ಸುಬ್ರಹ್ಮಣ್ಯ: ಇಲ್ಲಿನ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ನಡೆದ 55ನೇ ಗಣೇಶೋತ್ಸವವು ಶೋಭಾಯಾತ್ರೆ ಮೂಲಕ ಶುಕ್ರವಾರ ಸಂಪನ್ನಗೊಂಡಿತು.
ಗಣೇಶೋತ್ಸವದ ಅಂಗವಾಗಿ ವಿವಿಧ ವೈದಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿದವು. ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಗಣೇಶ ಮೂರ್ತಿಯನ್ನು ಕುಮಾರಧಾರದಲ್ಲಿ ಜಲಸ್ಥಂಭನಗೊಳಿಸಲಾಯಿತು.
ಸಹಸ್ರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯ ಉದ್ದಕ್ಕೂ ಭಕ್ತರು ಅಲ್ಲಲ್ಲಿ ಶ್ರೀ ದೇವರಿಗೆ ಹಣ್ಣುಕಾಯಿ ಮಂಗಳಾರತಿ ನೀಡಿದರು.
ಆಕರ್ಷಕ ರಥದಲ್ಲಿ ಗಣಪತಿಯ ಶೋಭಾಯಾತ್ರೆ ನೆರವೇರಿತು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತರಿಗೆ ಉಪಹಾರ, ಪಾನಕ ವಿತರಿಸಲಾಯಿತು.
ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಸ್ತಬ್ದಚಿತ್ರಗಳು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು. ಸುಬ್ರಹ್ಮಣ್ಯದ ಸ್ಕಂದಶ್ರೀ ಯುವ ಮಲೆಕುಡಿಯರ ಸಂಘದಿಂದ ಭಾಸ್ಕರ್ ಅರ್ಗಡಿ ನೇತೃತ್ವದಲ್ಲಿ ಆಪರೇಷನ್ ಸಿಂಧೂರ, ರಾಧಾಕೃಷ್ಣ ಆರ್ವರ ನೇತೃತ್ವದಲ್ಲಿ ಕೋಟಿಚೆನ್ನಯ ಸ್ತಬ್ದಚಿತ್ರ ಆಕರ್ಷಣೀಯವಾಗಿತ್ತು. ಕುಣಿತ ಭಜನೆ, ವಿಶೇಷ ಬ್ಯಾಂಡ್ ವಾದನ, ವೈಯಲಿನ್ ಸಮ್ಮಿಲನದಲ್ಲಿ ಚೆಂಡೆ ವಾದನ ಮೆರವಣಿಗೆಯಲ್ಲಿತ್ತು.
ಶಾಂತಿ ಸುವ್ಯವಸ್ಥೆ ಕಾಪಾಡಲು ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್ ಕೆ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ಯಜ್ಞೇಶ್ ಆಚಾರ್, ನಿಕಟಪೂರ್ವ ಅಧ್ಯಕ್ಷ ದಿನೇಶ್ ಮೊಗ್ರ, ಟ್ರಸ್ಟ್ ಅಧ್ಯಕ್ಷ ಎ.ವೆಂಕಟರಾಜ್ ಸೇರಿದಂತೆ ಸಮಿತಿ ಪದಾಧಿಕಾರಿಗಳು, ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಡಾ.ರಘು, ಅಜಿತ್ ಕುಮಾರ್ ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.