ADVERTISEMENT

ಆಹಾರೋದ್ಯಮ; ಮಹಿಳೆಯರಿಗೆ ಆಶಾಕಿರಣ

40 ಮಹಿಳೆಯರಿಗೆ ಎಫ್‌ಎಸ್‌ಎಸ್‌ಐ ಪ್ರಮಾಣಪತ್ರ ವಿತರಿಸಿದ ಸಿಇಒ ಡಾ. ಕುಮಾರ್

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2022, 5:32 IST
Last Updated 15 ಸೆಪ್ಟೆಂಬರ್ 2022, 5:32 IST
ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್ ಬಿಡುಗಡೆ ಮಾಡಿದರು
ಗ್ರಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್ ಬಿಡುಗಡೆ ಮಾಡಿದರು   

ಮಂಗಳೂರು: ಗುಣಮಟ್ಟದ ಆಹಾರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಸುತ್ತದೆ. ಆಹಾರೋದ್ಯಮಗಳಲ್ಲಿ ಮಹಿಳೆಯರು ಸಕ್ರಿಯರಾದರೆ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.

ಜಿಲ್ಲಾ ಪಂಚಾಯಿತಿ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಸಂಜೀವಿನಿ ರಾಷ್ಟ್ರೀಯ ಗಾಮೀಣ ಜೀವನೋಪಾಯ ಅಭಿಯಾನ ಸಹಯೋಗದಲ್ಲಿ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರಿಗೆ ಎಫ್.ಎಸ್.ಎಸ್.ಐ, ಜಿ.ಎಸ್.ಟಿ. ಮುದ್ರಾ ಮತ್ತು ಪಿ.ಎಂ.ಎಫ್.ಎಂ.ಇ ವತಿಯಿಂದ ಬುಧವಾರ ಇಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಒಟ್ಟು ಗ್ರಾಮ ಪಂಚಾಯಿತಿ ಮಟ್ಟದ 223 ಹಾಗೂ ವಾರ್ಡ್ ಹಂತದ 886 ಒಕ್ಕೂಟಗಳಿವೆ. 5,806 ಸ್ವಸಹಾಯ ಗುಂಪುಗಳಿದ್ದು, ಅವುಗಳಲ್ಲಿ 67,419 ಸ್ವಸಹಾಯ ಗುಂಪಿನ ಮಹಿಳೆಯರಿದ್ದಾರೆ. 125 ರೈತ ಉತ್ಪಾದಕ ಗುಂಪುಗಳಿದ್ದು, ಪ್ರತಿ ಗುಂಪಿಗೆ ₹1.50 ಲಕ್ಷ ಅನುದಾನ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ವನಧನ ವಿಕಾಸ ಮೂರು ಕೇಂದ್ರಗಳಿದ್ದು, ಅರಣ್ಯ ಉತ್ಪನ್ನಗಳ ಕ್ರೋಡೀಕರಣ, ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಜೋಡಣೆ ಮೂಲಕ ಉತ್ಪನ್ನಗಳು ಮಾರಾಟವಾಗುತ್ತಿವೆ. ಸ್ವಚ್ಛ ಭಾರತ ಅಭಿಯಾನದ ಮೂಲಕ 162 ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸಂಜೀವಿನಿಯ ಮಹಿಳೆಯರು ನಿರ್ವಹಿಸುತ್ತಿದ್ದಾರೆ ಎಂದರು.

ADVERTISEMENT

ಯೋಜನಾ ನಿರ್ದೇಶಕ ಎಚ್.ಆರ್. ನಾಯ್ಕ್ ಮಾಹಿತಿ ನೀಡಿ, ‘ಜಿಲ್ಲೆಯಲ್ಲಿ 134 ಮಹಿಳೆಯರು ಸ್ವಚ್ಛ ವಾಹಿನಿ ನಡೆಸಲು ಚಾಲನಾ ತರಬೇತಿ ಪಡೆದಿದ್ದಾರೆ. ಪ್ರಧಾನ ಮಂತ್ರಿ ಕಿರುಆಹಾರ ಉದ್ಯಮಗಳ ನಿಯಮಬದ್ಧಗೊಳಿಸುವ ಯೋಜನೆಯಲ್ಲಿ ಫಲಾನುಭವಿಗಳಿಗೆ ₹ 4,000 ಮೂಲಧನ ನೀಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 2,820 ಫಲಾನುಭವಿಗಳು ಪಿ.ಎಂ.ಎಫ್.ಎಂ.ಇ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ’ ಎಂದರು.

ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಎಫ್.ಎಸ್.ಎಸ್.ಎ.ಐ. ಪ್ರಮಾಣಪತ್ರವನ್ನು ಡಾ. ಕುಮಾರ್ ವಿತರಿಸಿದರು. ಸಹಾಯಕ ಯೋಜನಾಧಿಕಾರಿ ಉಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.