ADVERTISEMENT

ಸಾಲ ನೀಡುವ ಆಮಿಷವೊಡ್ಡಿ ವಂಚನೆ:ದೆಹಲಿಯಲ್ಲಿ ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 10:59 IST
Last Updated 5 ಜುಲೈ 2019, 10:59 IST
ಬಂಧಿತ ಆರೋಪಿಗಳಿಂದ ವಶಕ್ಕೆ ಪಡೆದ ಸ್ವತ್ತುಗಳು ಮತ್ತು ತನಿಖಾ ತಂಡದ ಸದಸ್ಯರೊಂದಿಗೆ ಡಿಸಿಪಿ ಲಕ್ಷ್ಮೀಗಣೇಶ್‌, ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಮತ್ತು ಡಿಸಿಪಿ ಹನುಮಂತರಾಯ.– ಪ್ರಜಾವಾಣಿ ಚಿತ್ರ
ಬಂಧಿತ ಆರೋಪಿಗಳಿಂದ ವಶಕ್ಕೆ ಪಡೆದ ಸ್ವತ್ತುಗಳು ಮತ್ತು ತನಿಖಾ ತಂಡದ ಸದಸ್ಯರೊಂದಿಗೆ ಡಿಸಿಪಿ ಲಕ್ಷ್ಮೀಗಣೇಶ್‌, ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಮತ್ತು ಡಿಸಿಪಿ ಹನುಮಂತರಾಯ.– ಪ್ರಜಾವಾಣಿ ಚಿತ್ರ   

ಮಂಗಳೂರು: ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಜನರನ್ನು ನಂಬಿಸಿ, ಮುಂಗಡ ಕಂತುಗಳ ಮೊತ್ತವನ್ನು ಖಾತೆಗೆ ಜಮಾ ಮಾಡಿಸಿಕೊಂಡು ವಂಚಿಸುತ್ತಿದ್ದ ಜಾಲವೊಂದನ್ನು ಪತ್ತೆ ಮಾಡಿರುವ ಮಂಗಳೂರು ನಗರ ಸೈಬರ್‌ ಅಪರಾಧ ಘಟಕದ ಪೊಲೀಸರು, ದೆಹಲಿಯಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.

‘ಉತ್ತರ ಪ್ರದೇಶದವನಾಗಿದ್ದು, ವಂಚನೆಗಾಗಿಯೇ ದೆಹಲಿಯ ಜನಕಪುರಿಯಲ್ಲಿ ಕಚೇರಿ ತೆರೆದುಕೊಂಡಿದ್ದ ಯೂಸುಫ್‌ ಖಾನ್‌ (30) ಬಂಧಿತ ಆರೋಪಿ. ಈತನ ಸಹಚರರಾದ ನೌಷಾದ್‌ ಮತ್ತು ಪ್ರಭಾಕರ್‌ ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ಮುಂದುವರಿದಿದೆ. ಬಂಧಿತ ಆರೋಪಿಯಿಂದ 31 ಮೊಬೈಲ್ ಫೋನ್‌ಗಳು, ಎರಡು ಲ್ಯಾಪ್‌ಟಾಪ್‌, ₹ 70,000 ನಗದು ಮತ್ತು ವಂಚಿಸುವುದಕ್ಕಾಗಿಯೇ ಸಂಪರ್ಕಿಸಿದ್ದ ವ್ಯಕ್ತಿಗಳ ವಿವರವುಳ್ಳ ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಅವರು ಶುಕ್ರವಾರ ಪತ್ರಕರ್ತರಿಗೆ ತಿಳಿಸಿದರು.

ಸಾಲ ನೀಡುವ ಭರವಸೆ ನಂಬಿ ₹ 1.70 ಲಕ್ಷ ಹಣ ಕಳೆದುಕೊಂಡಿದ್ದ ನಗರದ ವ್ಯಕ್ತಿಯೊಬ್ಬರು ಸೈಬರ್‌ ಅಪರಾಧ ಠಾಣೆಗೆ ದೂರು ನೀಡಿದ್ದರು. ಈ ಕುರಿತು ತನಿಖೆ ಆರಂಭಿಸಿದ ಸೈಬರ್‌ ಅಪರಾಧ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಶ್ಯಾಂಸುಂದರ್‌ ಮತ್ತು ತಂಡ ಆರೋಪಿಗಳು ದೆಹಲಿಯಿಂದ ಕಾರ್ಯನಿರ್ವಹಿಸುತ್ತಿರುವುದನ್ನು ಪತ್ತೆ ಮಾಡಿತ್ತು. ತನಿಖಾ ತಂಡ ದೆಹಲಿಗೆ ಹೋಗಿ ಕೆಲವು ದಿನಗಳ ಕಾಲ ತಂಗಿದ್ದು, ಜನಕಪುರಿಯಲ್ಲಿನ ಆರೋಪಿಗಳ ಕಚೇರಿಗೆ ದಾಳಿ ನಡೆಸಿ ಒಬ್ಬನನ್ನು ಬಂಧಿಸಿದೆ ಎಂದರು.

