
ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಉಜಿರೆಯಲ್ಲಿ ಫೆ.14ರಂದು ಹಮ್ಮಿಕೊಂಡಿದ್ದ ತಿಥಿಯ ಅಡುಗೆಗೆ ನದಿಯಲ್ಲಿ ಬೇಟೆಯಾಡಿದ ಆಮೆಯ ಮಾಂಸ ಮಾಡಲು ಪ್ರಯತ್ನಿಸುತ್ತಿದ್ದ ಆರೋಪದಲ್ಲಿ ಪೊಲೀಸರು ನಾಲ್ಕು ಆಮೆ ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮದ ಪೆರಡಾಲು ನಿವಾಸಿ ಮಣಿಕಂಠ, ಮಂಗಳೂರು ನಗರದ ಮೂಲ್ಕಿ ತಾಲ್ಲೂಕಿನ ನೆಲ್ಲಿಗುಡ್ಡೆ ನಿವಾಸಿ ರಾಜೇಂದ್ರ, ಮೂಡುಬಿದಿರೆ ತಾಲ್ಲೂಕಿನ ಶಿರ್ತಾಡಿ ಗ್ರಾಮದ ವಿಘ್ನೇಶ್ ಮತ್ತು ಬೆಳ್ತಂಗಡಿ ತಾಲ್ಲೂಕಿನ ಬಡಗಕಾರಂದೂರು ಗ್ರಾಮದ ನಿವಾಸಿ ಪ್ರಶಾಂತ್ ಆರೋಪಿಗಳು.
ಅವರು ಸಂಬಂಧಿಕರಾದ ಉಜಿರೆ ಗ್ರಾಮದ ಕುಂಟಿನಿ ನಿವಾಸಿಯಾಗಿದ್ದ ಅಜ್ಜಿಯ ಉತ್ತರ ಕ್ರಿಯೆಗಾಗಿ ಫೆ.13ರಂದು ಬಂದಿದ್ದರು. ಅಜ್ಜಿಗೆ ಪ್ರಿಯವಾಗಿದ್ದ ಖಾದ್ಯ ತಯಾರಿಸಲು ಶನಿವಾರ ಸಂಜೆ ಬೆಳ್ತಂಗಡಿಯ ಸೋಮವತಿ ನದಿಯಲ್ಲಿ ಆಮೆಗಳನ್ನು ಬೇಟೆಯಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿದ್ದಾರೆ.
ಬೆಳ್ತಂಗಡಿ ಪಿಎಸ್‌ಐ ಆನಂದ್ ಎಂ. ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ಪ್ರಕರಣವನ್ನು ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ.
ಅರಣ್ಯ ಇಲಾಖೆಯವರು ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ಉಪವಿಭಾಗದ ಡಿವೈಎಸ್‌ಪಿ ರೋಹಿಣಿ ಸಿ.ಕೆ., ಸಿಪಿಐ ಬಿ.ಜಿ.ಸುಬ್ಬಾಪುರಮಠ ಮಾರ್ಗದರ್ಶನದಲ್ಲಿ ಪಿಎಸ್‌ಐ ಆನಂದ್ ಎಂ. ನೇತೃತ್ವದಲ್ಲಿ ಎಎಸ್‌ಐ ಕುಶಾಲಪ್ಪ, ಎಲ್.ಸಿ.ಪ್ರಮೋದ್, ಪಂಪಾವತಿ, ಪ್ರಕಾಶ್, ಶ್ವೇತಾ, ಸವಿತಾ, ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ತ್ಯಾಗರಾಜ್, ಉಪ ಆರ್‌ಎಫ್‌ಒ ಕಿರಣ್ ಪಾಟೀಲ್, ಸಂದೀಪ್, ಪರಶುರಾಮ ಮೇಟಿ, ದಿವಾಕರ್ ಮತ್ತು ವಾಹನ ಚಾಲಕ ಕುಶಾಲಪ್ಪ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.