ADVERTISEMENT

ಅಂಗವೈಕಲ್ಯ: ಶಿಕ್ಷಣದ ಕನಸು ನನಸಾಗಿಸಲು ಟೊಂಕಕಟ್ಟಿದ ಫಾತಿಮತ್‌ಗೆ ಸಹಪಾಠಿಗಳೇ ಆಸರೆ

ಬಡತನವಿದ್ದರೂ ಅಂಗವಿಕಲೆಗೆ ಕಲಿಯುವ ಹಂಬಲ

ಸತೀಶ್ ಕೊಣಾಜೆ
Published 3 ಜನವರಿ 2023, 22:57 IST
Last Updated 3 ಜನವರಿ 2023, 22:57 IST
ಫಾತಿಮತ್ ನಿಶಾರನ್ನು ಗಾಲಿ ಕುರ್ಚಿಯಲ್ಲಿ ತರಗತಿಗೆ ಕರೆದುಕೊಂಡು ಹೋಗುತ್ತಿರುವ ಸಬ್ರಿನಾ, ಸಫೀರ ಮತ್ತು ಸೌಜನ್ಯಾ
ಫಾತಿಮತ್ ನಿಶಾರನ್ನು ಗಾಲಿ ಕುರ್ಚಿಯಲ್ಲಿ ತರಗತಿಗೆ ಕರೆದುಕೊಂಡು ಹೋಗುತ್ತಿರುವ ಸಬ್ರಿನಾ, ಸಫೀರ ಮತ್ತು ಸೌಜನ್ಯಾ   

ಮುಡಿಪು (ದಕ್ಷಿಣ ಕನ್ನಡ): ಬಡತನದಲ್ಲೇ ಜೀವನ ಸಾಗಿಸುತ್ತಿರುವ ಕುಟುಂಬದಲ್ಲಿ ಅಂಗವೈಕಲ್ಯದೊಂದಿಗೆ ಜನಿಸಿದ ಫಾತಿಮತ್ ನಿಶಾ ಅವರ ಶಿಕ್ಷಣದ ಕನಸು ನನಸಾಗಿಸಲು ಟೊಂಕಕಟ್ಟಿ ನಿಂತಿದ್ದಾರೆ ಅವರ ಸಹಪಾಠಿಗಳು.

ಕೊಣಾಜೆ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಆಸ್ಯಮ್ಮ ಅವರ ಪುತ್ರಿ ಫಾತಿಮತ್ ನಿಶಾಗೆ ಈಗ 17ರ ಹರಯ. ಪದವು ಮಹಾತ್ಮ ಗಾಂಧಿ ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಅವರ ನಿತ್ಯದ ಎಲ್ಲ ಕೆಲಸಗಳಿಗೂ ತರಗತಿಯ ವಿದ್ಯಾರ್ಥಿನಿಯರು ನೆರವಾಗುತ್ತಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿನಿ ನಿಶಾ ಅವರ ತಂದೆ ಹಲೀಮ್ ಕೆಲವು ವರ್ಷಗಳ ಹಿಂದೆ ತೀರಿಹೋಗಿದ್ದಾರೆ. ಅಜ್ಜಿ ಮೈಮುನಾ, ತಾಯಿ ಮತ್ತು ಕಿರಿಯ ಸಹೋದರನೊಂದಿಗೆ ಕೊಣಾಜೆಯ ಹಸನ್ ಕಾಂಪೌಂಡ್‌ನಲ್ಲಿ ನಿಶಾ ವಾಸವಾಗಿದ್ದಾರೆ. ಬೀಡಿ ಕಾರ್ಮಿಕೆ
ಯಾಗಿರುವ ತಾಯಿಯ ದುಡಿಮೆಯಿಂದ ಎಲ್ಲರ ಜೀವನವೂ ಸಾಗಿಸಬೇಕಾದ ಅನಿವಾರ್ಯ ಸ್ಥಿತಿ ಈ ಕುಟುಂಬದ್ದು.

