ಮಂಗಳೂರು: ಪದವೀಧರರಾಗುವ ಮೂಲಕ ಜೀವನದ ಒಂದು ಕನಸು ನನಸಾಗಿದೆ. ಆದರೆ ಇನ್ನಷ್ಟು ಕನಸುಗಳನ್ನು ಕಾಣಬೇಕು. ಅವುಗಳನ್ನು ಸಾಧಿಸಬೇಕು. ವೈದ್ಯಕೀಯ ವೃತ್ತಿಗೆ ಇರುವ ಘನತೆ ಮತ್ತು ಗೌರವಗಳನ್ನು ಯಾವತ್ತೂ ಕಾಯ್ದುಕೊಂಡು ಬರಬೇಕು ಎಂದು ಬೆಂಗಳೂರಿನ ಸೇಂಟ್ ಜಾನ್ಸ್ ನ್ಯಾಶನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್‌ನ ನಿರ್ದೇಶಕ ರೆ.ಡಾ. ಪಾವ್ಲ್ ಪರತಾಝಂ ಹೇಳಿದರು.
ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್ ಹಾಗೂ ಕಾಲೇಜ್ ಆಫ್ ಸ್ಪೀಚ್ ಆಂಡ್ ಹಿಯರಿಂಗ್ ಸಂಸ್ಥೆಗಳ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಸಂಸ್ಥೆಗಳ ಆಡಳಿತ ಮಂಡಳಿ ಅಧ್ಯಕ್ಷ, ಬಿಷಪ್ ರೆ.ಡಾ.ಪೀಟರ್ ಪಾವ್ಲ್ ಸಲ್ಡಾನ ಮಾತನಾಡಿ, ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಕಠಿಣ ಪರಿಶ್ರಮ ಅಗತ್ಯ. ಮಾನವ ಜೀವ ಅಮೂಲ್ಯವಾಗಿದ್ದು, ಮಂಗಳೂರು ಧರ್ಮ ಪ್ರಾಂತವು ಈ ವರ್ಷ ಜೀವ ಮತ್ತು ಮರ ಗಿಡಗಳನ್ನು ಒಳಗೊಂಡ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತಿದೆ. ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಪದವೀಧರರು ಮಾನವ ಜೀವದ ಮೌಲ್ಯವನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಪದವೀಧರ ವಿದ್ಯಾರ್ಥಿಗಳ ಪರವಾಗಿ ಎಂಬಿಬಿಎಸ್ ಪದವೀಧರೆ ಡಾ.ಝೀನಾ ಡಿಸೋಜ ಮಾತನಾಡಿದರು. ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕ ಫಾ.ರಿಚಾರ್ಡ್ ಎ. ಕುವೆಲ್ಲೊ ಸ್ವಾಗತಿಸಿದರು. ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಫಾ.ಅಜಿತ್ ಮಿನೇಜಸ್ ವಂದಿಸಿದರು. ಮೆಡಿಕಲ್ ಕಾಲೇಜು ಮತ್ತು ಅಲೈಡ್ ಹೆಲ್ತ್ ಸೈನ್ಸ್ ಡೀನ್ ಡಾ.ಜಯಪ್ರಕಾಶ್ ಆಳ್ವ, ಸ್ಪೀಚ್ ಆಂಡ್ ಹಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಅಖಿಲೇಶ್ ಪಿ.ಎಂ. ಅವರು ತಮ್ಮ ಶಿಕ್ಷಣ ಸಂಸ್ಥೆಗಳ ವರದಿ ಮಂಡಿಸಿದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಫಾ.ರುಡಾಲ್ಫ್ ರವಿ ಡೆಸಾ, ಫಾ.ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ಡಾ.ಉದಯ ಕುಮಾರ್, ಡಾ.ಪದ್ಮಜಾ ವೇದಿಕೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.