ADVERTISEMENT

ಆರೋಪಿಗಳು ಆರು ತಿಂಗಳಿನಿಂದ ಈಚೆಗೆ ಸುಮಾರು 400 ಜನರನ್ನು ಸಂಪರ್ಕಿಸಿ ಸಾಲ ನೀಡುವ ಆಮಿಷ ಒಡ್ಡಿರುವುದು ದಾಖಲೆಗಳಿಂದ ಗೊತ್ತಾಗಿದೆ. ಕರ್ನಾಟಕದಲ್ಲಿ ಸುಮಾರು 60 ಮಂದಿಯಿಂದ ಹಣ ಪಡೆದು ವಂಚಿಸಿದ್ದಾರೆ. ಈ ಕುರಿತು ವಿವಿಧ ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರಕರಣದ ಸಮಗ್ರ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

‘ಆರೋಪಿಗಳು ಟೆಲಿಕಾಂ ಕಂಪೆನಿಗಳ ಗ್ರಾಹಕ ಸೇವಾ ಕೇಂದ್ರಗಳಿಂದ ಸಾರ್ವಜನಿಕರ ಮೊಬೈಲ್‌ ಸಂಖ್ಯೆ ಪಡೆಯುತ್ತಿದ್ದರು. ಅವರಿಗೆ ಕರೆಮಾಡಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿ ಆಮಿಷ ಒಡ್ಡುತ್ತಿದ್ದರು. ಆಧಾರ್‌, ಪಾನ್‌ ಕಾರ್ಡ್‌ ಸೇರಿದಂತೆ ಕೆಲವು ದಾಖಲೆಗಳನ್ನೂ ಆನ್‌ಲೈನ್‌ ಮೂಲಕ ಪಡೆದುಕೊಳ್ಳುತ್ತಿದ್ದರು. ಕೆಲವು ದಿನಗಳ ಬಳಿಕ ಕರೆಮಾಡಿ, ‘ನಿಮಗೆ ಸಾಲ ಮಂಜೂರಾಗಿದೆ. ನಾಲ್ಕು ತಿಂಗಳ ಕಂತಿನ ಮೊತ್ತ ಮತ್ತು ಪ್ರೊಸೆಸಿಂಗ್‌ ಶುಲ್ಕವನ್ನು ಅಕೌಂಟ್‌ಗೆ ಜಮೆ ಮಾಡಿ’ ಎಂದು ಸೂಚಿಸುತ್ತಿದ್ದರು. ಜನರು ಹಣ ಪಾವತಿಸಿದ ಬಳಿಕ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ’ ಎಂದು ವಿವರಿಸಿದರು.

ಸೈಬರ್‌ ಅಪರಾಧ ಘಟಕದ ಪೊಲೀಸರು ದೆಹಲಿ ಪೊಲೀಸರ ನೆರವಿನಿಂದ ಆರೋಪಿಯನ್ನು ಬಂಧಿಸಿದ್ದಾರೆ. ಸಾರ್ವಜನಿಕರು ಇಂತಹ ಪ್ರಕರಣಗಳಲ್ಲಿ ಮೋಸ ಹೋಗಬಾರದು. ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುವುದಾಗಿ ಕರೆ ಮಾಡುವವರ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.

ಸೈಬರ್‌ ಅಪರಾಧ ಠಾಣೆಯಲ್ಲಿ ಈವರೆಗೆ 144 ಪ್ರಕರಣಗಳು ದಾಖಲಾಗಿವೆ. ಎಲ್ಲವನ್ನೂ ತನಿಖೆಗೆ ವಹಿಸಲಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಹೊರ ರಾಜ್ಯದವರಾಗಿದ್ದು, ಪತ್ತೆ ಕಾರ್ಯ ನಿಧಾನವಾಗುತ್ತಿದೆ ಎಂದು ಹೇಳಿದರು.

ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್‌, ಸಬ್‌ ಇನ್‌ಸ್ಪೆಕ್ಟರ್‌ ಶ್ಯಾಂಸುಂದರ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.