳತನ ಅವ್ಯಾಹತವಾಗಿದ್ದು, ಕೂಡಲೇ ಇದನ್ನು ತಡೆಯಲು ವಿಶೇಷ ಕಾರ್ಯಪಡೆ ರಚಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಇದೊಂದು ಬೃಹತ್ ಗೋ ಮಾಫಿಯ ಆಗಿದ್ದು, ಇದರ ಹಿಂದೆ ದೊಡ್ದ ದಂಧೆಯು ರಾಜಾರೋಷವಾಗಿ ನಡೆಯುತ್ತಿದೆ. ಹಿಂದೆ ಇರುವ ಕಾಣದ ವ್ಯಕ್ತಿಗಳನ್ನು ಪತ್ತೆಹಚ್ಚಬೇಕು. ಗೋ ಮಾಫಿಯಾ ಮಟ್ಟಹಾಕಬೇಕು ಎಂದು ಒತ್ತಾಯಿಸಿದರು.

ಭಾನುವಾರ ಬೆಳಿಗ್ಗೆ ನಡೆದ ಘಟನೆಯು ಹಿಂಸಾತ್ಮಕ ಅಕ್ರಮ ಗೋಸಾಗಾಟಕ್ಕೆ ಸಾಕ್ಷಿಯಾಗಿದ್ದು, ಕಾಪಿಕಾಡ್, ಕುಂಟಿಕಾನ, ಉರ್ವ ಕೆನರಾ ಹೈಸ್ಕೂಲ್ ಹಾಗೂ ಮಣ್ಣಗುಡ್ಡೆ ಗುರ್ಜಿ ಸರ್ಕಲ್ ಬಳಿ ಗೋ ಸಾಗಣೆ ವಾಹನದಿಂದ ಗೋವುಗಳನ್ನು ರಸ್ತೆಗೆ ಉದ್ದೇಶಪೂರ್ವಕವಾಗಿ ಬಿಸಾಡಿ ವಿಕೃತಿ ಮೆರೆದಿದ್ದಾರೆ ಎಂದು ದೂರಿದರು.

ಬಜರಂಗದಳ ವಿಭಾಗ ಸಂಯೋಜಕ ಭುಜಂಗ್‌ ಕುಲಾಲ್‌, ವಿಶ್ವ ಹಿಂದೂ ಪರಿಷತ್‌ ಜಿಲ್ಲಾ ಘಟಕದ ಕಾರ್ಯದರ್ಶಿ ಶಿವಾನಂದ ಮೆಂಡನ್‌, ಉಪಾಧ್ಯಕ್ಷ ಮನೋಹರ್‌ ಸುವರ್ಣ, ಪ್ರದೀಪ್‌ ಪಂಪ್‌ವೆಲ್‌, ಗುರುಪ್ರಸಾದ್ ಉಳ್ಳಾಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.