ADVERTISEMENT

ರೈತರ ನೆರವಿಗೆ ಬಂದ ಜೆ.ಆರ್‌.ಲೋಬೊ, ತೋಟಗಳಿಂದಲೇ ತರಕಾರಿ ಖರೀದಿಸಿ ಜನರಿಗೆ ವಿತರಣೆ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 16:05 IST
Last Updated 27 ಏಪ್ರಿಲ್ 2020, 16:05 IST
ಮಾಜಿ ಶಾಸಕ ಜೆ.ಆರ್‌.ಲೋಬೊ ಅವರು ಸೋಮವಾರ ರೈತರಿಂದ ತರಕಾರಿ ಖರೀದಿಸಿ ಮಂಗಳೂರಿನ ಅನಾಥಾಶ್ರಮಗಳಿಗೆ ವಿತರಿಸಿದರು
ಮಾಜಿ ಶಾಸಕ ಜೆ.ಆರ್‌.ಲೋಬೊ ಅವರು ಸೋಮವಾರ ರೈತರಿಂದ ತರಕಾರಿ ಖರೀದಿಸಿ ಮಂಗಳೂರಿನ ಅನಾಥಾಶ್ರಮಗಳಿಗೆ ವಿತರಿಸಿದರು   

ಮಂಗಳೂರು: ಮಾಜಿ ಶಾಸಕ ಜೆ.ಆರ್‌.ಲೋಬೊ ಅವರು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ನೀರುಮಾರ್ಗ ಬಳಿಯ ಮೇರ್ಲಪದವು ತರಕಾರಿ ಕೃಷಿಕರ ನೆರವಿಗೆ ನಿಂತಿದ್ದಾರೆ. ಈ ರೈತರು ಸಾವಯವ ವಿಧಾನದಲ್ಲಿ ಬೆಳೆದಿರುವ ತರಕಾರಿಗಳನ್ನು ಖರೀದಿಸಿ, ಜನರಿಗೆ ವಿತರಿಸುವ ಕೆಲಸ ಆರಂಭಿಸಿದ್ದಾರೆ.

ರೈತರು ಬೆಳೆದಿರುವ ಕೃಷಿ ಉತ್ಪನ್ನಗಳನ್ನು ಖರೀದಿಸಿ, ವಿತರಣೆ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ಮುಖಂಡರಿಗೆ ಸೂಚಿಸಿದ್ದಾರೆ. ಕೋವಿಡ್‌–19 ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷ ನೇಮಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕಾರ್ಯಪಡೆಯ ಮುಖ್ಯಸ್ಥರೂ ಆಗಿರುವ ಲೋಬೊ ಅವರು ಈ ಸೂಚನೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ.

ಮೇರ್ಲಪದವು ವ್ಯಾಪ್ತಿಯಲ್ಲಿ ಸುಮಾರು 80 ರೈತರು ತರಕಾರಿ ಬೆಳೆಯುತ್ತಿದ್ದಾರೆ. ಬೈಕಂಪಾಡಿಯ ಎಪಿಎಂಸಿ ಆವರಣದಲ್ಲಿ ಆರಂಭಿಸಿರುವ ಮಾರುಕಟ್ಟೆಗೆ ತರಕಾರಿಗಳನ್ನು ಸಾಗಿಸಿ, ಮಾರಾಟ ಮಾಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ವಿಷಯ ತಿಳಿದ ಲೋಬೊ ಅವರು ಪಕ್ಷದ ಇತರ ಮುಖಂಡರೊಂದಿಗೆ ಸೋಮವಾರ ಸ್ಥಳಕ್ಕೆ ಭೇಟಿನೀಡಿ, ರೈತರೊಂದಿಗೆ ಸಮಾಲೋಚನೆ ನಡೆಸಿದರು.

ADVERTISEMENT

ಆ ರೈತರು ಬೆಳೆದಿದ್ದ ಬಸಳೆ, ಹರಿವೆ, ಅಲಸಂಡೆ, ಸಿಹಿಕುಂಬಳ, ಬೂದುಕುಂಬಳ, ಬಾಳೆಕಾಯಿ ಮತ್ತಿತರ ತರಕಾರಿಗಳನ್ನು ಖರೀದಿಸಿದ ಮಾಜಿ ಶಾಸಕರು, ಪಕ್ಷದ ಕಾರ್ಯಕರ್ತರ ಮೂಲಕ ಅವುಗಳನ್ನು ಅಗತ್ಯ ಇರುವ ಜನರಿಗೆ ಹಂಚಿದರು. ಮರೋಳಿಯ ವೈಟ್‌ ಡೋವ್ಸ್‌, ಸ್ನೇಹಾಲಯ, ಜೆಪ್ಪುವಿನ ಪ್ರಶಾಂತ್‌ ನಿವಾಸ್‌ ಸೇರಿದಂತೆ ಹಲವು ಅನಾಥಾಶ್ರಮಗಳಿಗೆ ತರಕಾರಿ ಒದಗಿಸಿದರು.

‘ಸಾವಯವ ವಿಧಾನದ ಕೃಷಿಯ ಮೂಲಕ ತರಕಾರಿ ಬೆಳೆದಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ. ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನೇರವಾಗಿ ಅವರಿಂದ ತರಕಾರಿ ಖರೀದಿ ಮಾಡಲಾಯಿತು’ ಎಂದು ಜೆ.ಆರ್‌.ಲೋಬೊ ತಿಳಿಸಿದರು.

ಕಾಂಗ್ರೆಸ್‌ ಮುಖಂಡರಾದ ಟಿ.ಕೆ.ಸುಧೀರ್, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಬಿ. ಸಾಲ್ಯಾನ್, ಡೆನ್ನಿಸ್ ಡಿಸಿಲ್ವ, ಕೃತಿನ್ ಕುಮಾರ್, ಉದಯ್ ಕುಮಾರ್, ರಘುರಾಜ್ ಕದ್ರಿ, ರಾಜೇಶ್ ಕದ್ರಿ, ಸಮರ್ಥ್ ಭಟ್, ನಾಗೇಂದ್ರ, ಸಂತೋಷ ನೀರುಮಾರ್ಗ ಮಾಜಿ ಶಾಸಕರ ಜೊತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.