ADVERTISEMENT

ಮೂಡುಬಿದಿರೆ| ವೃದ್ಧರು, ದುರ್ಬಲರಿಗೆ ಉಚಿತ ಊಟ ತಿಂಡಿ!

ಪ್ರಸನ್ನ ಹೆಗ್ಡೆ ಕಲ್ಲಬೆಟ್ಟು
Published 15 ಜನವರಿ 2026, 4:29 IST
Last Updated 15 ಜನವರಿ 2026, 4:29 IST
ಮೂಡುಬಿದಿರೆಯ ಜ್ಯೋತಿನಗರದ ಗಣೇಶ್ ಕ್ಯಾಂಟೀನ್ 
ಮೂಡುಬಿದಿರೆಯ ಜ್ಯೋತಿನಗರದ ಗಣೇಶ್ ಕ್ಯಾಂಟೀನ್    

ಮೂಡುಬಿದಿರೆ: ಮಕರ ಸಂಕ್ರಾತಿಯ ಅಂಗವಾಗಿ ಇಲ್ಲಿನ ಜ್ಯೋತಿ ನಗರದ ಶ್ರೀಗಣೇಶ್ ಕ್ಯಾಂಟೀನಲ್ಲಿ ವೃದ್ಧರಿಗೆ, ವಿಕಲಚೇತನರಿಗೆ ಮತ್ತು ಅಶಕ್ತರಿಗೆ ಉಚಿತ ಚಹಾ, ತಿಂಡಿ, ಊಟದ ಸೇವೆ ಆರಂಭಗೊಂಡಿದೆ.

ಬಿ.ಸಿ ರೋಡ್‌ಗೆ ಹೋಗುವ ರಸ್ತೆ ಪಕ್ಕದಲ್ಲಿ ಇರುವ ಈ ಕ್ಯಾಂಟೀನನ್ನು ವಿಶಾಲ ನಗರದ ನಿವಾಸಿ ಆನಂದ ಕುಲಾಲ್ ಎಂಬವರು ಹನ್ನೊಂದು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಆನಂದ ಕುಲಾಲ್, ಸದ್ಯ ನೇತಾಜಿ ಬ್ರಿಗೇಡ್‌ನಲ್ಲಿ ನಾಲ್ಕು ವರ್ಷಗಳಿಂದ ಗೌರವ ಅಧ್ಯಕ್ಷರಾಗಿದ್ದಾರೆ.

ಸಂಘಟನೆಯ ಸಾಮಾಜಿಕ ಕಾರ್ಯಗಳಿಂದ ಪ್ರೇರಣೆಗೊಂಡ ಆನಂದ ಕುಲಾಲ್, ತನ್ನ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ನೀಡಬೇಕೆಂಬ ಆಶಯದಿಂದ ಈ ಸೇವೆ ಆರಂಭಿಸಿದ್ದಾರೆ. ಮಾನವೀಯ ಸೇವೆಯ ಪ್ರಯೋಜನ ತನ್ನ ಹೋಟೆಲ್‌ಗೆ ಬರುವ ಗ್ರಾಹಕರಿಗೆ ಸಿಗಬೇಕೆಂದು ನಿಶ್ಚಯಿಸಿದ ಹೋಟಲ್ ಮಾಲೀಕ, ತನ್ನಲ್ಲಿಗೆ ಬರುವ ಅಶಕ್ತರು, ವೃದ್ಧರು ಹಾಗೂ ಅಂಗವಿಕಲರಿಗೆ ಬೆಳಗಿನ ಚಹಾ, ತಿಂಡಿ ಹಾಗೂ ಮಧ್ಯಾಹ್ನದ ಊಟಕ್ಕೆ ಯಾವುದೇ ಹಣ ಸ್ವೀಕರಿಸಿದೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಇದರ ಪ್ರಚಾರಕ್ಕಾಗಿ ಹೋಟೆಲ್ ಎದುರು ದೊಡ್ಡದಾದ ಫ್ಲೆಕ್ಸ್‌ ಅಳವಡಿಸಿದ್ದಾರೆ. ಬೆಳಿಗ್ಗೆ 9ರಿಂದ ಅಪರಾಹ್ನ 3 ಗಂಟೆ ತನಕ ನಿರ್ದಿಷ್ಟ ಗ್ರಾಹಕರಿಗೆ ಇಲ್ಲಿ ಉಚಿತ ಸೇವೆ ಲಭಿಸುತ್ತಿದೆ.

ADVERTISEMENT

ಆನಂದ ಕುಲಾಲ್ ಇಲ್ಲಿ ಕ್ಯಾಂಟೀನ್ ಆರಂಭಿಸುವ ಮೊದಲು ಮೂಡುಬಿದಿರೆ ಮಾರುಕಟ್ಟೆ ಬಳಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದರು. ಹೋಟೆಲ್ ವೃತ್ತಿಯ ಜತೆಗೆ ನೇತಾಜಿ ಬ್ರಿಗೇಡ್ ಸೇವಾ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಈ ಸಂಘಟನೆ ಸಮಾಜದ ಅಶಕ್ತರಿಗೆ, ದುರ್ಬಲರಿಗೆ ಹಾಗೂ ಬಡರೋಗಿಗಳಿಗೆ ಆರ್ಥಿಕ ನೆರವನ್ನು ನೀಡುತ್ತಿದೆ.

ಮೂಡುಬಿದಿರೆಯ ಜ್ಯೋತಿನಗರದ ಗಣೇಶ್ ಕ್ಯಾಂಟೀನ್ 
ಮೂಡುಬಿದಿರೆಯ ಗಣೇಶ್ ಕ್ಯಾಂಟೀನ್ ಎದುರು ಅಳವಡಿಸಿರುವ ಉಚಿತ ಊಟ ತಿಂಡಿ ಮಾಹಿತಿ ಫಲಕ
ಸಮಾಜದ ದುರ್ಬಲರಿಗೆ ಏನಾದರೂ ಸಹಾಯವಾಗಬೇಕೆಂಬುದು ಬಹಳ ಸಮಯಗಳಿಂದ ಯೋಚಿಸುತ್ತಿದ್ದೆ. ಮಕರ ಸಂಕ್ರಾಂತಿಯಂದು ಇದಕ್ಕೆ ಶುಭ ದಿನ ಬಂದಿದೆ.ಈ ಸೇವೆಯು ನಿರಂತರವಾಗಿ ಇರಲಿದೆ.
ಆನಂದ ಕುಲಾಲ್ ಶ್ರೀಗಣೇಶ್ ಕ್ಯಾಂಟೀನ್ ಮೂಡುಬಿದಿರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.