ADVERTISEMENT

ನಿಶಾಗೆ ಕೈ ಮತ್ತು ಕಾಲುಗಳಲ್ಲಿ ಬಲವಿಲ್ಲದ ಸಮಸ್ಯೆ ಜನಿಸುವಾಗಲೇ ಇತ್ತು. ಅಂಗವೈಕಲ್ಯದ ನಡುವೆಯೇ ಪ್ರಾಥಮಿಕ ಶಿಕ್ಷಣ ಪೂರ್ಣಗೊಳಿಸಿದ ಫಾತಿಮತ್ ಅವರನ್ನು ಹೈಸ್ಕೂಲ್‌ಗೆ ಕಳುಹಿಸದೇ ಇರಲು ಮನೆಯಲ್ಲಿ ನಿರ್ಧಾರವಾಗಿತ್ತು. ನಿರಾಸೆಯ ನಡುವೆಯೇ ಹಠ ಹಿಡಿದು ಓದಲು ಮುಂದಾದ ಅವರಿಗೆ ಬೆನ್ನೆಲುಬು ಆಗಿ ನಿಂತವರು ಗೆಳತಿಯರಾದ ಸಬ್ರಿನಾ, ಫಾತಿಮತ್ ಸಫೀರಾ, ಸೌಜನ್ಯಾ
ಅವರ ತಂಡ.

ಶೌಚಾಲಯದಲ್ಲೂ ನೆರವು: ಶಾಲೆಗೆ ಆಟೊದಲ್ಲಿ ಬರುವ ಫಾತಿಮತ್ ನಿಶಾ ರನ್ನು ಎತ್ತಿ ಗಾಲಿ ಕುರ್ಚಿಯಲ್ಲಿ ಕುಳ್ಳಿರಿಸಿ ತರಗತಿಯೊಳಗೆ ಕರೆದುಕೊಂಡು ಹೋಗುವ ಸಹಪಾಠಿಗಳು ಶೌಚಾಲಯದಲ್ಲೂ ನೆರವಾಗುತ್ತಾರೆ.

ಕಲಿಕೆಯಲ್ಲಿ ಮುಂದೆ ಇರುವ ಫಾತಿಮತ್‌, ವೈದ್ಯೆಯಾಗುವ ಕನಸು ಕಂಡಿದ್ದಾರೆ. ‘ವೈದ್ಯೆಯಾಗಿ ಬಡವರಿಗೆ ಮತ್ತು ಅಂಗವಿಲರಿಗೆ ಉಚಿತ ಚಿಕಿತ್ಸೆ ನೀಡಬೇಕೆಂಬುದು ನನ್ನ ಮಹದಾಸೆ’ ಎನ್ನುವ ಫಾತಿಮತ್‌ ‘ಸಹಪಾಠಿಗಳ ಸಹಕಾರಕ್ಕೆ ಹೇಗೆ ಕೃತಜ್ಞತೆ ಸಲ್ಲಿಸಬೇಕೆಂಬುದು ತಿಳಿಯುತ್ತಿಲ್ಲ’ ಎಂದರು.

ಫಾತಿಮತ್ ನೆರವಿಗೆ ಅನೇಕರಲ್ಲಿ ಮನವಿ ಮಾಡಿದ್ದೆ. ನಾಸಿರ್ ಅವರು ಆಟೊ ಬಾಡಿಗೆಯ ವ್ಯವಸ್ಥೆ ಮಾಡಿದ್ದಾರೆ‌. ಇನ್ನಷ್ಟು ನೆರವಿಗೆ ಸಮಾಜ ಮುಂದಾಗಬೇಕು.

–ಮೀನಾ ಗಾಂವ್ಕರ್, –ಕೊಣಾಜೆ ಶಾಲೆಯಿಂದ ವರ್ಗವಾದ ಮುಖ್ಯ ಶಿಕ್ಷಕಿ

ಫಾತಿಮತ್ ನಿಶಾ ಅನೇಕ ವರ್ಷಗಳಿಂದ ತರಗತಿಗೆ ಟಾಪರ್. ಸಮಾಜ ಸಹಕರಿಸಿ ಓದಿಗೆ ನೆರವಾದರೆ ಆಕೆ ಮುಂದೊಂದು ದಿನ ಸಾಧಕಿಯಾಗುವುದರಲ್ಲಿ ಸಂದೇಹವಿಲ್ಲ.

–ರಾಜೀವ್ ನಾಯ್ಕ್, ಪ್ರಭಾರ ಮುಖ್ಯಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.