ಪ್ರಾತಿನಿಧಿಕ ಚಿತ್ರ
ಮಂಗಳೂರು: 'ಮದುವೆಯಾಗುವುದಾಗಿ ನಂಬಿಸಿ, ಯುವತಿ ಮಗುವಿಗೆ ಜನ್ಮನೀಡುವಂತೆ ಮಾಡಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚಿಸಿದ ಪ್ರಕರಣದಲ್ಲಿ ಆರಂಭದಿಂದಲೂ ವಿಶ್ವಕರ್ಮ ಸಮಾಜ ಸಂತ್ರಸ್ತೆಯ ಪರವಾಗಿ ನಿಂತಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗದಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯ’ ಎಂದು ವಿಶ್ವಕರ್ಮ ಯುವ ಮಿಲನ್ ಸ್ಥಾಪಕಾಧ್ಯಕ್ಷ ವಿಕ್ರಮ್ ಐ. ಆಚಾರ್ಯ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಮಗುವಿನ ತಂದೆ ಯಾರೆಂದು ಖಚಿತವಾಗಲು ವಂಶವಾಹಿ (ಡಿಎನ್‌ಎ) ಪರೀಕ್ಷೆ ನಡೆಸಬೇಕೆಂದು ಪ್ರಕರಣದ ಆರೋಪಿ ಕೃಷ್ಣ ಜೆ. ರಾವ್ ಒತ್ತಾಯಿಸಿದ್ದ. ಈಗ ಮಗು ಆತನದೇ ಎಂಬುದು ವಂಶವಾಹಿ ಪರೀಕ್ಷೆಯಲ್ಲೂ ಸಾಬೀತಾಗಿದೆ. ಆದರೂ ಸಂತ್ರಸ್ತ ಯುವತಿಯನ್ನು ಮದುವೆಯಾಗಲು ನಿರಾಕರಿಸುವುದು ಸರಿಯಲ್ಲ. ಬಿಕ್ಕಟ್ಟು ಸೌಹಾರ್ದಯುತವಾಗಿ ಇತ್ಯರ್ಥ ಆಗಬೇಕೆಂಬುದು ಎಲ್ಲರ ಆಶಯ. ಅದು ಈಡೇರದಿದ್ದರೆ ವಿಶ್ವಕರ್ಮ ಸಮಾಜ ಸುಮ್ಮನೆ ಕೂರಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದರು.
‘ಸಂತ್ರಸ್ತೆಗೆ ನ್ಯಾಯ ದೊರಕಿಸುವಂತೆ ಜಿಲ್ಲೆಯ ಎಲ್ಲ ಪಕ್ಷಗಳ ಶಾಸಕರನ್ನು ಭೇಟಿಯಾಗಿ ಮನವಿ ಮಾಡುತ್ತಿದ್ದೇವೆ. ಈ ಬಗ್ಗೆ ಗುರುವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿಶ್ವಕರ್ಮ ಸಮಾಜದ ಪ್ರಮುಖರ ಸಭೆ ಆಯೋಜಿಸಲಾಗಿದ್ದು, ಅಲ್ಲಿ ಹೋರಾಟದ ರೂಪರೇಷೆ ಬಗ್ಗೆ ತಯಾರಿಸುತ್ತೇವೆ. ನಮ್ಮ ಹೋರಾಟಕ್ಕೆ ಎಲ್ಲರ ಬೆಂಬಲ ಯಾಚಿಸುತ್ತೇವೆ’ ಎಂದರು.
‘ಸಂತ್ರಸ್ತೆಗೆ ನ್ಯಾಯ ಕೊಡಿಸದಿದ್ದರೆ ಕೃಷ್ಣ ಜೆ.ರಾವ್ ತಂದೆ ಜಗನ್ನಿವಾಸ ರಾವ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದಾಗಿ ಬಿಜೆಪಿ ಮುಖಂಡರು ಭರವಸೆ ನೀಡಿದ್ದಾರೆ. ಈ ಬಗ್ಗೆ ಕಾದುನೋಡುತ್ತೇವೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಾಜಿ ಮೊಕ್ತೇಸರ ಲೋಕೇಶ್ ಆಚಾರ್ಯ, ಯುವ ಮಿಲನ್‌ನ ನವೀನ್ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ, ಶೇಖರ ಆಚಾರ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.